
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಅಚ್ಚರಿಯ ನಡೆಯೊಂದರಲ್ಲಿ ಅಣ್ಣಾ ಡಿಎಂಕೆ ಮಾಜಿ ಅಧಿನಾಯಕಿ ದಿ. ಜೆ. ಜಯಲಲಿತಾ ಅವರ ಕಟ್ಟಾ ಶಿಷ್ಯ, 3 ಬಾರಿಯ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಶುಕ್ರವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. ಇದು ಚುನಾವಣೆಯನ್ನು ಎದುರುನೋಡುತ್ತಿರುವ ರಾಜ್ಯ ರಾಜಕೀಯಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.
ಎಐಎಡಿಎಂಕೆಯಿಂದ ಭಿನ್ನಮತದ ಕಾರಣ ಈಗಾಗಲೇ ಉಚ್ಚಾಟಿತರಾದ್ದ ಪನ್ನೀರ್‌ಸೆಲ್ವಂ ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮ್ಮುಖದಲ್ಲಿ, ಪುತ್ರ ಪಿ. ರವೀಂದ್ರನಾಥ್ ಕುಮಾರ್ ಹಾಗೂ ಬೆಂಬಲಿಗರ ಜೊತೆಗೂಡಿ ಪಕ್ಷಕ್ಕೆ ಔಪಚಾರಿಕವಾಗಿ ಸೇರ್ಪಡೆಗೊಂಡರು. ಆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಒಬ್ಬ ನಿರಂಕುಶಾಧಿಕಾರಿ ಮತ್ತು ದುರಹಂಕಾರಿ. ಅವರು ಎಲ್ಲಾ ಸಮಯದಲ್ಲೂ ಎಐಎಡಿಎಂಕೆಗೆ ಗೆಲುವು ಇಲ್ಲ ಎಂಬ ಪರಿಸ್ಥಿತಿಯನ್ನು ಸೃಷ್ಟಿಸಿದವರು. ಆದರೆ ಸಿಎಂ ಸ್ಟಾಲಿನ್ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಎಲ್ಲಾ ವರ್ಗದ ಜನರಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸುತ್ತಾರೆ. ಡಿಎಂಕೆಯನ್ನು ವಿರೋಧಿಸುವ ಯಾವುದೇ ಪಕ್ಷವಿಲ್ಲ’ ಎಂದರು.
ಜಯಲಲಿತಾ ಅವರ ಕಟ್ಟಾ ಅನುಯಾಯಿ ಆಗಿದ್ದ ಪನ್ನೀರಸೆಲ್ವಂ ಜಯಲಲಿತಾ ಅವರು ಜೈಲು ಸೇರಿದಾಗ ಸಿಎಂ ಆಗಿದ್ದರು. ಬಳಿಕ ಜಯಾ ಬಂಧಮುಕ್ತರಾದಾಗ ಅವರಿಗೇ ಪಟ್ಟ ಬಿಟ್ಟುಕೊಟ್ಟಿದ್ದರು. ಆದರೆ ಜಯಲಲಿತಾ ನಿಧನಾ ನಂತರ ಪಕ್ಷದ ಎಡಪ್ಪಾಡಿ ಕೆ. ಪಳನಿಸ್ವಾಮಿ ಜತೆ ಅವರು ಸಂಘರ್ಷ ನಡೆಸಿದ್ದರು. ಹೀಗಾಗಿ ಅವರನ್ನು 2022ರಲ್ಲಿ ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಸ್ವತಂತ್ರ ಬಣ ರಚಿಸಿಕೊಂಡು ಎನ್‌ಡಿಎ ಸೇರಿದ್ದರು. ಆದರೆ 2025ರಲ್ಲಿ ಬಿಜೆಪಿ ತನಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು. ನಂತರ ಅಣ್ಣಾಡಿಎಂಕೆ ಮತ್ತೆ ಸೇರಲು ಹಲವಾರು ಸಲ ಮನವಿ ಮಾಡಿದರೂ ತಿರಸ್ಕೃತರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.