ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ನಿಖಿಲ್ ಕುಮಾರಸ್ವಾಮಿ ಪಕ್ಷದ ಸೋಲಿನ ಹೊಣೆ ಹೊತ್ತು ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು (ಮೇ.25): ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ನಿಖಿಲ್ ಕುಮಾರಸ್ವಾಮಿ ಪಕ್ಷದ ಸೋಲಿನ ಹೊಣೆ ಹೊತ್ತು ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸೋಲು ಕೊನೆ ಅಲ್ಲ, ಮುಂದೆ ಪಕ್ಷವನ್ನು ಕಟ್ಟೋಣ. ದಯವಿಟ್ಟು ರಾಜೀನಾಮೆ ಅಂಗೀಕಾರ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ಪತ್ರದ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಪಕ್ಷದ ಜತೆ ಸದಾ ನಿಲ್ಲುವೆ, ಹೊಸ ನಾಯಕತ್ವಕ್ಕೆ ಅವಕಾಶ ಕೊಡಲು ಪತ್ರದಲ್ಲಿ ಮನವಿ ಮಾಡಿದ್ದು, ಸೋಲಿನಿಂದ ಕಂಗೆಡದೆ ಪಕ್ಷ ಕಟ್ಟುವ ಮಾತು, ಸೋಲೇ ಅಂತಿಮವಲ್ಲ ಎಂದ ತಿಳಿಸಿದ್ದು, ಪಕ್ಷ ಮರು ನಿರ್ಮಾಣ ದಿಸೆಯಲ್ಲಿ ರಾಜೀನಾಮೆ ನೀಡಿದ್ದೇನೆ. ಪಕ್ಷ ಕಟ್ಟುವ ಕೆಲಸದಲ್ಲಿ ನಾನು ಎಂದೂ ಹಿಂಜರಿಯಲಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ನಮ್ಮ ಪೊಲೀಸರು ಯಾವತ್ತೂ ಕೇಸರೀಕರಣ ಮಾಡಿಲ್ಲ: ಡಿಕೆಶಿ ಹೇಳಿಕೆಗೆ ಬೊಮ್ಮಾಯಿ ಕಿಡಿ
ಯುವಘಟಕವನ್ನು ಸಮರ್ಥವಾಗಿ ಕೊಂಡೊಯ್ಯುವ ನಾಯಕರನ್ನು ಜೆಡಿಎಸ್ ಸದ್ದಿಲ್ಲದೆ ಹುಡುಕುತ್ತಿದೆ ಎನ್ನಲಾಗಿದೆ. ಇಂದು ಆತ್ಮಾವಲೋಕನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಪಕ್ಷದ ಯುವಘಟಕ ಅಧ್ಯಕ್ಷ ಸ್ಥಾನದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಬದಲಿಸಿದ ಬಳಿಕ ಆ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಗಳು ಸಹ ಉದ್ಭವವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಹೆಸರು ಪ್ರಬಲವಾಗಿ ಕೇಳಿ ಬಂದಿದೆಯಾದರೂ ಕುಮಾರಸ್ವಾಮಿ ಇದಕ್ಕೆ ಸಮ್ಮತಿ ಸೂಚಿಸುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಕುಟುಂಬ ರಾಜಕಾರಣ ಇದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.
ಕುಟುಂಬ ರಾಜಕಾರಣವನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದಾದರೆ ಪ್ರಜ್ವಲ್ ರೇವಣ್ಣಗೆ ಯುವ ಘಟಕ ಹೊಣೆ ಒಲಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಪ್ರಜ್ವಲ್‌ಗೆ ಯುವಘಟಕ ಅಧ್ಯಕ್ಷ ಸ್ಥಾನ ನೀಡಲು ಕುಮಾರಸ್ವಾಮಿ ಹಿಂದೇಟು ಹಾಕಿದರೆ, ಪಕ್ಷದಲ್ಲಿ ಯುವ ಸಂಘಟಕರಾಗಿ ಓಡಾಡುವ ವ್ಯಕ್ತಿಯನ್ನು ಹುಡುಕುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಯುವ ಘಟಕದ ಅಧ್ಯಕ್ಷ ಸ್ಥಾನದ ಜತೆಗೆ ಇತರೆ ಘಟಕಗಳ ಪದಾಧಿಕಾರಿಗಳನ್ನು ಬದಲಿಸುವ ಸಾಧ್ಯತೆಯೂ ಇದೆ. ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಸ್ಥಳೀಯ ನಾಯಕರಿಗೆ ಮನ್ನಣೆ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದ ನಿಖಿಲ್, ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ವಿರುದ್ಧ ಸೋಲುಂಡಿದ್ದರು. ಇದರ ನೋವಿನಿಂದ ಹೊರಬರಲು ನಿಖಿಲ್ಗೆ ಹಲವು ದಿನಗಳು ಬೇಕಾಯಿತು. ಇದೀಗ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ನ ಇಕ್ಬಾಲ್ ಹುಸೇನ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ.