
ರಾಮನಗರ (ನ.27): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, ಚುನಾವಣೆಯಲ್ಲಿ ಎರಡೂ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ವಿಜಯೇಂದ್ರ ಅವರು ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಗೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿಯಾದರು.
ಸುಮಾರು ಅರ್ಧ ಗಂಟೆ ಕಾಲ ಉಭಯ ನಾಯಕರು ಲೋಕಸಭಾ ಚುನಾವಣೆ, ಎರಡೂ ಪಕ್ಷಗಳ ಮೈತ್ರಿ ಹಾಗೂ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಗುಪ್ತ ಸಮಾಲೋಚನೆ ನಡೆಸಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ದೇಶದ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಕ್ಷೇತ್ರ ಹಂಚಿಕೆ ಕುರಿತು ಮುಂಬರುವ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು. ರಾಜ್ಯದಲ್ಲಿ ನಮ್ಮ ಮೈತ್ರಿಕೂಟ 28ಕ್ಕೆ 28 ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಲಿದೆ ಎಂದರು.
ಸಿದ್ದರಾಮಯ್ಯ ಜನತಾದರ್ಶನ ಜಾಹೀರಾತಿಗೆ ಸೀಮಿತ: ಎಚ್.ಡಿ.ಕುಮಾರಸ್ವಾಮಿ
2006ರಲ್ಲಿ ಮೈತ್ರಿ ಸರ್ಕಾರದ ಕಾಲದಲ್ಲಿ ಯಡಿಯೂರಪ್ಪ ಹಾಗೂ ನಾನು ಜೊತೆಯಾಗಿ, ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದೇವೆ. ಅದು ಮತ್ತೆ ಮರುಕಳಿಸಬೇಕು ಎಂಬುದು ರಾಜ್ಯದ ಜನರ ಆಸೆಯಾಗಿದೆ. ಮುಂಬರುವ ದಿನಗಳಲ್ಲಿ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಹೋದರರ ರೀತಿ ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ. ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಿ, ಆಡಳಿತ ಪಕ್ಷದ ತಪ್ಪುಗಳನ್ನು ದಾಖಲೆ ಸಮೇತ ಎತ್ತಿ ಹಿಡಿಯುತ್ತೇವೆ ಎಂದು ಹೇಳಿದರು. ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಸಂಸದನೂ ಇರಬಾರದು.
4 ವರ್ಷಗಳಾದರೂ ಸಿದ್ದಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯ ಶೇ.10ರಷ್ಟು ಕಾಮಗಾರಿ ಮುಗಿದಿಲ್ಲ!
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಏಕೈಕ ಸಂಸದ ಡಿ.ಕೆ.ಸುರೇಶ್ ಅವರನ್ನು ಎದುರಿಸುವ ಕುರಿತಾಗಿಯೂ ಕಾರ್ಯತಂತ್ರ ರೂಪಿಸಲಾಗುವುದು. ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ದೃಢ ನಿರ್ಧಾರ ಮಾಡಿದ್ದೇವೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಾಗಿ ಹೋಗಲು ನಿರ್ಧರಿಸಿದ್ದೇವೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದೇನೆ. ಸೀಟು ಹಂಚಿಕೆ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರು ಮಾತುಕತೆ ನಡೆಸುತ್ತಾರೆ ಎಂದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಈ ವೇಳೆ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.