ನಾಯಕತ್ವ ಬದಲಾವಣೆ ಕೂಗು: ಬಿಎಸ್‌ವೈಗೆ ಸಿಕ್ತು ಮತ್ತಷ್ಟು ಬಲ..!

By Suvarna NewsFirst Published Sep 23, 2020, 6:36 PM IST
Highlights

ಸಿಎಂ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿದೆ. ಇದರ ಮಧ್ಯೆ ಬಿಎಸ್‌ವೈ ಪರ ಸ್ವಾಮೀಜಿ ಅವರು ಬ್ಯಾಟಿಂಗ್ ಮಾಡಿದ್ದಾರೆ.

ಕಲಬುರಗಿ, (ಸೆ.23): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲಿಂಗಾಯತ ಸಮುದಾಯದ ಏಕಮೇವ ನಾಯಕರಾಗಿದ್ದು, ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಅಸಾಧ್ಯ ಎಂದು ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. 

ಕಲಬುರಗಿಯಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒಕ್ಕಲಿಗರ ಏಕಮೇವ ನಾಯಕ. ಹಾಗೆಯೇ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕುರುಬ ಸಮಾಜದ ಏಕಮೇವ ನಾಯಕ. ಅದರಂತೆಯೇ ಬಿಜೆಪಿಯಲ್ಲಿ ಯಡಿಯೂರಪ್ಪ ಲಿಂಗಾಯತ ಸಮುದಾಯದ ಏಕಮೇವ ನಾಯಕರಾಗಿದ್ದಾರೆ ಎಂದು ಹೇಳಿದರು.

ಬಿಎಸ್‌ವೈ ನಾಯಕತ್ವ ಬದಲಾವಣೆ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ: ಎಲ್ಲಾ ಊಹಾಪೋಹಗಳಿಗೆ ತೆರೆ 

ಬಿ ಎಸ್ ಯಡಿಯೂರಪ್ಪ ಅವರನ್ನು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದಕ್ಕೆ ಪಿತೂರಿಗಳು ನಡೆದಿರುವುದು ಸರಿಯಾದ ಬೆಳವಣಿಗೆಗಳಲ್ಲ. ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದಕ್ಕೆ ಯತ್ನಿಸುತ್ತಿರುವುದು ಸರಿಯಲ್ಲ. ನಾಯಕತ್ವ ಬದಲಾವಣೆ ಮಾತುಗಳು ಬಿಜೆಪಿಯಲ್ಲಿ ಆಗಾಗ ಕೇಳಿಬರುತ್ತಲೇ ಇದೆ. ಆದರೆ ಇದು ಸರಿಯಾದ ಬೆಳವಣಿಗೆಯಲ್ಲ. ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪನವರು ಬಿಟ್ಟರೆ ಅಷ್ಟು ಪ್ರಬಲ ನಾಯಕರಿಲ್ಲ. ಅಲ್ಲದೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದಾರೆ. ಬಲವಂತದಿಂದ ನಾಯಕತ್ವ ಬದಲಾವಣೆಗೆ ಯತ್ನಿಸುವುದು ಅಷ್ಟು ಸುಲಭವಲ್ಲ. ಅವರಾಗಿಯೇ ನಾಯಕತ್ವ ಬದಲಾವಣೆಗೆ ಒಪ್ಪಿದರೆ ಮಾತ್ರ ನಾಯಕತ್ವ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ನಾಯಕತ್ವ ಬದಲಾವಣೆ ಅಸಾಧ್ಯದ ಮಾತು ಎನ್ನುವ ಮೂಲಕ ಶ್ರೀಗಳು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದರು.

click me!