ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೂ ಮುನ್ನ ಬ್ಲಾಕ್ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯುತ್ತೇವೆ. ಟಿಕೆಟ್ ಕೋರಿ ಪಕ್ಷದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಕಳುಹಿಸಿ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ (ಡಿ.19): ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೂ ಮುನ್ನ ಬ್ಲಾಕ್ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯುತ್ತೇವೆ. ಟಿಕೆಟ್ ಕೋರಿ ಪಕ್ಷದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಕಳುಹಿಸಿ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜತೆಗೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ಘೋಷಣೆ ಮಾಡಿದರೆ ಅಂಥವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ರಾತ್ರಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ದೇಶದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮ ಗಾಂಧೀಜಿ ಅವರು ಆಯ್ಕೆಯಾದ ಬೆಳಗಾವಿಯಲ್ಲಿ ಮೊದಲ ಚುನಾವಣಾ ಸಮಿತಿ ಸಭೆ ನಡೆಸಲಾಗಿದೆ. ಇದೊಂದು ಇತಿಹಾಸ. ಮುಂಬರುವ ಚುನಾವಣೆಗೆ ಟಿಕೆಟ್ ಕೋರಿ ಸುಮಾರು 1,350 ಅರ್ಜಿಗಳು ಬಂದಿವೆ. ನಾವು ಅಭ್ಯರ್ಥಿ ಆಯ್ಕೆ ಮಾಡುವ ಮುನ್ನ ಬ್ಲಾಕ್ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯುತ್ತೇವೆ. ಬಂದಿರುವ ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಕಳುಹಿಸಿ ಕೊಡುತ್ತೇವೆ. ಅವರು ಡಿ.31ರೊಳಗೆ ಆ ಪಟ್ಟಿಪರಿಷ್ಕರಿಸಿ ಕೊಡಬೇಕು.
ಸಿದ್ದರಾಮಯ್ಯ, ನನ್ನ ಮಧ್ಯೆ ಜಗಳ ಶುದ್ಧ ಸುಳ್ಳು: ಡಿ.ಕೆ.ಶಿವಕುಮಾರ್
ಬಳಿಕ ಮಾನದಂಡದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜ.15 ರೊಳಗೆ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲಾಗುವುದು ಎಂದರು. ಜ.5ರಂದು ರಾಜ್ಯಮಟ್ಟದ ಚುನಾವಣೆ ಸಮಿತಿ ಮತ್ತೆ ಸಭೆ ನಡೆಸಲಿದೆ. ಆದಷ್ಟು ಶೀಘ್ರ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಪಕ್ಷದ ಆಧಾರ ಸ್ತಂಭವಾಗಿರುವ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಘಟಕಗಳ ಮುಖಂಡರ ಜೊತೆ ಚರ್ಚಿಸಿ ಅಭಿಪ್ರಾಯ ಪಡೆಯಲಾಗುವುದು.
ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಧ್ವನಿ ಪಕ್ಷದ ಧ್ವನಿಯಾಗಬೇಕು ಎಂಬುದು ಈ ಸಮಿತಿಯ ತೀರ್ಮಾನ. ಹೀಗಾಗಿ ಈವರೆಗೂ ಬಂದಿರುವ ಅರ್ಜಿಗಳನ್ನು ಆಯಾ ಜಿಲ್ಲಾ ಕಾಂಗ್ರೆಸ್‌ಗೆ ಕಳುಹಿಸಿಕೊಡುತ್ತೇವೆ. ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಬ್ಲಾಕ್ ಮಟ್ಟದ ನಾಯಕರನ್ನು ಕರೆಸಿ ಚರ್ಚಿಸಲಾಗುವುದು. ರಾಜ್ಯಮಟ್ಟದ ಚುನಾವಣಾ ಸಮಿತಿಯಿಂದ ಇಬ್ಬರು ಸದಸ್ಯರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಲಾಗುವುದು. ಪಕ್ಷದ 5 ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಚುನಾವಣಾ ಸಮಿತಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಎಲ್ಲರೂ ಸೇರಿ ಚರ್ಚೆ ಮಾಡುತ್ತಾರೆ. ಆದಷ್ಟುಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಸೇರಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
1ರಿಂದ 3 ಹೆಸರು ಕಳುಹಿಸಲು ಸೂಚನೆ: ಪ್ರತಿ ಕ್ಷೇತ್ರಗಳಿಂದ 1 ರಿಂದ 3 ಆಕಾಂಕ್ಷಿಗಳ ಹೆಸರನ್ನು ಪರಿಷ್ಕರಿಸಿ ಕೆಪಿಸಿಸಿಗೆ ಕಳುಹಿಸುವಂತೆ ನಾವು ಸೂಚನೆ ನೀಡಿದ್ದೇವೆ. ಒತ್ತಡ ಹೆಚ್ಚಾಗಿದ್ದ ಸಂದರ್ಭದಲ್ಲಿ ಅಂಥ ಕ್ಷೇತ್ರಗಳ ವಿಚಾರವನ್ನು ರಾಜ್ಯಮಟ್ಟದಲ್ಲಿ ನಾವೂ ಕೂತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದ ಅವರು, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ಡಿ.31ರ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು. ಅರ್ಜಿ ಹಾಕಿರುವವರ ಜೊತೆಗೆ ಅರ್ಜಿ ಹಾಕದವರ ಹೆಸರನ್ನು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ನಾವು ಯಾರೆಲ್ಲ ಅರ್ಜಿ ಹಾಕಿದ್ದಾರೆ ಅವರ ಹೆಸರನ್ನು ಮಾತ್ರ ಪರಿಗಣಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅಭ್ಯರ್ಥಿ ಸಿಕ್ಕರೆ ಅವರನ್ನು ಕಣಕ್ಕಿಳಿಸುವ ಅವಕಾಶ ಮುಕ್ತವಾಗಿಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
Karnataka Politics: ಒಕ್ಕಲಿಗರ ಮತ ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ
ಸಿದ್ದರಾಮಯ್ಯಗೆ ಟಾಂಗ್: ಮೈಸೂರಿನಲ್ಲಿ ಶಾಸಕ ಜಮೀರ್ ಅಹ್ಮದ್ ಅವರು ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದಾರಲ್ವಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೂ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡುವ ಅಧಿಕಾರ ಇಲ್ಲ. ಪಕ್ಷದ ನಿಯಮ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂಲಕ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ಪರೋಕ್ಷ ಸಂದೇಶ ರವಾನಿಸಿದರು. ಈ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಶಿವರಾಜ ತಂಗಡಗಿ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತಿತರರು ಉಪಸ್ಥಿತರಿದ್ದರು.