ಬಿಜೆಪಿ ಗೆಲುವು ಕಾಲದ ಅವಶ್ಯಕತೆ: ಬಿ.ಎಲ್‌.ಸಂತೋಷ್‌

By Govindaraj SFirst Published Dec 19, 2022, 2:00 AM IST
Highlights

ಗಲಭೆಕೋರರ ಪರವಾಗಿರುವ ಪಕ್ಷ ಒಂದು ಕಡೆ, ಕುಟುಂಬದಲ್ಲೇ ಕ್ಷೇತ್ರ ತ್ಯಾಗ ಮಾಡಿಕೊಂಡಿರುವ ಪಕ್ಷ ಇನ್ನೊಂದು ಕಡೆ ಇರುವಾಗ ರಾಜ್ಯದ ಅಭಿವೃದ್ಧಿಗೆ ವೇಗ ಕೊಟ್ಟಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಕಾಲದ ಅವಶ್ಯಕತೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಪ್ರತಿಪಾದಿಸಿದ್ದಾರೆ. 

ಬೆಂಗಳೂರು (ಡಿ.19): ಗಲಭೆಕೋರರ ಪರವಾಗಿರುವ ಪಕ್ಷ ಒಂದು ಕಡೆ, ಕುಟುಂಬದಲ್ಲೇ ಕ್ಷೇತ್ರ ತ್ಯಾಗ ಮಾಡಿಕೊಂಡಿರುವ ಪಕ್ಷ ಇನ್ನೊಂದು ಕಡೆ ಇರುವಾಗ ರಾಜ್ಯದ ಅಭಿವೃದ್ಧಿಗೆ ವೇಗ ಕೊಟ್ಟಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಕಾಲದ ಅವಶ್ಯಕತೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಪ್ರತಿಪಾದಿಸಿದ್ದಾರೆ. ನಗರದ ಗಾಯತ್ರಿ ವಿಹಾರದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಕೋಷ್ಠಗಳ ಪ್ರಥಮ ರಾಜ್ಯಮಟ್ಟದ ಸಮಾವೇಶ ‘ಶಕ್ತಿ ಸಂಗಮ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾತ ಮೊಮ್ಮಗನಿಗಾಗಿ, ಪತಿ ಪತ್ನಿಗಾಗಿ, ತಾಯಿ ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಡುತ್ತಿರುವ ಪಕ್ಷವೊಂದರಲ್ಲಿ ತ್ಯಾಗದ ಮಹಾಪೂರವೇ ಹರಿಯುತ್ತಿದೆ. ಅದು ಹೋಗಲಿ, ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟರೆ ಮೋಸ ಮಾಡುತ್ತಾರೆ ಎಂಬ ಹೇಳಿಕೆಯನ್ನು ಕುಮಾರಸ್ವಾಮಿ ಅವರೇ ನೀಡಿದ್ದಾರೆ. ಆ ಪಕ್ಷಕ್ಕೆ ಚುನಾವಣೆ ಬಂದಾಗ ಪಂಚರತ್ನ ನೆನಪಾಗುತ್ತದೆ. ಪ್ರಚಾರ ಕಾರ್ಯಕ್ರಮ ಉದ್ಘಾಟಿಸುವಾಗಲೇ ಕಣ್ಣೀರು ಸುರಿಸುತ್ತಾ ಇದು ನನ್ನ ಕೊನೆಯ ಚುನಾವಣೆ ಎನ್ನುವ ಮಂತ್ರ ಹೇಳುತ್ತಾರೆ. ಕಳೆದ 20-30 ವರ್ಷದಿಂದಲೂ ಆ ಪಕ್ಷ ಇದನ್ನೇ ಹೇಳುತ್ತಿದೆ ಎಂದರು.

ಗ್ರಾಮ ವಾಸ್ತವ್ಯ ಮೋಜು ಮಸ್ತಿಗಾಗಿ ಮಾಡುತ್ತಿಲ್ಲ: ಶಾಸಕ ರೇಣುಕಾಚಾರ್ಯ

ಇನ್ನೊಂದು ಪಕ್ಷದವರು ಬೆಳಗ್ಗೆ ಎದ್ದಾಕ್ಷಣ ಟಿಪ್ಪು ನೆನೆಸಿಕೊಳ್ಳುತ್ತಾರೆ. ಯಾವುದೇ ಗಲಭೆ ಆದರೂ ಅವರು ಯಾರ ಪರವಾಗಿ ನಿಲ್ಲುತ್ತಾರೆ, ಇನ್ನ್ಯಾರನ್ನು ಸಿಲುಕಿಸಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದಲ್ಲೂ ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ಅವರು ಇಳಿದುಬಿಟ್ಟಿದ್ದಾರೆ. ಡಿಜಿಪಿ ಅವರ ಕಾರ್ಯಕ್ಷಮತೆ ಬಗ್ಗೆ ಪ್ರಶ್ನಿಸುತ್ತ ಪೊಲೀಸ್‌ ವ್ಯವಸ್ಥೆಯ ಆತ್ಮವಿಶ್ವಾಸಕ್ಕೂ ಧಕ್ಕೆ ತರುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಟೀಕಿಸಿದರು.

ಇತರೆ ಪಕ್ಷದವರು ಬಿಜೆಪಿಯ ಪ್ರಕೋಷ್ಠವನ್ನು ಕಾಪಿ ಮಾಡುತ್ತಿದ್ದಾರೆ. ನಾವು ಸಂಘಟನೆ ಹಾಗೂ ಕಾರ್ಯಕರ್ತರನ್ನು ಬೆಳೆಸುತ್ತೇವೆ. ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುತ್ತೇವೆ. ಆದರೆ ಭಯೋತ್ಪಾದಕ ಕೃತ್ಯ ಬೆಂಬಲಿಸುವಂತ ಬುದ್ಧಿಯನ್ನು ಕಲಿಸುವುದಿಲ್ಲ. ಬಾಂಬ್‌ ಸ್ಫೋಟದಂತಹ ವಿಚಾರದಲ್ಲಿ ಅಧಿಕಾರಿಗಳನ್ನು ಪ್ರಶ್ನಿಸುವವರಿಗೆ ಬುದ್ಧಿ ಸರಿ ಇದೆ ಎನ್ನುತ್ತಿರಾ ಎಂದು ಸಂತೋಷ್‌ ಪ್ರಶ್ನಿಸಿದರು.

ಯಡಿಯೂರಪ್ಪಗೆ ಆಮಂತ್ರಣ ನೀಡಬೇಕಾ?: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿರುವುದು ಕಾಲದ ಅವಶ್ಯಕತೆ. ಬಿಜೆಪಿಯಿಂದಾಗಿ ರಾಜ್ಯದ ಅಭಿವೃದ್ಧಿಯ ರಥದ ರೈಲಿಗೆ ವೇಗ ದೊರೆತಿದೆ. ಆ ವೇಗ ಹಾಗೆಯೇ ಮುಂದುವರೆಯಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ. ಕಾರ್ಯಕರ್ತರಿಗೆ ತಮ್ಮ ಶಕ್ತಿಯ ಪರಿಚಯ ಮಾಡಿಕೊಡಲು ಮೊಟ್ಟಮೊದಲ ಬಾರಿಗೆ ಪ್ರಕೋಷ್ಠ ಸಭೆಯನ್ನು ಏರ್ಪಡಿಸಲಾಗಿದೆ. ನಾವು ಯಡಿಯೂರಪ್ಪ ಅವರ ಕೃಷಿ ಬಜೆಚ್‌, ಬೊಮ್ಮಾಯಿ ಅವರ ಉತ್ತಮ ಆಡಳಿತ ಮುಂದಿಟ್ಟು ಚುನಾವಣೆಯನ್ನು ಎದುರಿಸಲು ಹೋಗುತ್ತೇವೆ ಎಂದು ಹೇಳಿದರು.

click me!