
ನವದೆಹಲಿ: 14 ಕೋಟಿಗಿಂತ ಹೆಚ್ಚಿನ ನೋಂದಾಯಿತ ಸದಸ್ಯರೊಂದಿಗೆ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆ ಹೊಂದಿರುವ ಭಾರತೀಯ ಜನತಾ ಪಕ್ಷ, ಇದೀಗ ಭರ್ಜರಿ 10000 ಕೋಟಿ ರು. ಬ್ಯಾಂಕ್ ಬ್ಯಾಲೆನ್ಸ್‌ನ ಮತ್ತೊಂದು ದಾಖಲೆ ಬರೆದಿದೆ. 2025ರ ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನಲ್ಲಿ ಇರುವ ಠೇವಣಿ ಮತ್ತು ನೀಡಿರುವ ಸಾಲ, ಮುಂಗಡ ಪಾವತಿ ಸೇರಿಸಿ ಬಿಜೆಪಿಯ ಬೊಕ್ಕಸದಲ್ಲಿ 10000 ಕೋಟಿ ರು.ಗೂ ಹೆಚ್ಚಿನ ಹಣ ಇದೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಪಕ್ಷ ಸಲ್ಲಿಸಿರುವ ಲೆಕ್ಕ ಪರಿಶೋಧನಾ ವರದಿ ಅನ್ವಯ ಬ್ಯಾಂಕ್‌ನಲ್ಲಿ ನಗದು ಮತ್ತು ಠೇವಣಿ ರೂಪದಲ್ಲಿ 9996 ಕೋಟಿ ರು. ಇದ್ದರೆ, ಸಾಲ ಮತ್ತು ಮುಂಗಡ ಪಾವತಿ ರೂಪದಲ್ಲಿ 234 ಕೋಟಿ ರು. ಇದೆ. ಎರಡನ್ನೂ ಸೇರಿಸಿದರೆ ಅದು 10230 ಕೋಟಿ ರು. ತಲುಪುತ್ತದೆ.
2023-24ನೇ ಹಣಕಾಸು ವರ್ಷದಲ್ಲಿ ಬಿಜೆಪಿ ಬಳಿ 3967 ಕೋಟಿ ರು. ಹಣ ಇತ್ತು. ಅದರ ಮರು ವರ್ಷ ಅಂದರೆ 2025ರಲ್ಲಿ ದೆಹಲಿ ಮತ್ತು ಒಡಿಶಾ ವಿಧಾನಸಭೆಗೆ ಚುನಾವಣೆ ನಡೆದಿದ್ದು ಈ ವೇಳೆ ಪಕ್ಷಕ್ಕೆ ಭರ್ಜರಿ 6125 ಕೋಟಿ ರು. ದೇಣಿಗೆ ಹರಿದುಬಂದಿದೆ. ಇದರ ಜೊತೆಗೆ ಬ್ಯಾಂಕ್ ಠೇವಣಿಗೆ 634 ಕೋಟಿ ರು. ಬಡ್ಡಿ ಬಂದಿದೆ. ಜೊತೆಗೆ ಆದಾಯ ತೆರಿಗೆ ರೀಫಂಡ್ ಮೂಲಕ 66 ಕೋಟಿ ಮತ್ತು ಅದಕ್ಕೆ ಬಡ್ಡಿಯಾಗಿ 4.40 ಕೋಟಿ ರು. ಪಡೆದಿದೆ.
ಇನ್ನು 2024-25ನೇ ಸಾಲಿನಲ್ಲಿ ಬಿಜೆಪಿ ವಿವಿಧ ಬಾಬ್ತಿನಲ್ಲಿ 3335 ಕೋಟಿ ರು. ವೆಚ್ಚ ಮಾಡಿದೆ. ಈ ಪೈಕಿ ಶೇ.88ರಷ್ಟು ಚುನಾವಣಾ ವೆಚ್ಚವಾಗಿದೆ. ಇದರಲ್ಲಿ ಅಭ್ಯರ್ಥಿಗಳಿಗೆ ಹಣಕಾಸು ನೆರವು ನೀಡಲು 312 ಕೋಟಿ ರು., ವಿಮಾನ, ಹೆಲಿಕಾಪ್ಟರ್ ವೆಚ್ಚವಾಗಿ 583 ಕೋಟಿ ರು., ಎಲೆಕ್ಟ್ರಾನಿಕ್ ಮಾಧ್ಯಮದ ವೆಚ್ಚವಾಗಿ 1125 ಕೋಟಿ ರು. ಕಟೌಟ್, ಬ್ಯಾನರ್, ಹೋಲ್ಡಿಂಗ್‌ಗೆ 107 ಕೋಟಿ ರು. ಮತ್ತು ಮುದ್ರಣ ಕೆಲಸಕ್ಕೆ 123 ಕೋಟಿ ರು. ವೆಚ್ಚ ಮಾಡಿದೆ.
ಇದಲ್ಲದೆ ಜಾಹೀರಾತಿಗಾಗಿ 897 ಕೋಟಿ ರು., ರ್‍ಯಾಲಿ, ಪ್ರಚಾರಕ್ಕಾಗಿ 90 ಕೋಟಿ ರು., ಸಭಾ ವೆಚ್ಚಗಳಿಗಾಗಿ 52 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಪಕ್ಷ ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.