ಕರ್ನಾಟಕ ಪೂರಕ ಅಂದಾಜು: ₹3,352.57 ಕೋಟಿ ಮೊತ್ತ ವಿಧಾನಸಭೆಯಲ್ಲಿ ಮಂಡನೆ

Published : Aug 21, 2025, 09:27 AM IST
vidhan soudha

ಸಾರಾಂಶ

ವಿಧಾನಸಭಾ ಸದಸ್ಯರಿಗೆ ವಾಹನ ಖರೀದಿಗಾಗಿ ಮುಂಗಡ ಮಂಜೂರು ಮಾಡಲು ₹3.20 ಕೋಟಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರ ಅಧಿಕೃತ ಉಪಯೋಗಕ್ಕೆ ಹೊಸ ವಾಹನ ಖರೀದಿಗೆ ₹30 ಲಕ್ಷ ವೆಚ್ಚ ಮಾಡಲಾಗಿದೆ.

ವಿಧಾನಸಭೆ (ಆ.21): ರಾಜ್ಯ ಸರ್ಕಾರದ 2025-26ನೇ ಸಾಲಿನ ₹3,352.57 ಕೋಟಿ ಮೊತ್ತದ ಪೂರಕ ಅಂದಾಜು (ಮೊದಲನೇ ಕಂತು) ಅನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಅವರು ಪೂರಕ ಅಂದಾಜು ಮಂಡಿಸಿದರು. ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶಕ್ಕೆ 10 ಕೋಟಿ ರು. ವೆಚ್ಚ ಮಾಡಿರುವ ಬಗ್ಗೆ ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಜರುಗಿದ ಸಚಿವ ಸಂಪುಟ ಕಾರ್ಯಕ್ರಮದ ವೆಚ್ಚಕ್ಕಾಗಿ 3.69 ಕೋಟಿ ರು. ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದ ಎಲ್ಲಾ ನೋಂದಣಿ ಮತ್ತು ಮುದ್ರಾಂಕ ಕಚೇರಿಗಳಿಗೆ ಐಟಿ ಉಪಕರಣಗಳ ಪೂರೈಕೆ, ಅಳವಡಿಕೆ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಅಗತ್ಯ ಇರುವ ಮಾನವ ಸಂಪನ್ಮೂಲ ವೆಚ್ಚಗಳನ್ನು ಪಾವತಿಸಲು 50 ಕೋಟಿ ರು. ಒದಗಿಸಲಾಗಿದೆ.

ಶಾಸಕರ ವಾಹನ ಖರೀದಿಗೆ 3.20 ಕೋಟಿ: ವಿಧಾನಸಭಾ ಸದಸ್ಯರಿಗೆ ವಾಹನ ಖರೀದಿಗಾಗಿ ಮುಂಗಡ ಮಂಜೂರು ಮಾಡಲು ₹3.20 ಕೋಟಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರ ಅಧಿಕೃತ ಉಪಯೋಗಕ್ಕೆ ಹೊಸ ವಾಹನ ಖರೀದಿಗೆ ₹30 ಲಕ್ಷ ವೆಚ್ಚ ಮಾಡಲಾಗಿದೆ. ಮುಖ್ಯ ಸಚೇತಕರ ಅಧಿಕೃತ ಉಪಯೋಗಕ್ಕೆ ಹೊಸ ವಾಹನ ಖರೀದಿಗೆ ₹31 ಲಕ್ಷ ನೀಡಲಾಗಿದೆ. ವಿಧಾನ ಪರಿಷತ್‌ ಸಚಿವಾಲಯದ ಅಧಿಕಾರಿ/ಸಿಬ್ಬಂದಿಗೆ ಪ್ರಯಾಣ ವೆಚ್ಚ ಪಾವತಿಸಲು ₹1.31 ಕೋಟಿ ನೀಡಲಾಗಿದೆ. ಅಂತೆಯೇ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಮರುಪಾವತಿಸಲು ₹21 ಲಕ್ಷ ನೀಡಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ.

ಕಚೇರಿ ನಿರ್ವಹಣೆಗೆ 2.30 ಕೋಟಿ ರು: ಐದನೇ ರಾಜ್ಯ ಹಣಕಾಸು ಆಯೋಗದ ಕಚೇರಿ ನಿರ್ವಹಣೆಗೆ 2.30 ಕೋಟಿ ರು, ರಾಜ್ಯ ಗಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧೀನದ ಮಾಧ್ಯಮ ಕೋಶದ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಗಾಗಿ 32.90 ಲಕ್ಷ ರು, ಕುಮಾರ ಕೃಪಾ ಅತಿಥಿ ಗೃಹ ದುರಸ್ತಿ ಕಾಮಗಾರಿ ವೆಚ್ಚಕ್ಕಾಗಿ 9.95 ಲಕ್ಷ ರು, ಕೆ.ಆರ್‌.ಪುರ ಕೆಎಸ್‌ಆರ್‌ಟಿಸಿ ಹೊಸ ಸ್ಯಾಟಲೈಟ್‌ ಬಸ್‌ ನಿಲ್ದಾಣ ನಿರ್ಮಾಣ ಸಂಬಂಧ ಭಾರತೀಯ ದೂರಸಂಪರ್ಕ ಉದ್ಯಮಕ್ಕೆ ಸೇರಿದ ಜಮೀನು ಖರೀದಿಗೆ ಬಡ್ಡಿ ರಹಿತ ಸಾಲ ನೀಡಲು 4.70 ಕೋಟಿ ರು. ನೀಡಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ತಿಳಿಸಲಾಗಿದೆ.

ಕೇರಳ 100 ಕುಟುಂಬಕ್ಕೆ ಪುನರ್ವಸತಿಗೆ ₹10 ಕೋಟಿ: ರಾಜ್ಯದಿಂದ ಉತ್ತರಾಖಂಡಕ್ಕೆ ತೆರಳಿದ ವೇಳೆ ಪ್ರಕೃತಿ ವೈಪರೀತ್ಯದಿಂದ ಮೃತಪಟ್ಟವರ ದೇಹಗಳನ್ನು ಮತ್ತು ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿತ್ತು. ನೆರವಿಗಾಗಿ ರಾಜ್ಯದಿಂದ ನಿಯೋಜಿಸಲಾದ ಅಧಿಕಾರಿಗಳ ವೆಚ್ಚಕ್ಕಾಗಿ 56.64 ಲಕ್ಷ ರು. ವೆಚ್ಚ ಮಾಡಲಾಗಿದೆ. ಕೇರಳದ ವಯನಾಡ್‌ ಜಿಲ್ಲೆಯ ಮೆಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ರು. ಸೇರಿ ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಒಟ್ಟು 10.56 ಕೋಟಿ ರು. ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮೈಷುಗರ್‌ ಸಕ್ಕರೆ ಕಾರ್ಖಾನೆಗೆ ₹10 ಕೋಟಿ: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗೆ ವೇತನ ಬಾಕಿ ಮತ್ತು ಪ್ರಸಕ್ತ ಸಾಲಿನ ವೇತನ ಪಾವತಿಗಾಗಿ 5.95 ಕೋಟಿ ರು. ಒದಗಿಸಲಾಗಿದೆ. ಮೈಸೂರು ಲ್ಯಾಂಪ್‌ ವರ್ಕ್ಸ್‌ ಲಿಮಿಟೆಡ್‌, ಕೆಎಸ್‌ಡಿಎಲ್‌ನಿಂದ ಪಡೆದಿರುವ ಸಾಲ ಹಿಂದಿರುಗಿಸಲು 10 ಕೋಟಿ ರು, ಮೈಷುಗರ್‌ ಸಕ್ಕರೆ ಕಂಪನಿಗೆ 2025-26ನೇ ಸಾಲಿನ ಹಂಗಾಮಿಗೆ ಕಬ್ಬು ಅರೆಯಲು ಅಗತ್ಯವಿರುವ ದುಡಿಯುವ ಬಂಡವಾಳಕ್ಕಾಗಿ 10 ಕೋಟಿ ರು. ಒದಗಿಸಲಾಗಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನ ಖರೀದಿಗೆ 1 ಕೋಟಿ ರು. ಒದಗಿಸಲಾಗಿದೆ. ಬೆಂಗಳೂರಲ್ಲಿ ನಡೆಯುವ 11ನೇ ಕಾಮನ್‌ ವೆಲ್ತ್‌ ಸಂಸದೀಯ ಸಂಘದ ಭಾರತ ವಿಭಾಗದ ಸಮ್ಮೇಳನದ ವೆಚ್ಚಗಳಿಗಾಗಿ 10 ಕೋಟಿ ರು. ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!