ಶಾಸಕ ಜಮೀರ್‌ ವಿರುದ್ಧ ಒಕ್ಕಲಿಗ ನಾಯಕರು ಗರಂ..!

By Kannadaprabha NewsFirst Published Jul 25, 2022, 4:30 AM IST
Highlights

ಒಕ್ಕಲಿಗರಿಗಿಂತ ಮುಸ್ಲಿಂ ಸಮಾಜ ದೊಡ್ಡದು ಎಂದಿದ್ದಕ್ಕೆ ಮಠಾಧೀಶರ ಅಸಮಾಧಾನ

ಬೆಂಗಳೂರು(ಜು.25):  ‘ಒಕ್ಕಲಿಗ ಸಮುದಾಯಕ್ಕಿಂತ ನಮ್ಮ ಸಮಾಜ ದೊಡ್ಡದು’ ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಒಕ್ಕಲಿಗ ಸಮುದಾಯದ ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಪರಿಣಾಮವಾಗಿ ಜಮೀರ್‌ ವಿರುದ್ಧ ಬಹಿರಂಗ ಹೇಳಿಕೆ ನೀಡುವಂತೆ ಒಕ್ಕಲಿಗ ಮುಖಂಡರಿಗೆ ಫರ್ಮಾನು ಹೊರಬಿದ್ದಿದೆ. ಈ ಫರ್ಮಾನಿನ ಬೆನ್ನಲ್ಲೇ ಖುದ್ದು ಜಮೀರ್‌ ಅಹಮದ್‌ ಆಪ್ತ ಮಿತ್ರ ಮಾಜಿ ಸಚಿವ ಚೆಲುವರಾಯಸ್ವಾಮಿ, ಸಚಿವ ಆರ್‌. ಅಶೋಕ್‌ ಸೇರಿದಂತೆ ಪಕ್ಷಭೇದ ಮರೆತು ಒಕ್ಕಲಿಗ ಸಮುದಾಯದ ನಾಯಕರು ಜಮೀರ್‌ ಹೇಳಿಕೆ ವಿರುದ್ಧ ಬಹಿರಂಗ ಟೀಕೆ-ಟಿಪ್ಪಣಿ ಆರಂಭಿಸಿದ್ದಾರೆ.

‘ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುವುದೇ ಬೇರೆ ವಿಚಾರ. ತನಗೆ ಸ್ಥಾನಮಾನ ಬೇಕು ಎನ್ನುವುದು ಬೇರೆ ವಿಚಾರ. ಆದರೆ, ಒಕ್ಕಲಿಗ ಸಮುದಾಯಕ್ಕಿಂತ ತಮ್ಮ ಸಮಾಜ ದೊಡ್ಡದು ಎಂದು ಜಮೀರ್‌ ಹೇಳಿದ್ದು ತಪ್ಪು. ಒಕ್ಕಲಿಗ ಸಮುದಾಯದ ಬಗ್ಗೆ ಯಾರೂ ಈ ರೀತಿ ಮಾತನಾಡಿರಲಿಲ್ಲ. ಇದನ್ನು ಮುಂದುವರೆಸಬಾರದು’ ಎಂದು ಚೆಲುವರಾಯಸ್ವಾಮಿ ತಾಕೀತು ಮಾಡಿದ್ದಾರೆ.

ಶಾಸಕ ಜಮೀರ್ ಅಹಮದ್ ಕ್ಷಮೆ ಯಾಚಿಸಬೇಕೆಂದು ಆಗ್ರಹ

ಸಚಿವ ಆರ್‌. ಅಶೋಕ್‌ ಕೂಡ ಹರಿಹಾಯ್ದಿದ್ದು, ‘ಪದೇ ಪದೇ ಒಕ್ಕಲಿಗ ಜಾತಿ ವಿಚಾರ ಬೀದಿಗೆ ತಂದು ರಂಪಾಟ ಮಾಡುತ್ತಿರುವುದರಿಂದ ನಮ್ಮ ಮಠಾಧೀಶರಿಗೆ ನೋವಾಗಿದೆ. ರಾಜಕೀಯಕ್ಕಾಗಿ ಒಕ್ಕಲಿಗ ಸಮುದಾಯ ದುರ್ಬಳಕೆ ಮಾಡಲಾಗುತ್ತಿದೆ. ಇದು ಮುಂದುವರೆದರೆ ಜಮೀರ್‌ ಅಹಮದ್‌ ಹಾಗೂ ಡಿ.ಕೆ. ಶಿವಕುಮಾರ್‌ಗೆ ಒಳ್ಳೆಯದಾಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಮೌನದ ಬಗ್ಗೆ ಶ್ರೀಗಳ ಅಸಮಾಧಾನ:

ಮೂಲಗಳ ಪ್ರಕಾರ, ಜಮೀರ್‌ ಅವರು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದರೂ ಸಮುದಾಯದ ಯಾರೊಬ್ಬ ನಾಯಕರೂ ಆಕ್ಷೇಪ ವ್ಯಕ್ತಪಡಿಸದ ಬಗ್ಗೆ ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರು ಅಸಮಾಧಾನಗೊಂಡಿದ್ದಾರೆ. ಅವರು ಎಲ್ಲ ಪಕ್ಷಗಳ ಒಕ್ಕಲಿಗ ನಾಯಕರಿಗೆ ಕರೆ ಮಾಡಿ, ಈ ವಿಚಾರದಲ್ಲಿ ಮೌನ ವಹಿಸಿರುವುದನ್ನು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.

ಚೆಲುವರಾಯಸ್ವಾಮಿ ವಾಗ್ದಾಳಿ:

ಸ್ವಾಮೀಜಿ ಸೂಚನೆ ಬೆನ್ನಲ್ಲೇ ಚೆಲುವರಾಯಸ್ವಾಮಿ ಅವರು ಜಮೀರ್‌ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದರು. ‘ಜಮೀರ್‌ ಅವರು ತಾನು ಮುಖ್ಯಮಂತ್ರಿ ಆಗಬೇಕು ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಹೇಳುವುದು ಬೇರೆ. ಅದೇ ಒಕ್ಕಲಿಗ ಸಮಾಜಕ್ಕಿಂತ ನಮ್ಮ ಸಮಾಜ ಹೆಚ್ಚಿದೆ ಎಂದು ಹೇಳುವುದು ಬೇರೆ. ಸಮಾಜವನ್ನು ಹೆಸರಿಸಿ ಮಾತನಾಡಿರುವುದು ತಪ್ಪು, ಇದನ್ನು ಮುಂದುವರೆಸಬೇಡ ಎಂದು ಹೇಳುತ್ತೇನೆ’ ಎಂದು ಹೇಳಿದ್ದಾರೆ.
‘ಜಮೀರ್‌ ನನಗೆ ಆತ್ಮೀಯ ಸ್ನೇಹಿತ. ಈ ರೀತಿ ಮಾತನಾಡಬಾರದು ಎಂದು ವೈಯಕ್ತಿಕವಾಗಿ 2-3 ಸಲ ಹೇಳಿದ್ದೇನೆ. ಈಗ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಅವನು ಆರಂಭದಿಂದ ಹೀಗೆ ಇರಲಿಲ್ಲ, ಈಗ ಕೆಲವೊಮ್ಮೆ ಮನಸೋ ಇಚ್ಛೆ ಮಾತನಾಡುತ್ತಿದ್ದಾನೆ. ಒಮ್ಮೆ ಅವನೊಂದಿಗೆ ಕುಳಿತು ಮಾತನಾಡುತ್ತೇನೆ’ ಎಂದರು.

ಡಿಕೆಶಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ: ಶ್ರೀರಾಮಲು ಹೇಳಿದ್ದಿಷ್ಟು

ಒಕ್ಕಲಿಗರು ಚೀಪ್‌ ಅಲ್ಲ- ಅಶೋಕ್‌!:

ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್‌, ‘ಒಕ್ಕಲಿಗರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಒಕ್ಕಲಿಗರೇನು ಅಷ್ಟು ಚೀಪ್‌ ಅಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇನೆ’ ಎಂದರು.
‘ಒಕ್ಕಲಿಗ ಸಮುದಾಯ ಅನ್ನ ಕೊಡುವ ಸಮುದಾಯ. ಕುವೆಂಪು ಹುಟ್ಟಿದ ಸಮುದಾಯ. ಕಳೆದ ಒಂದು ವಾರದಿಂದ ಒಕ್ಕಲಿಗ ಸಮುದಾಯದ ಪರ-ವಿರೋಧ ಚರ್ಚೆಯಿಂದ ನೋವಾಗಿದೆ’ ಎಂದು ಅಶೋಕ್‌ ಹೇಳಿದರು.

ಹೇಳಿಕೆಗೆ ಜಮೀರ್‌ ಬದ್ಧರೇ?

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ ಎಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ. ಅದೇ ತನ್ನ ಸಮುದಾಯವು ಒಕ್ಕಲಿಗರಿಗಿಂತ ದೊಡ್ಡದು ಎನ್ನುವುದಕ್ಕೆ ಬದ್ಧರಿದ್ದಾರಾ? ಅಂತ ಮಾಜಿ ಸಚಿವ ಎನ್‌. ಚೆಲುವರಾಯಸ್ವಾಮಿ ತಿಳಿಸಿದ್ದಾರೆ. 
 

click me!