ರಾಜ್ಯದಲ್ಲಿ ಮತ್ತೆ ಕೇಸರಿ ಕದನ: ಬಿಜೆಪಿ ಸರ್ಕಾರದ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸಮರ

ಬಿಜೆಪಿ ಆಡಳಿತಾವಧಿಯಲ್ಲಿ ಭಾರೀ ವಿವಾದ ಹುಟ್ಟುಹಾಕಿದ್ದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆ ಹಾಗೂ ಹಿಜಾಬ್‌ ನಿಷೇಧ, ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಮುಂದಾಗುವ ಸೂಚನೆಯನ್ನು ಕಾಂಗ್ರೆಸ್‌ ನಾಯಕರು ನೀಡಿದ್ದು, ತೀವ್ರ ಚರ್ಚೆ ಹುಟ್ಟುಹಾಕಿದೆ.


ಬೆಂಗಳೂರು (ಮೇ.25): ಬಿಜೆಪಿ ಆಡಳಿತಾವಧಿಯಲ್ಲಿ ಭಾರೀ ವಿವಾದ ಹುಟ್ಟುಹಾಕಿದ್ದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆ ಹಾಗೂ ಹಿಜಾಬ್‌ ನಿಷೇಧ, ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಮುಂದಾಗುವ ಸೂಚನೆಯನ್ನು ಕಾಂಗ್ರೆಸ್‌ ನಾಯಕರು ನೀಡಿದ್ದು, ತೀವ್ರ ಚರ್ಚೆ ಹುಟ್ಟುಹಾಕಿದೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆಗಳಿಂದಾಗಿ ಜನರಿಗೆ ಸಾಕಷ್ಟುಸಮಸ್ಯೆಯಾಗುತ್ತಿದೆ. ರಾಜ್ಯದ ಆರ್ಥಿಕ ಪ್ರಗತಿಗೆ ತೊಡಕಾಗುತ್ತಿದೆ. 

ಅಂತಹ ಹಲವು ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಅವೆಲ್ಲವನ್ನೂ ಪರಿಶೀಲಿಸಿ, ಬದಲಿಸಲಾಗುವುದು. ಬದಲಿಸಲು ಸಾಧ್ಯವಾಗದಿದ್ದರೆ ಕಾಯ್ದೆಗಳನ್ನೇ ರದ್ದು ಮಾಡಲಾಗುವುದು ಎಂದರು. ರಾಜ್ಯದ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವ, ಕನ್ನಡಿಗರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಇಂತಹ ಕಾಯ್ದೆಗಳನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಲಾದ ಕಾಯ್ದೆಗಳ ಪಟ್ಟಿಮಾಡಲಾಗುತ್ತಿದೆ. ಅದರಿಂದ ರಾಜ್ಯಕ್ಕೆ ತೊಂದರೆಯಾಗುತ್ತಿದೆ ಎಂಬುದು ಮನಗಂಡರೆ ಅವುಗಳನ್ನು ರದ್ದು ಮಾಡಲಾಗುವುದು. 

Latest Videos

ನಾವು ಕರೆಂಟ್‌ ಬಿಲ್‌ ಕಟ್ಟಲ್ಲ. ಬೇಕಿದ್ದರೆ ಸಿದ್ದು, ಡಿಕೆಶಿಯನ್ನೇ ಕರೆದುಕೊಂಡು ಬನ್ನಿ: ಪಟ್ಟು ಹಿಡಿದ ಮತ್ತೆರಡು ಹಳ್ಳಿ

ಆ ಮೂಲಕ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್‌ 1 ರಾಜ್ಯವನ್ನಾಗಿಸಲಾಗುವುದು ಎಂದು ಹೇಳಿದರು. ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಜಾರಿಗೆ ತಂದ ಎಲ್ಲ ಆದೇಶಗಳನ್ನೂ ಪರಿಶೀಲನೆಗೊಳಪಡಿಸಲಾಗುವುದು. ಪಠ್ಯಪುಸ್ತಕ ಪರಿಷ್ಕರಣೆಯನ್ನು ಪರಿಶೀಲನೆ ನಡೆಸಿ, ಪರಿಷ್ಕರಣೆಯ ಅಗತ್ಯ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಹೀಗೆ ರಾಜ್ಯಕ್ಕೆ ಮಾರಕವಾಗುವ ಪ್ರತಿ ಆದೇಶವನ್ನೂ ರದ್ದು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಹಿಜಾಬ್‌ ನಿಷೇಧ ವಾಪಸ್‌: ಇನ್ನು ಹಿಜಾಬ್‌ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರೀಸ್‌, ಬಿಜೆಪಿ ಸರ್ಕಾರ ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಮಾಡಿದ್ದು ಸಂವಿಧಾನಕ್ಕೆ ವಿರುದ್ಧವಾದ ಕ್ರಮ. ಹಿಜಾಬ್‌ ಧರಿಸುವುದು ಮೂಲಭೂತ ಹಕ್ಕು. ಅದನ್ನು ಮೊಟಕುಗೊಳಿಸುವ ಸಲುವಾಗಿಯೇ ಹಿಜಾಬ್‌ ನಿಷೇಧಿಸಲಾಯಿತು. ಆ ಆದೇಶ ಹಿಂಪಡೆಯಲು ಕಾಂಗ್ರೆಸ್‌ ಸರ್ಕಾರ ಶೀಘ್ರದಲ್ಲಿ ನಿರ್ಧರಿಸಲಿದೆ. ಈ ಕುರಿತು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೇ ಘೋಷಿಸಲಾಗಿದೆ ಎಂದು ತಿಳಿಸಿದರು.

ಆಮ್ನೆಸ್ಟಿಇಂಡಿಯಾ ಸಂಸ್ಥೆ ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಶಾಲೆ-ಕಾಲೇಜಿನಲ್ಲಿ ಹಿಜಾಬ್‌ ನಿಷೇಧ ಕ್ರಮವನ್ನು ಶೀಘ್ರದಲ್ಲಿ ಹಿಂಪಡೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹ್ಯಾರೀಸ್‌ ಈ ಪ್ರತಿಕ್ರಿಯೆ ನೀಡಿದರು. ಆದರೆ, ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ್‌ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೊದಲು ತಾನು ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸುವುದು ಮೊದಲ ಆದ್ಯತೆ. ಅನಂತರ ಹಿಜಾಬ್‌ ಸೇರಿದಂತೆ ಉಳಿದ ವಿಚಾರಗಳತ್ತ ಗಮನ ಹರಿಸಲಿದೆ ಎಂದರು.

ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆಗಳಿಂದಾಗಿ ಜನರಿಗೆ ಸಾಕಷ್ಟುಸಮಸ್ಯೆಯಾಗುತ್ತಿದೆ. ರಾಜ್ಯದ ಆರ್ಥಿಕ ಪ್ರಗತಿಗೆ ತೊಡಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಲಾದ ಕಾಯ್ದೆಗಳ ಪಟ್ಟಿಮಾಡಲಾಗುತ್ತಿದೆ. ಎಲ್ಲವನ್ನೂ ಪರಿಶೀಲಿಸಿ, ಬದಲಿಸಲಾಗುವುದು. ಬದಲಿಸಲು ಸಾಧ್ಯವಾಗದಿದ್ದರೆ ಕಾಯ್ದೆಗಳನ್ನೇ ರದ್ದು ಮಾಡಲಾಗುವುದು.
- ಪ್ರಿಯಾಂಕ್‌ ಖರ್ಗೆ, ಸಚಿವ

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವುದು ನಮ್ಮ ಗುರಿಯಾಗಿದೆ. ಅದಾದ ನಂತರ ಹಿಜಾಬ್‌ ನಿಷೇಧ ರದ್ದು ಮಾಡುವುದು ಸೇರಿ ಇನ್ನಿತರ ವಿಚಾರಗಳತ್ತ ಗಮನಹರಿಸುತ್ತೇವೆ. ಸಾಂವಿಧಾನಿಕವಾಗಿ ನೀಡಿದ ಹಕ್ಕುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ.
- ಡಾ.ಜಿ.ಪರಮೇಶ್ವರ್‌, ಸಚಿವ

ನಮ್ಮ ಪೊಲೀಸರು ಯಾವತ್ತೂ ಕೇಸರೀಕರಣ ಮಾಡಿಲ್ಲ: ಡಿಕೆಶಿ ಹೇಳಿಕೆಗೆ ಬೊಮ್ಮಾಯಿ ಕಿಡಿ

ಬಿಜೆಪಿ ಸರ್ಕಾರ ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಮಾಡಿದ್ದು ಸಂವಿಧಾನಕ್ಕೆ ವಿರುದ್ಧವಾದ ಕ್ರಮ. ಹಿಜಾಬ್‌ ಧರಿಸುವುದು ಮೂಲಭೂತ ಹಕ್ಕು. ಅದನ್ನು ಮೊಟಕುಗೊಳಿಸುವ ಸಲುವಾಗಿಯೇ ಹಿಜಾಬ್‌ ನಿಷೇಧಿಸಲಾಯಿತು. ಆ ಆದೇಶ ಹಿಂಪಡೆಯಲು ಕಾಂಗ್ರೆಸ್‌ ಸರ್ಕಾರ ಶೀಘ್ರದಲ್ಲಿ ನಿರ್ಧರಿಸಲಿದೆ. ಈ ಕುರಿತು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೇ ಘೋಷಿಸಲಾಗಿದೆ.
- ಎನ್‌.ಎ. ಹ್ಯಾರೀಸ್‌ ಶಾಸಕ

click me!