
ವಿಧಾನಸಭೆ (ಆ.21): ಗಣಿ ಅಕ್ರಮ ಪ್ರಕರಣಗಳಿಂದ ಸರ್ಕಾರಕ್ಕಾಗಿರುವ ನಷ್ಟ ವಸೂಲಿ ಮಾಡಲು ವಸೂಲಿ ಆಯುಕ್ತರನ್ನು ನೇಮಿಸಲು ಮುಂದಾಗಿರುವ ಸರ್ಕಾರ, ಅದಕ್ಕಾಗಿ ಹೊಸ ಕಾಯ್ದೆ ಜಾರಿಗೊಳಿಸಲು ಸಜ್ಜಾಗಿದೆ. ನೂತನ ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ 2025ಅನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಮಂಡಿಸಿದರು. ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಗುತ್ತಿಗೆದಾರರು, ಸಾಗಣಿಕೆದಾರರು, ರಫ್ತುದಾರರು, ದಾಸ್ತಾನು ಧಾರಕರು, ಖರೀದಿದಾರರು ಮತ್ತು ಮಧ್ಯವರ್ತಿಗಳು ಸೇರಿದಂತೆ ಬಹು ವಹಿವಾಟುಗಳಿಂದ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆದಿವೆ. ಅದು ವ್ಯವಸ್ಥಿತ ಒಳಸಂಚು ಹೊಂದಿರುವ ಸಂಘಟಿತ ಅಪರಾಧ. ಇದರಿಂದ ಸರ್ಕಾರಕ್ಕಾಗಿರುವ ನಷ್ಟವನ್ನು ವಸೂಲಿಗೆ ವಿಧೇಯಕ ಜಾರಿಗೊಳಿಸಲಾಗುತ್ತಿದೆ.
ಇದಕ್ಕಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ದರ್ಜೆಗಿಂತ ಕಡಿಮೆಯಿಲ್ಲದ, ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಆಯುಕ್ತರನ್ನಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ನೇಮಕವಾಗುವ ವಸೂಲಾತಿ ಆಯುಕ್ತರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ಚರ ಮತ್ತು ಸ್ಥಿರಾಸ್ತಿಗಳ ಜಪ್ತಿ ಅಥವಾ ಮುಟ್ಟುಗೋಲು ಮತ್ತು ವಸಲಾತಿ ಕಾರ್ಯಾಚರಣೆಗಳ ಮೇಲೆ ಒಟ್ಟಾರೆ ಮೇಲ್ವಿಚಾರಣಾ ಅಧಿಕಾರವನ್ನು ಹೊಂದಿರುತ್ತಾರೆ. ಅದರ ಜತೆಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು, ದಾಖಲೆ, ವರದಿಯನ್ನು ಪರಿಶೀಲಿಸಬೇಕು. ಅಲ್ಲದೆ, ಸ್ವತ್ತುಗಳ ಜಪ್ತಿಗೆ ಹೊರಡಿಸುವ ಎಲ್ಲ ಮುಟ್ಟುಗೋಲು ಆದೇಶಗಳನ್ನು ರಾಜ್ಯ ಸರ್ಕಾರದಿಂದ ದೃಢೀಕರಿಸಿಕೊಳ್ಳಬೇಕು. ಅದರ ಜತೆಗೆ ಜಪ್ತಿ ಅಥವಾ ಮುಟ್ಟುಗೋಲಿಗೂ ಮುನ್ನ ಕಾನೂನು ಪ್ರಕಾರ ಸೂಚನೆಗಳನ್ನು ಪಾಲಿಸಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗುತ್ತಿದೆ.
ಕುರಿಗಾಹಿಗಳ ವಿರುದ್ಧದ ದೌರ್ಜನ್ಯ ತಡೆಗೆ ಕಾಯ್ದೆ: ರಾಜ್ಯದ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ಹಿತರಕ್ಷಣೆಗಾಗಿ, ಅವರಿಗೆ ಭದ್ರತೆ ಒದಗಿಸುವ ಉದ್ದೇಶದೊಂದಿಗೆ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕ 2025ನ್ನು ಪಶುಸಂಗೊಪನಾ ಸಚಿವ ಕೆ. ವೆಂಕಟೇಶ್ ಮಂಡಿಸಿದರು. ವಿಧೆಯಕದ ಅಡಿಯಲ್ಲಿ ಅಲೆಮಾರಿ ಕುರಿಗಾಹಿಗಳ ಪತ್ತೆ ಮತ್ತು ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಫಲಾನೂಭವಿಯಾಗಿ ನೊಂದಾಯಿಸಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡವರು ಸರ್ಕಾರದಿಂದ ಗುರುತಿನ ಚೀಟಿ ನೀಡಲಾಗುವುದು. ಅದರ ಮೂಲಕ ವಸತಿ ಸೌಲಭ್ಯ, ವಿಮೆ, ಆರೋಗ್ಯ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಪಡೆಯಲು ಅರ್ಹರಾಗಲಿದ್ದಾರೆ. ಅಲ್ಲದೆ, ಕ್ಷೇಮಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ಮಂಡಳಿಯನ್ನು ರಚಿಸಲಾಗುತ್ತದೆ.
ಜಮ್ಮಾ ಬಾಣೆ ಭೂ ಹಿಡುವಳಿಸಮಸ್ಯೆ ನಿವಾರಣೆಗೆ ತಿದ್ದುಪಡಿ: ಕೊಡಗು ಭಾಗದಲ್ಲಿನ ಜಮ್ಮಾ ಬಾಣೆ ಭೂ ಹಿಡುವಳಿ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಜಮ್ಮಾ ಬಾಣೆ ಭೂ ಹಿಡುವಳಿ ವ್ಯವಸ್ಥೆಯು ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಿಸುತ್ತಿದೆ. ಅದರಂತೆ ಭೂಮಿ ಹಕ್ಕು ದಾಖಲೆಯಲ್ಲಿ ಸ್ಪಷ್ಟ ನಮೂದಿಲ್ಲದಿದ್ದರೂ, ಐತಿಹಾಸಿಕವಾಗಿ ಭೂಮಿಗಳನ್ನು ಅವಿಭಕ್ತ ಕುಟುಂಬಗಳ ಸದಸ್ಯರು ಸಾಂಪ್ರದಾಯಿಕ ಹಕ್ಕುಗಳ ಆಧಾರದ ಮೇಲೆ ಹೊಂದಿದ್ದು ಮತ್ತು ಅನುಭವಿಸುತ್ತಿದ್ದಾರೆ. ಕಾಲಾಂತದಲ್ಲಿ ಜಮ್ಮಾ ಬಾಣೆ ಹಿಡುವಳಿಗಳಿಗೆ ಸಂಬಂಧಿಸಿದಂತೆ ಮಾಲಿಕತ್ವ ವಾರಸು, ಉತ್ತರ ಜೀವಿತಾಧಿಕಾರ ಮತ್ತು ಪರಭಾರೆಗಳ ನಿಖರವಾದ ದಾಖಲೆಗಳನ್ನು ನಿರ್ವಹಿಸುವಲ್ಲಿ ಸಂಕೀರ್ಣತೆಗಳು ಉದ್ಭವಿಸುತ್ತಿವೆ. ಈ ಸಮಸ್ಯೆ ನಿವಾರಿಸಲು ಜಮ್ಮಾ ಬಾಣೆ ಹಿಡುವಳಿಗಳಿಗೆ ಸಂಬಂಧಿಸಿದಂತೆ ಅವಿಭಕ್ತ ಕುಟುಂಬದ ಸದಸ್ಯರ ವಿವರಗಳನ್ನುಹಕ್ಕು ಬದಲಾವಣೆ ರಿಜಿಸ್ಟರಿನಲ್ಲಿ ಸೇರಿಸುವುದನ್ನು ಕಡ್ಡಾಯಗೊಳಿಸುವುದು. ಅಂತಹ ಭೂಮಿಯಲ್ಲಿ ಅವಿಭಕ್ತ ಕುಟುಂಬದ ಸದಸ್ಯರಾಗಿ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡ ವರದಿಯನ್ನು ಮಾಡುವುದು ಸೇರಿದಂತೆ ಮತ್ತಿತರ ಅಂಶಗಳನ್ನೊಳಗೊಂಡು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.
ಲಿಫ್ಟ್ ಅಳವಡಿಕೆ ಕಾಯ್ದೆ ತಿದ್ದುಪಡಿ: ಲಿಫ್ಟ್, ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್‌ಗಳನ್ನು ಭಾರತೀಯ ಗುಣಮಟ್ಟ ಬ್ಯೂರೋ ಪದ್ಧತಿಗಳ ಅಸ್ತಿತ್ವದಲ್ಲಿರುವ ಸಂಬಂಧಪಟ್ಟ ಸಂಹಿತೆ ಮತ್ತು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕ್ರಮಗಳು) ವಿನಿಮಯಗಳು ಅನ್ವಯ ಸ್ಥಾಪಿಸಬೇಕು ಎಂದು ಸೂಚಿಸುವ ಉದ್ದೇಶದ ಕರ್ನಾಟಕ ಲಿಫ್ಟ್‌ಗಳ, ಎಸ್ಕಲೇಟರ್‌ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‌ಗಳ (ತಿದ್ದುಪಡಿ) ವಿಧೇಯಕ 2025ನ್ನು ಮಂಡಿಸಲಾಯಿತು. ತಿದ್ದುಪಡಿ ವಿಧೆಯಕದಂತೆ ಲಿಫ್ಟ್, ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್‌ಗಳ ಅಳವಡಿಕೆಯ ಮಾಹಿತಿಯನ್ನು ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.