ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿ ಚುಕ್ಕಾಣಿ ನಿತಿನ್‌ಗೆ

Kannadaprabha News   | Kannada Prabha
Published : Jan 21, 2026, 05:55 AM IST
Nitin nabin bjp

ಸಾರಾಂಶ

14 ಕೋಟಿಗೂ ಹೆಚ್ಚಿನ ನೊಂದಾಯಿತ ಸದಸ್ಯರೊಂದಿಗೆ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆ ಹೊಂದಿರುವ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್‌ ನಬೀನ್‌ ಆಯ್ಕೆಯಾಗಿದ್ದಾರೆ.

ನವದೆಹಲಿ: 14 ಕೋಟಿಗೂ ಹೆಚ್ಚಿನ ನೊಂದಾಯಿತ ಸದಸ್ಯರೊಂದಿಗೆ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆ ಹೊಂದಿರುವ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್‌ ನಬೀನ್‌ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಅವರು ಏಕಾಂಗಿ ಅಭ್ಯರ್ಥಿಯಾಗಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬಿದ್ದಿದೆ.

ಮಂಗಳವಾರ ಬೆಳಗ್ಗೆ ಈ ಕುರಿತು ಘೋಷಣೆ ಹೊರಬಿದ್ದ ಬೆನ್ನಲ್ಲೇ, ಪಕ್ಷದ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ಅಧಿಕಾರ ಸ್ವೀಕರಿಸಿದರು. ಪಕ್ಷದ ಕೇಂದ್ರೀಯ ಕಚೇರಿಯಲ್ಲಿ ನಡೆದ ಈ ಸಮಾರಂಭದ ವೇಳೆ ಪಕ್ಷದ ಹಿಂದಿನ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಆಂದ್ರ ಮೋದಿ, ಸಚಿವರಾದ ರಾಜ್‌ನಾಥ್‌ ಸಿಂಗ್‌, ಅಮಿತ್ ಶಾ, ನಿತಿನ್ ಗಡ್ಕರಿ ಮೊದಲಾದವರು ಉಪಸ್ಥಿತರಿದ್ದರು.

1980ರಲ್ಲಿ ಬಿಜೆಪಿ ಸಂಸ್ಥಾಪನೆಯಾದ ವರ್ಷವೇ ಜನ್ಮತಾಳಿದ್ದ ನಿತಿನ್‌ (45), ಬಿಜೆಪಿಯ ಅತಿ ಕಿರಿಯ ಅಧ್ಯಕ್ಷ ಮತ್ತು ಬಿಹಾರದಿಂದ ಆಯ್ಕೆಯಾದ ಮೊದಲಿಗೆ ಎಂಬ ಹಿರಿಮೆಯನ್ನು ಹೊಂದಿದ್ದಾರೆ.

ನಿತಿನ್‌ ಎದುರು ಸವಾಲುಗಳು

ಈ ವರ್ಷ ನಡೆವ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು

ಇದುವರೆಗೂ ಬಿಜೆಪಿ ಗೆಲ್ಲಲು ಸಾಧ್ಯವಾಗದ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು. ಪಕ್ಷದ ಜಾಲ ವಿಸ್ತರಣೆ

ಮಿತ್ರ ಪಕ್ಷಗಳೊಂದಿಗೆ ಉತ್ತಮ ಹೊಂದಾಣಿಕೆ ಮೂಲಕ ಎನ್‌ಡಿಎ ಕೂಟವನ್ನು ಮತ್ತಷ್ಟು ಬಲಪಡಿಸಲು ಯತ್ನಿಸುವುದು

ರಾಜಕೀಯಕ್ಕೆ ಬನ್ನಿ: ಯುವಕರಿಗೆ ನಿತಿನ್‌ ಕರೆ

ನವದೆಹಲಿ: ‘ಸಾರ್ವಜನಿಕ ಜೀವನಕ್ಕೆ ಧುಮುಕಿ ಎಂದು ಪ್ರಧಾನಿ ಮೋದಿಯವರು ದೇಶದ ಯುವಜನತೆಗೆ ಕರೆ ನೀಡಿದ್ದಾರೆ. ಯುವಕರು ರಾಜಕೀಯದಿಂದ ದೂರವುಳಿಯುವುದು ಯಾವುದಕ್ಕೂ ಪರಿಹಾರವಲ್ಲ. ಧನಾತ್ಮಕ ರಾಜಕೀಯಕ್ಕೆ ಬಂದು, ವಿಕಸಿತ ಭಾರತವನ್ನು ನಿರ್ಮಿಸುವ ಮೋದಿಯವರ ಸಂಕಲ್ಪವನ್ನು ಸಾಕಾರಗೊಳಿಸಬೇಕು’ ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಮುಖ್ಯಕಚೇರಿಯಲ್ಲಿ, ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿ ಮಾತನಾಡಿದ ನಿತಿನ್, ‘2025ರ ಆ.15ರಂದು, ಸಾರ್ವಜನಿಕ ಜೀವನಕ್ಕೆ ಬನ್ನಿ ಎಂದು ಮೋದಿಯವರು ಯುವಕರಿಗೆ ಕರೆ ನೀಡಿದರು. ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವುದು ಪರಿಹಾರವಲ್ಲ, ಬದಲಾಗಿ ಸಕ್ರಿಯ ಕೊಡುಗೆ ನೀಡುವುದೇ ಪರಿಹಾರ. ಯುವಕರು ಮುಂದೆ ಬಂದು, ಧನಾತ್ಮಕ ರಾಜಕೀಯದಲ್ಲಿ ಪಾಲ್ಗೊಂಡು, ಭಾರತವನ್ನು ಅಭಿವೃದ್ಧಿಪಡಿಸುವ ಮೋದಿಯವರ ಸಂಕಲ್ಪವನ್ನು ಈಡೇರಿಸುವ ಅಗತ್ಯವಿದೆ’ ಎಂದರು.

ಬಿಜೆಪಿ ಕಾವಲು ಗೋಪುರ ಬಲಿಷ್ಠ:

‘ರಾಜಕೀಯದಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ. ಇದು 100 ಮೀ. ಓಟವಲ್ಲ. ವೇಗದ ಬದಲಾಗಿ, ತ್ರಾಣವನ್ನು ಪರೀಕ್ಷಿಸುವ ಮ್ಯಾರಥಾನ್. ಪ್ರತಿಯೊಂದು ವಿವರವನ್ನೂ ಸೂಕ್ಷ್ಮವಾಗಿ ಗಮನಿಸುವ ಮತ್ತು ಒಂದು ದಿನ ನಿಮ್ಮನ್ನು ಅರ್ಹವಾದ ಸ್ಥಾನಕ್ಕೆ ಕೊಂಡೊಯ್ಯುವಷ್ಟು ಬಿಜೆಪಿಯ ಕಾವಲು ಗೋಪುರ ಬಲಿಷ್ಠವಾಗಿದೆ. ಮುಂದೆ ಬನ್ನಿ, ನಮ್ಮ ಬೇರುಗಳನ್ನು ಬಲವಾಗಿಟ್ಟುಕೊಳ್ಳಲು ರಾಜಕೀಯದಲ್ಲಿ ಕೆಲಸ ಮಾಡೋಣ.’ ಎಂದು ಕರೆ ನೀಡಿದರು.

5 ರಾಜ್ಯಗಳ ಚುನಾವಣೆ ಗುರಿ:

‘ಪಶ್ಚಿಮ ಬಂಗಾಳ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಗಳಿಸಲು, ಸನಾತನ ಸಂಪ್ರದಾಯ ಮತ್ತು ನಂಬಿಕೆಯನ್ನು ರಕ್ಷಿಸಲು ಹಾಗೂ ದೇಶವನ್ನು ಜನಸಂಖ್ಯಾ ಅಸಮತೋಲನಗಳಿಂದ ಕಾಪಾಡಲು ಶಕ್ತಿ ಮೀರಿ ಕೆಲಸ ಮಾಡೋಣ’ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನಿತಿನ್‌ ಮನವಿ ಮಾಡಿದರು.

ಬಿಜೆಪಿ ಅಧ್ಯಕ್ಷ ನಿತಿನ್‌ಗೆ ಝಡ್ ಶ್ರೇಣಿ ಭದ್ರತೆ

ನವದೆಹಲಿ: ಬಿಜೆಪಿಯ ನೂತನ ಅಧ್ಯಕ್ಷ ನಿತಿನ್‌ ನಬೀನ್‌ಗೆ ಕೇಂದ್ರ ಸರ್ಕಾರವು ಝೆಡ್‌ ಶ್ರೇಣಿಯ ಭದ್ರತೆ ಒದಗಿಸಿದೆ. ನಿತಿನ್‌ ನಬೀನ್‌ ಅವರು ಅಧ್ಯಕ್ಷರಾದ ಬಳಿಕ ಅವರಿಗೆ ವಿಐಪಿ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಒದಗಿಸಿದ್ದು, ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್) 22 ಸಿಬ್ಬಂದಿ ನಬೀನ್‌ ಅವರಿಗೆ ದಿನದ 24 ಗಂಟೆಯೂ ಭದ್ರತೆ ಒದಗಿಸಲಿದೆ. ದೇಶಾದ್ಯಂತ ನಿತಿನ್‌ ಅವರ ಸಂಚಾರದುದ್ದಕ್ಕೂ ಭದ್ರತೆ ಇರಲಿದೆ.

ಪಕ್ಷದ ವಿಚಾರದಲ್ಲಿ ನಿತಿನ್‌ ನನಗೆ ಬಾಸ್‌: ಮೋದಿ

ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬೀನ್‌ರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಪಕ್ಷಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಈ ಯುವನಾಯಕನೇ ನನಗೆ ‘ಬಾಸ್‌’ ಎನ್ನುವ ಮೂಲಕ ಗಮನ ಸೆಳೆದಿದ್ದಾರೆ.

ಪಕ್ಷದ ಮುಖ್ಯ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಮಿಲೇನಿಯಲ್ ಪೀಳಿಗೆಗೆ ಸೇರಿದ ನಿತಿನ್‌, ಯುವಶಕ್ತಿ ಮತ್ತು ಸಂಘಟನಾ ಅನುಭವ ಎರಡನ್ನೂ ಹೊಂದಿದ್ದಾರೆ. ಇದು ಪಕ್ಷಕ್ಕೆ ಅಪಾರ ಸಹಾಯ ಮಾಡಲಿದೆ. ಅವರ ಪ್ರತಿ ಮಾತೂ ನಮಗೆ ಹೊಸ ದಿಕ್ಕು ತೋರಲಿದೆ. ನಾನು ಕೂಡ ಪಕ್ಷದ ಕಾರ್ಯಕರ್ತನಾಗಿ ಹೊಸ ಅಧ್ಯಕ್ಷರಿಗೆ ನನ್ನ ಕೆಲಸದ ಬಗ್ಗೆ ವಿವರ ನೀಡುತ್ತೇನೆ. ನಿತಿನ್‌ರ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದೇನೆ. ಪಕ್ಷದ ವಿಚಾರಕ್ಕೆ ಬಂದಾಗ ನಾನು ಕಾರ್ಯಕರ್ತ, ಅವರು ನನ್ನ ಬಾಸ್’ ಎಂದರು. ಈ ವೇಳೆ ನಿತಿನ್‌ರನ್ನು ಪ್ರಧಾನಿ ಹಲವು ಬಾರಿ ‘ಮಾನನೀಯ’ ಎಂದು ಉಲ್ಲೇಖಿಸಿದ್ದು ವಿಶೇಷವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಡ್ಯ ಜಿಲ್ಲೆಯಿಂದ ಜೆಡಿಎಸ್ ಓಡಿಸದಿದ್ದರೆ ಭವಿಷ್ಯವಿಲ್ಲ : ಚಲುವರಾಯಸ್ವಾಮಿ
ಬಿಜೆಪಿ ಬ್ಯಾಂಕ್‌ ಖಾತೆಯಲ್ಲಿದೆ 10,000 ಕೋಟಿ ರು. ಬ್ಯಾಲೆನ್ಸ್‌!