ಯಾವ ಶಾಸಕರೂ ನನ್ನ ಪರ ದೆಹಲಿಗೆ ಹೋಗಬೇಡಿ: ಡಿಕೆ ಶಿವಕುಮಾರ್‌

Kannadaprabha News   | Kannada Prabha
Published : Feb 28, 2026, 06:14 AM IST
DK Shivakumar

ಸಾರಾಂಶ

ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ. ಅವರಿಗೆ ಸಮಸ್ಯೆಯಿದ್ದರೆ ಹೋಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಪರವಾಗಿರುವ ಶಾಸಕರು ಡಿನ್ನರ್‌ ಸಭೆ ನಡೆಸಿ, ದೆಹಲಿಗೆ ಹೋಗುವ ಸಾಧ್ಯತೆ ಕುರಿತು ಸುಳಿವು ನೀಡುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರು : ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ. ಅವರಿಗೆ ಸಮಸ್ಯೆಯಿದ್ದರೆ ಹೋಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಪರವಾಗಿರುವ ಶಾಸಕರು ಡಿನ್ನರ್‌ ಸಭೆ ನಡೆಸಿ, ದೆಹಲಿಗೆ ಹೋಗುವ ಸಾಧ್ಯತೆ ಕುರಿತು ಸುಳಿವು ನೀಡುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಶಾಸಕರು ನನ್ನ ಪರವಾಗಿ ದೆಹಲಿಗೆ ಹೋಗುವುದು ಬೇಡ ಎಂದು ಮನವಿ ಮಾಡುತ್ತೇನೆ. ಶಾಸಕರ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಲಿ. ನನ್ನ ವಿಚಾರಕ್ಕಾಗಿ ಹೋಗುವುದು ಬೇಡ ಎಂದರು.

40ಕ್ಕೂ ಹೆಚ್ಚಿನ ಶಾಸಕರು ಸೇರುವ ಮೂಲಕ ಶಕ್ತಿ ಪ್ರದರ್ಶನ

ಜನ್ಮದಿನದ ಹೆಸರಿನಲ್ಲಿ 40ಕ್ಕೂ ಹೆಚ್ಚಿನ ಶಾಸಕರು ಸೇರುವ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಯಾವ ಶಕ್ತಿ ಪ್ರದರ್ಶನವೂ ಇಲ್ಲ. ಕೆಲವರು ವಿಶ್ರಾಂತಿ, ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಇನ್ನೂ ಕೆಲವರು ದೆಹಲಿಗೆ ಹೋದರೆ, ಉಳಿದವರು ಭೋಜನ ಕೂಟದಲ್ಲಿ ಸೇರುತ್ತಾರೆ. ಅದು ಅವರ ವೈಯಕ್ತಿಕ ವಿಚಾರವಾಗಿದ್ದು, ಪಕ್ಷಕ್ಕೆ ಸಂಬಂಧವಿಲ್ಲ ಎಂದು ತಿಳಿಸಿದರು.

ನನ್ನ ಜತೆ ಅವರು ಯಾರೂ ಮಾತನಾಡಿಲ್ಲ

ನೀವು ಮುಖ್ಯಮಂತ್ರಿಯಾಗಬೇಕು ಎಂದು ಕೆಲ ಶಾಸಕರು ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜತೆ ಅವರು ಯಾರೂ ಮಾತನಾಡಿಲ್ಲ. ಇನ್ನು, ಕೆಲವರು ಆಸೆ ಇಟ್ಟುಕೊಂಡಿದ್ದಾರೆ. ಹೊಸಬರಿಗೆ ಸಚಿವರಾಗುವ ಆಸೆ ಇರುತ್ತದೆ. ನಾನು, ಪರಮೇಶ್ವರ್‌, ಎಚ್.ಕೆ.ಪಾಟೀಲ್‌, ಮಹದೇವಪ್ಪ, ಸಿದ್ದರಾಮಯ್ಯ ಸೇರಿ ಹಲವರು ಈಗ ಹಳಬರಾಗಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಸಚಿವರಾಗಿದ್ದೇವೆ. ಹೊಸಬರು ಸಚಿವರಾಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಚಾರವಾಗಿ ಮಾತನಾಡಿ, ಯಾವುದೇ ವ್ಯಕ್ತಿಗೆ ಕಿರುಕುಳ ನೀಡುವುದಕ್ಕೂ ಮಿತಿಯಿದೆ. ರಾಜಕೀಯ ಉದ್ದೇಶದಿಂದ ಮುಕ್ತಾಯವಾಗಿದ್ದ ಪ್ರಕರಣವನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿಬಿಐಗೆ ಹಸ್ತಾಂತರಿಸಿ, ತೊಂದರೆ ನೀಡಲಾಗುತ್ತಿತ್ತು. ವಿನಯ್‌ ಕುಲಕರ್ಣಿ ಅವರ ಕ್ಷೇತ್ರಕ್ಕೆ ಹೋಗದಂತೆಯೂ ನಿರ್ಬಂಧ ಹೇರಲಾಗಿತ್ತು. ಚುನಾವಣೆಯಲ್ಲಿ ಅವರು ಮತ ಕೇಳುವಂತಿಲ್ಲ ಎಂಬ ಆದೇಶವನ್ನೂ ನೀಡಲಾಗಿತ್ತು. ನಾವು ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಗೌರವ ನೀಡಿದೆವು. ಅದೆಲ್ಲವನ್ನು ಗಮನಿಸಿ ನ್ಯಾಯಾಲಯ ಜಾಮೀನು ನೀಡಿದೆ. ಈಗ ಅವರಿಗೆ ನ್ಯಾಯ ಸಿಕ್ಕಿದೆ ಎಂದರು.

- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಆಪ್ತರಾಗಿರುವ ಶಾಸಕರಿಂದ ಮೊನ್ನೆ ಬೆಂಗಳೂರಲ್ಲಿ ಡಿನ್ನರ್ ಸಭೆ

- ನಾಯಕತ್ವ ಬದಲಾವಣೆ ಸೇರಿ ರಾಜ್ಯ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಶಾಸಕರ ಹೇಳಿಕೆ

- ರಾಜ್ಯದ ಗೊಂದಲ ಬಗೆಹರಿಸುವಂತೆ ಹೈಕಮಾಂಡ್‌ ಭೇಟಿಯಾಗಿ ಮನವಿ ಮಾಡುವುದಾಗಿ ಕೆಲವರ ಮಾತು

- ಇದರ ಬೆನ್ನಲ್ಲೇ ಡಿಸಿಎಂರಿಂದ ಪ್ರತಿಕ್ರಿಯೆ. ನನ್ನ ಪರವಾಗಿ ದೆಹಲಿಗೆ ಯಾರೂ ಹೋಗುವುದು ಬೇಡ ಎಂದು ಮನವಿ

- ಹೇಳಿಕೆ ನೀಡುತ್ತಿರುವ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ, ಅಧಿಕಾರ, ಹುದ್ದೆ ಬೇಕು ಎಂಬ ಬೇಡಿಕೆ ಇದ್ದರೆ ದಿಲ್ಲಿಗೆ ಹೋಗಲಿ

- ಆದರೆ ನನ್ನ ವಿಚಾರಕ್ಕೆ ಹೋಗುವುದು ಬೇಡ. ಡಿನ್ನರ್‌ ಸಭೆ ಯಾವ ಶಕ್ತಿ ಪ್ರದರ್ಶನ ಅಲ್ಲ ಎಂದ ಕೆಪಿಸಿಸಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಚ್ಚರಿಯ ನಡೆಯೊಂದರಲ್ಲಿ ಜಯಲಲಿತಾ ಶಿಷ್ಯ ಪನ್ನೀರ್‌ಸೆಲ್ವಂ ಡಿಎಂಕೆಗೆ !
ರಾಜಕಾರಣ ಪ್ರವೇಶಕ್ಕೆ 50 ವರ್ಷ । ಚಿತ್ರದುರ್ಗದಲ್ಲಿ ಮೇಗೆ ಸಮಾವೇಶ, ಬಿಎಸ್‌ವೈ ಉತ್ಸವಕ್ಕೆ ಸಿದ್ಧತೆ!