Latest Videos

ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ನಿಂದ ತೈಲ ಬೆಲೆ ಹೆಚ್ಚಳ: ವಿಜಯೇಂದ್ರ

By Govindaraj SFirst Published Jun 16, 2024, 5:05 AM IST
Highlights

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಆದೇಶ ಹಿಂಪಡೆಯದಿದ್ದರೆ ಸೋಮವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದರು. 

ಬೆಂಗಳೂರು (ಜೂ.16): ಗ್ಯಾರಂಟಿಗಳನ್ನು ಈಡೇರಿಸಲಾಗದೆ ಸಂದಿಗ್ಧ ಸ್ಥಿತಿಯಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ದರವನ್ನು ಹೆಚ್ಚಳ ಮಾಡಿದೆ. ಜತೆಗೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಕಾರಣ ಬೆಲೆ ಹೆಚ್ಚಿಸುವ ಮೂಲಕ ಜನತೆಯ ವಿರುದ್ಧ ಸೇಡು ತೀರಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಆದೇಶ ಹಿಂಪಡೆಯದಿದ್ದರೆ ಸೋಮವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರ ಮೇಲೆ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿಗಳು ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಒಂದೆಡೆ ಸೋಲಿನ ಹತಾಶೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಭಂಡ ಸರ್ಕಾರ ಇದನ್ನು ಒಪ್ಪಿಕೊಳ್ಳದೆ, ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಹೇಳುತ್ತಿದೆ. 

ಆದರೆ ಪೆಟ್ರೋಲ್, ಡೀಸೆಲ್ ದರ ಏರಿಸಿರುವುದು ಹಣಕಾಸಿನ ಪರಿಸ್ಥಿತಿ ಹದಗೆಟ್ಟದ್ದನ್ನು ತಿಳಿಸುತ್ತದೆ. ಅಧಿಕಾರಿಗಳು, ಸಿಬ್ಬಂದಿಗೆ ವೇತನ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿರುವ ಕಾರಣ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದೆ ಎಂದು ಟೀಕಿಸಿದರು. ಗ್ಯಾರಂಟಿಯಿಂದ 18-20 ಸಂಸದರ ಸ್ಥಾನಗಳನ್ನು ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷ ಇತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವ ಸಿಟ್ಟನ್ನು ರಾಜ್ಯದ ಜನರ ಮೇಲೆ ತೋರಿಸುತ್ತಿದ್ದಾರೆ. ಹಿಂದೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ವಿದ್ಯುತ್ ದರವನ್ನೂ ಸಹ ಹೆಚ್ಚಳ ಮಾಡಿದ್ದರು. ಒಟ್ಟಾರೆ ಸರ್ಕಾರ ಜನತೆಯ ಮೇಲೆ ಬರೆ ಎಳೆಯುತ್ತಿದೆ ಎಂದರು.

ಪ್ರವಾಸೋದ್ಯಮಕ್ಕೆ ಹೊಸ ನೀತಿ, ಉದ್ದಿಮೆಗಳನ್ನು ಜಿಎಸ್‌ಟಿ ಕೊಲ್ಲುತ್ತಿದೆ: ಡಿಕೆಶಿ

ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯಲು ಹೊರಟಿದೆ. ಜನರನ್ನು ಎಷ್ಟೇ ಸುಲಿಗೆ ಮಾಡಿದರೂ ರಾಜಸ್ವ ಸಂಗ್ರಹ ಕುಸಿಯುತ್ತಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರ ಈಗ ಧೂಮಕೇತುವಿನ ರೀತಿ ಜನಸಾಮಾನ್ಯರ ಮೇಲೆ ಎರಗಿದೆ.
-ಸುನಿಲ್‌ ಕುಮಾರ್‌,ಮಾಜಿ ಸಚಿವ

click me!