
ಬೆಂಗಳೂರು (ಜು.01): ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳು, ವಿದ್ಯಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ರಾಜ್ಯದಲ್ಲಿ ಬಿಜೆಪಿ ಉಳಿಸಿ ಅಭಿಯಾನ ಮಾಡುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. ನಾನು ಈ ರಾಜ್ಯದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೇ ವಿನಃ ಪಕ್ಷದ ವಿರುದ್ಧವಾಗಲಿ, ನಮ್ಮ ರಾಷ್ಟ್ರೀಯ ನಾಯಕರ ವಿರುದ್ಧವಾಗಲಿ ಏನೂ ಮಾತನಾಡಿಲ್ಲ. ಈ ಹಿಂದೆ ಬಹಳಷ್ಟು ಜನ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದಾರೆ.
ಈಗ ನನ್ನೊಬ್ಬನಿಗೆ ಯಾಕೆ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದವರಿಗೆ ರಾಜಮರ್ಯಾದೆ ಕೊಟ್ಟು, ನನಗೇಕೆ ನೋಟಿಸ್ ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನನಗೆ ನೋಟಿಸ್ ಕೊಟ್ಟ ಕಾರಣ ನಾನು ಶುಕ್ರವಾರ ಕರೆಯಲಾಗಿದ್ದ ಪಕ್ಷದ ನಾಯಕರ ಸಭೆಗೆ ಹೋಗಿಲ್ಲ. ಅನೇಕ ತಪ್ಪು ನಿರ್ಧಾರಗಳಿಂದ ಬಿಜೆಪಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ.
ಪ್ರಧಾನಿ ಮೋದಿ ಪರಿಶ್ರಮದಿಂದ ಭಾರತಕ್ಕೆ ಜಾಗತಿಕ ಅಗ್ರ ಸ್ಥಾನ: ಸಂಸದ ಅಣ್ಣಾಸಾಹೇಬ ಜೊಲ್ಲೆ
ಹಾಗಾಗಿ ಆ ಕೆಲ ವ್ಯವಸ್ಥೆ ಸರಿಪಡಿಸಿಕೊಳ್ಳಿ ಎಂದಷ್ಟೆ ಹೇಳಿದ್ದೇನೆ. ಇದರಲ್ಲಿ ನನ್ನ ವೈಯಕ್ತಿಕ ಹೇಳಿಕೆ ಯಾವುದೂ ಇಲ್ಲ. ನಾನು ಯಡಿಯೂರಪ್ಪ ಅವರ ಮೌತ್ ಪೀಸೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಮಾತಿಗೆ ಈಗಾಗಲೇ ರಾಜ್ಯದ ಬಹಳಷ್ಟುಜನ ಮಾಜಿ ಸಚಿವರು, ಹಾಲಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸಹಮತ ವ್ಯಕ್ತಪಡಿಸಿದ್ದಾರೆ. ನೀವು ಮಾತನಾಡುವುದು ಸರಿ ಎಂದು ಹೇಳಿದ್ದಾರೆ. ಅವರಾರಯರ ಹೆಸರನ್ನೂ ಬಹಿರಂಗಪಡಿಸಲ್ಲ ಎಂದು ಹೇಳಿದ್ದಾರೆ.
ರೇಣುಕಾಚಾರ‍್ಯಗೆ ಬಿಜೆಪಿ ನೋಟಿಸ್: ಪಕ್ಷದ ಮುಖಂಡರ ವಿರುದ್ಧ ಟೀಕಾಪ್ರಹಾರ ನಡೆಸಿರುವ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ಕಾರಣ ಕೇಳಿ ಬಿಜೆಪಿ ನೋಟಿಸ್ ಜಾರಿ ಮಾಡಿದೆ. ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಪಕ್ಷದ ವಿರೋಧಿ ಹೇಳಿಕೆ ನೀಡಿರುವ ಕಾರಣ ತಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಒಂದು ವಾರದೊಳಗಾಗಿ ಲಿಖಿತ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ.
ಕೇಂದ್ರದಿಂದ ಅಕ್ಕಿ ಕೊಡದಿದ್ದರೂ 5 ಕೆಜಿ ಅಕ್ಕಿ, ರೂ.170 ಕೊಡುತ್ತೇವೆ: ಶಾಸಕ ಲಕ್ಷ್ಮಣ ಸವದಿ
ಪಕ್ಷವು ಹಲವು ಬಾರಿ ತಿಳಿ ಹೇಳಿದರೂ ಪದೇ ಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಯಾವ ಕಾರಣಕ್ಕಾಗಿ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.