ಉತ್ತರ ಕನ್ನಡದಲ್ಲಿ ಮತ್ತೆ ಶುರುವಾಯ್ತಾ ಅಸಲಿ ಆಟ? ಹೆಗಡೆ ರೀ-ಎಂಟ್ರಿಗೆ ಹಾಲಿ ಸಂಸದ ಕಾಗೇರಿ ಹೇಳಿದ್ದೇನು?

Published : Feb 27, 2026, 05:56 PM IST
What MP Kageri Said About Anantkumar Hegde s Entry

ಸಾರಾಂಶ

ಸಂವಿಧಾನ ಬದಲಾವಣೆ ಕುರಿತ ವಿವಾದಾತ್ಮಕ ಹೇಳಿಕೆಯಿಂದಾಗಿ ಕಳೆದ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.

ಉತ್ತರಕನ್ನಡ (ಫೆ.27): ಕಳೆದ ಎರಡು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆ ಎನ್ನುವುದು ಬಿಜೆಪಿಯ ಭದ್ರಕೋಟೆ ಆಗಿತ್ತು. ಈ ಕೋಟೆಯ ಅಧಿಪತಿಯಾಗಿ ಮೆರೆದವರು ಫೈರ್‌ಬ್ರಾಂಡ್ ಹಿಂದುತ್ವವಾದಿ ಅನಂತಕುಮಾರ್ ಹೆಗಡೆ. 2019ರ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 4.79 ಲಕ್ಷ ಮತಗಳ ದಾಖಲೆ ಅಂತರದಿಂದ ಗೆದ್ದು ಬೀಗಿದ್ದ ಹೆಗಡೆ, ದೆಹಲಿ ಮಟ್ಟದಲ್ಲಿ ಜಿಲ್ಲೆಯ ಧ್ವನಿಯಾಗಿದ್ದರು. ಆದರೆ, ಕಾಲಚಕ್ರ ಉರುಳಿದಂತೆ ಅವರ ವಿವಾದಾತ್ಮಕ ಹೇಳಿಕೆಗಳೇ ಅವರಿಗೆ ಮುಳ್ಳಾದವು. ಹಿಂದುತ್ವದ ಪರವಾಗಿ ಅಬ್ಬರಿಸುತ್ತಿದ್ದ ಹೆಗಡೆ, ಸಂವಿಧಾನ ಬದಲಾವಣೆಯ ಕುರಿತು ನೀಡಿದ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿ, ಸ್ವಪಕ್ಷದ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿತ್ತು.

ಸಂವಿಧಾನದ ಹೇಳಿಕೆಯಿಂದ ಕೈತಪ್ಪಿದ್ದ ಟಿಕೆಟ್

ಕಳೆದ ಚುನಾವಣೆಯಲ್ಲಿ'ಹಿಂದೂ ಧರ್ಮದ ರಕ್ಷಣೆಗಾಗಿ ಸಂವಿಧಾನ ತಿದ್ದುಪಡಿ ಮಾಡಬೇಕಿದೆ, ಅದಕ್ಕಾಗಿಯೇ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು ಬೇಕು ಎಂಬ ಹೆಗಡೆ ಅವರ ಕರೆ ಪ್ರತಿಪಕ್ಷಗಳ ಕೈಗೆ ಪ್ರಬಲ ಅಸ್ತ್ರವಾಯಿತು. ಪ್ರಧಾನಿ ಮೋದಿ ಸೇರಿದಂತೆ ಹೈಕಮಾಂಡ್ ನಾಯಕರು ಈ ಹೇಳಿಕೆಯಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಹರಸಾಹಸ ಪಡಬೇಕಾಯಿತು. ಇದರ ನೇರ ಪರಿಣಾಮವಾಗಿ, ಕಳೆದ ಚುನಾವಣೆಯಲ್ಲಿ ಹೆಗಡೆ ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ, ಸಂಘಟನಾ ಚತುರ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸಿತು. ಈ ಬೆಳವಣಿಗೆ ಜಿಲ್ಲೆಯ ರಾಜಕೀಯದಲ್ಲಿ ಹೊಸ ಧ್ರುವೀಕರಣಕ್ಕೆ ನಾಂದಿ ಹಾಡಿತು.

ಬಹಿರಂಗಗೊಂಡ ಕಾಗೇರಿ-ಹೆಗಡೆ ನಡುವಿನ 'ಕೋಲ್ಡ್ ವಾರ್'

ಚುನಾವಣಾ ಸಮಯದಲ್ಲಿ ಕಾಗೇರಿ ಅವರಿಗೆ ಹೆಗಡೆ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಳೆಯ ಫೋಟೋಗಳನ್ನು ವೈರಲ್ ಮಾಡುವ ಮೂಲಕ ಕಾಗೇರಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳೂ ನಡೆದಿದ್ದವು. ಅಂದಿನಿಂದ ಈ ಇಬ್ಬರು ನಾಯಕರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಇಂದು ಮಾಧ್ಯಮಗಳು ಅನಂತಕುಮಾರ್ ಹೆಗಡೆ ಅವರ ರಾಜಕೀಯ ಮರುಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ಸಂಸದ ಕಾಗೇರಿ ಅವರು ಸರಿಯಾಗಿ ಪ್ರತಿಕ್ರಿಯಿಸದೆ, 'ಅವರು ನಮ್ಮ ಜೊತೆ ಇದ್ದೇ ಇದ್ದಾರೆ' ಎಂದು ಹಾರಿಕೆಯ ಉತ್ತರ ನೀಡಿ ಹೊರನಡೆದಿದ್ದು, ಈ ಮುನಿಸು ಇನ್ನೂ ಹಸಿಯಾಗಿಯೇ ಇದೆ ಎಂಬುದನ್ನು ಸಾಬೀತುಪಡಿಸಿದೆ.

ಹೆಗಡೆ ರೀ-ಎಂಟ್ರಿ: ಯಾರಿಗೆ ಲಾಭ? ಯಾರಿಗೆ ನಷ್ಟ?

ಈಗ ಮತ್ತೆ ಅನಂತಕುಮಾರ್ ಹೆಗಡೆ ಸಕ್ರಿಯ ರಾಜಕೀಯಕ್ಕೆ ಮರಳಲು ಸಜ್ಜಾಗುತ್ತಿರುವುದು ಉತ್ತರ ಕನ್ನಡದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹೆಗಡೆ ಅವರ ಎಂಟ್ರಿ ಕಾಗೇರಿ ಅವರ ಭವಿಷ್ಯಕ್ಕೆ ಅಡ್ಡಿಯಾಗಲಿದೆಯೇ ಅಥವಾ ಪಕ್ಷದ ಹೈಕಮಾಂಡ್ ಇಬ್ಬರನ್ನೂ ಹೇಗೆ ಸರಿದೂಗಿಸಲಿದೆ ಎಂಬುದು ಸದ್ಯದ ಯಕ್ಷಪ್ರಶ್ನೆ. ಈ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜಕಾರಣದಲ್ಲಿ ಯಾವ ರೀತಿಯ ತಿರುವು ಪಡೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

OPS Joins DMK: AIADMK ಉಳಿವಿಗಾಗಿ 'ಧರ್ಮಯುದ್ಧ' ಸಾರಿದ್ದ ಒಪಿಎಸ್, ಈಗ ಬದ್ಧವೈರಿ DMK ಪಾಳೆಯಕ್ಕೆ!
ತನ್ನ ತಾಯಿಯ ಸಾವು ಜೀವನದ ಅತ್ಯಂತ ನೋವಿನ ಕ್ಷಣ : ನಟ ಮೋಹನ್‌ಲಾಲ್ ಜೊತೆ ಮನಸ್ಸು ಬಿಚ್ಚಿ ಮಾತನಾಡಿದ ಕೇರಳ ಸಿಎಂ