ಜನೋತ್ಸವ ಸಮಾವೇಶ ಸ್ಥಳದ ಸಿದ್ಧತೆ ಪರಿಶೀಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್
ದೊಡ್ಡಬಳ್ಳಾಪುರ(ಜು.25): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆ ಇದೇ 28ರಂದು ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಬೃಹತ್ ಜನೋತ್ಸವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ತಿಳಿಸಿದರು. ಸಮಾವೇಶ ನಡೆಯುವ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಸಿದ್ದತೆಗಳನ್ನು ಪರಿಶೀಲಿಸಿದ ಬಳಿಕ, ರಘುನಾಥಪುರ ಬಳಿಯ ಎನ್‌ಎಸ್ ಕನ್ವೆಂಷನ್ ಹಾಲ್‌ನಲ್ಲಿ ನಡೆದ ಸ್ಥಳೀಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಸಮಾವೇಶದಲ್ಲಿ ಸರ್ಕಾರದ ಸಾಧನೆಗಳ ಅನಾವರಣಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜನೋತ್ಸವದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಸೇರಿದಂತೆ ಬೆಂಗಳೂರು ವಿಭಾಗದ ಹಲವು ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದ್ದು, ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಕ್ಷದ ಕಾರ‍್ಯಕರ್ತರು, ಮುಖಂಡರು ಸಮಾವೇಶದ ಯಶಸ್ಸಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಗೆ 150 ಸೀಟು ಸಿಗುತ್ತೆ ಅಂತ ಸಮೀಕ್ಷೆ ಬಂದಿವೆ: ಕಟೀಲ್
ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನ ಸಮಾವೇಶ ಎಂಬ ಶೀರ್ಷಿಕೆಯ ಬದಲು ಜನೋತ್ಸವ ಕಾರ‍್ಯಕ್ರಮವಾಗಿ ಪಕ್ಷ ಈ ಸಮಾವೇಶ ಆಯೋಜಿಸಲಿದೆ. ಜನರ ಏಳಿಗೆಗಾಗಿ, ಜನರಿಗೋಸ್ಕರ ಇರುವ ಸರ್ಕಾರ ಎನ್ನುವುದರ ಸಾಂಕೇತಿಕ ಅರ್ಥ ಬರುವಂತೆ ಸಾಧನಾ ಸಮಾವೇಶ ಬದಲಿಗೆ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾರ್ಥಕ 1 ವರ್ಷದ ಹಿನ್ನೆಲೆ ಆಯೋಜಿಸಲಾಗುತ್ತಿರುವ ಮೊದಲು ಸಾಧನ ಸಮಾವೇಶ ಇದಾಗಿದೆ ಎಂದು ಅವರು ವಿವರಿಸಿದರು.
ಕಾರ‍್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಪಕ್ಷದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಫಲಾನುಭವಿಗಳ ಪ್ರಕೋಷ್ಠ ಜಿಲ್ಲಾಧ್ಯಕ್ಷ ಧೀರಜ್ ಮುನಿರಾಜ್, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಸೇರಿದಂತೆ ಸ್ಥಳೀಯ ಘಟಕಗಳ ಮುಖಂಡರು, ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಒಕ್ಕಲಿಗ ಸಮುದಾಯ ಯಾರ ಜಹಗೀರೂ ಅಲ್ಲ: ಡಾ.ಕೆ.ಸುಧಾಕರ್
ರಾಜ್ಯದಲ್ಲಿ ಮುನ್ನೆಲೆಗೆ ಬಂದಿರುವ ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿ ವಿಚಾರದ ಬಗ್ಗೆ ಆದಿಚುಂಚನಗಿರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಡಾ.ಕೆ.ಸುಧಾಕರ್, ಒಕ್ಕಲಿಗರ ಸಮುದಾಯ ಯಾರೊಬ್ಬರ ಜಹಗೀರೂ ಅಲ್ಲ ಎಂದಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ವ್ಯಕ್ತಿಗತ ಸ್ವಾರ್ಥದ ಲಾಭಕ್ಕೆ ಬಳಸಿಕೊಳ್ಳಲು ಈ ಸಮುದಾಯದ ಜನರು ದಡ್ಡರಲ್ಲ. ಯಾರಿಗೆ ಯೋಗ್ಯತೆ, ವ್ಯಕ್ತಿತ್ವ, ನಾಯಕತ್ವ ಮತ್ತು ಸಮುದಾಯವನ್ನು ಕಾಪಾಡುವಂತಹ ನಡವಳಿಕೆ ಇದೆಯೋ ಅಂತಹವರನ್ನು ಜನರು ನಂಬುತ್ತಾರೆ. ಸುಮ್ಮನೆ ಹುದ್ದೆಗಳಲ್ಲಿರುವವರಿಗೆ ಮನ್ನಣೆ ಸಿಗುವುದಿಲ್ಲ ಎಂಬುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ಒಂದು ಸಮುದಾಯದಿಂದ ಯಾರೋ ಒಬ್ಬರು ಮಾತ್ರ ನಾಯಕರಾಗಲ್ಲ, ಸರ್ವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ವ್ಯಕ್ತಿತ್ವ ಇರುವವರು ಮಾತ್ರ ನಾಯಕರಾಗುತ್ತಾರೆ. ಒಂದು ಜಾತಿಯಿಂದ ರಾಜ್ಯದ ನಾಯಕರಾಗಲು ಸಾಧ್ಯವಿಲ್ಲ ಎಂದರು.
ಸಿದ್ದರಾಮೋತ್ಸವಕ್ಕೆ ಬೇಕಿದ್ರೆ ಸಹಕಾರ ನೀಡುತ್ತೇವೆ: ನಳೀನ್ ಕುಮಾರ್ ಕಟೀಲ್
ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ವಿಕೇಂದ್ರೀಕರಣ: ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್ ಪಕ್ಷದಲ್ಲಿ ಈಗ 2 ಗುಂಪುಗಳಿದ್ದು, ಸಿದ್ದರಾಮೋತ್ಸವ ಬಳಿಕ ಕನಿಷ್ಠ 5 ಗುಂಪುಗಳಾಗಿ ಕಾಂಗ್ರೆಸ್ ವಿಕೇಂದ್ರೀಕರಣವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು. ಇಲ್ಲಿನ ಎನ್‌ಎಸ್ ಕನ್ವೆನ್ಷನ್‌ಹಾಲ್‌ನಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ಕಿತ್ತಾಟ ವಿಚಾರ ಹಾಸ್ಯಾಸ್ಪದ. ಕಾಂಗ್ರೆಸ್‌ನಲ್ಲಿ ಇನ್ನೂ ಹುಡುಗಿಯನ್ನೇ ನೋಡಿಲ್ಲ, ಎಂಗೇಜ್ಮೆಂಟ್ ಆಗಿಲ್ಲ, ಮದುವೆ ಆಗಿಲ್ಲ, ಸೀಮಂತ ಆಗಿಲ್ಲ. ಆದರೆ ಆಗಲೇ ಮಗುವಿಗೆ ಸೀಟ್ ಹುಡುಕಲು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್ ಹೀಗೆ ಪಟ್ಟಿದೊಡ್ಡದಿದೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ 7 ದಶಕಗಳಿಂದ ಲೂಟಿ ಹೊಡೆದಿದೆ. ಲೂಟಿಯ ಸಂಪತ್ತು ಎಷ್ಟುಎಂದು ಸಿದ್ದರಾಮೋತ್ಸವದಲ್ಲಿ, ಬಂಡೆಯ ಅರಮನೆಯಲ್ಲಿ ಕಾಣಿಸಲಿದೆ. ರಮೇಶ್‌ಕುಮಾರ್ ಹೇಳಿಕೆ ಮೂಲಕ ಆ ಪಕ್ಷದ ನಾಯಕರ ಮುಖವಾಡ ಕಳಚಿ ಬಿದ್ದಿದೆ ಎಂದು ಟೀಕಿಸಿದರು.