ಹೊಸದಾಗಿ ಜಾತಿಗಣತಿ: 90 ದಿನದಲ್ಲಿ ಸಮೀಕ್ಷೆ ನಡೆಸಲು ಸಂಪುಟ ನಿರ್ಧಾರ

Kannadaprabha News   | Kannada Prabha
Published : Jun 13, 2025, 04:22 AM IST
Karnataka CM Siddaramaiah (Photo: ANI)

ಸಾರಾಂಶ

ರಾಜ್ಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಗಳಿಗೆ ಕಾರಣವಾಗಿದ್ದ ಜಾತಿಗಣತಿ ವರದಿ ವಿಚಾರವಾಗಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು (ಜೂ.13): ರಾಜ್ಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಗಳಿಗೆ ಕಾರಣವಾಗಿದ್ದ ಜಾತಿಗಣತಿ ವರದಿ ವಿಚಾರವಾಗಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಕಾಂತರಾಜು ಅಧ್ಯಕ್ಷತೆಯಲ್ಲಿ 2015ರಲ್ಲಿ ರಚಿಸಿದ್ದ ಆಯೋಗ ಹಾಗೂ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ವರದಿ ಬದಲಿಗೆ ಹೊಸದಾಗಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಮಧುಸೂದನ ನಾಯಕ್‌ ನೇತೃತ್ವದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆಯನ್ನು 90 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ತೀರ್ಮಾನಿಸಲಾಗಿದೆ. ಆದರೆ ಈಗಷ್ಟೇ ಶಾಲಾ-ಕಾಲೇಜು ಶುರುವಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಶಿಕ್ಷಕರು ಲಭ್ಯವಾಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಯಾವಾಗ ಸಮೀಕ್ಷೆ ಶುರು ಮಾಡಬೇಕು ಎಂಬುದನ್ನು ಆಯೋಗದೊಂದಿಗೆ ಚರ್ಚಿಸಿ ತೀರ್ಮಾನಿಸಲು ಸಂಪುಟದಲ್ಲಿ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಅವರು ಸಲ್ಲಿಸಿರುವ ವರದಿ ಹತ್ತು ವರ್ಷಗಳಷ್ಟು ಹಳೆಯದು. ಹತ್ತು ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಬದಲಾವಣೆಗಳೂ ಆಗಿರುತ್ತವೆ. ಆದ್ದರಿಂದ ಹತ್ತು ವರ್ಷಗಳ ನಂತರ ಸಮೀಕ್ಷೆ ನಡೆಸಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮದಲ್ಲೇ ಹೇಳಿದೆ. ಜತೆಗೆ ವರದಿಯಲ್ಲಿನ ಜನಸಂಖ್ಯೆ ಅಂಕಿ-ಅಂಶಗಳ ಬಗ್ಗೆ ಹಲವು ಜಾತಿಗಳಿಂದ ವಿರೋಧವಿದ್ದು, ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿಲ್ಲ ಎಂಬ ಆರೋಪಗಳೂ ಇವೆ. ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಇದಕ್ಕೆ ಪೂರಕವಾಗಿಯೇ ಸಲಹೆ ನೀಡಿದೆ. ಹೀಗಾಗಿ ಎಲ್ಲಾ ಸದಸ್ಯರು ಒಮ್ಮತದಿಂದ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿದರು ಎಂದು ತಿಳಿದುಬಂದಿದೆ.

ಕೆಲವರಿಂದ ತಿದ್ದುಪಡಿಗೆ ಸಲಹೆ: ಮೊದಲಿಗೆ ಎಚ್.ಸಿ.ಮಹದೇವಪ್ಪ ಸೇರಿ ಕೆಲ ಸದಸ್ಯರು, ಸಂಪುಟ ಸಭೆಯಲ್ಲಿ ಮಂಡಿಸಿರುವ ವರದಿಯಲ್ಲಿ ಯಾರು ತಮ್ಮ ಗಣತಿ ಮಾಡಿಲ್ಲ ಎನ್ನುತ್ತಿದ್ದಾರೋ ಅವರಿಂದ ಮತ್ತೊಮ್ಮೆ ಮಾಹಿತಿ ಪಡೆದು ತಿದ್ದುಪಡಿ ಮಾಡಬಹುದು ಎಂದು ಸಭೆಯಲ್ಲಿ ಸಲಹೆ ನೀಡಿದರು. ಆದರೆ, ವರದಿಯನ್ನು ಪರಿಷ್ಕರಣೆ ಮಾಡಿದರೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ. ಜತೆಗೆ ಅಧಿನಿಯಮದ ನಿಯಮಗಳಲ್ಲೂ 10 ವರ್ಷ ಬಳಿಕ ಹೊಸದಾಗಿ ಸಮೀಕ್ಷೆ ನಡೆಸಲು ಅವಕಾಶವಿದೆ. ಅದನ್ನು ಬಳಸಿಕೊಂಡು ಹೊಸದಾಗಿ ಸಮೀಕ್ಷೆ ನಡೆಸಿ ಯಾವುದೇ ಗೊಂದಲಗಳಿಲ್ಲದೆ ನಿರ್ವಹಣೆ ಮಾಡಬೇಕು ಎಂದು ಒಮ್ಮತದ ತೀರ್ಮಾನ ಮಾಡಲಾಯಿತು ಎಂದು ತಿಳಿದುಬಂದಿದೆ.

10 ವರ್ಷ ಕಳೆದಿರುವ ಕಾರಣ ಹೊಸ ಸಮೀಕ್ಷೆ: ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಮಾಡಿ ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 (2) ರಂತೆ ಹೊಸದಾಗಿ ಮರು ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪಕ್ಷದ ವರಿಷ್ಠರ ಸಲಹೆ: ಹೈಕಮಾಂಡ್‌ ಒತ್ತಡಕ್ಕೆ ಮಣಿದು ಈ ನಿರ್ಧಾರವೇ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಯಾರ ಒತ್ತಡಕ್ಕೂ ಮಣಿದಿಲ್ಲ. ಪಕ್ಷದ ವರಿಷ್ಠರು ನನ್ನನ್ನು ಮತ್ತು ಉಪಮುಖ್ಯಮಂತ್ರಿಗಳನ್ನು ಕರೆದು ವರದಿ 10 ವರ್ಷಗಳಷ್ಟು ಹಳೆಯದಾಗಿದ್ದು, ಕಾನೂನು ಪ್ರಕಾರ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿರುತ್ತವೆ ಎಂದು ಸಲಹೆ ನೀಡಿದ್ದಾರೆ. ಇದಕ್ಕೂ ಮೊದಲು ನಡೆದಿದ್ದ ಸಚಿವ ಸಂಪುಟ ಸಭೆಗಳಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತಿದ್ದುಪಡಿ ವಿಧೇಯಕ (2014) ಸೆಕ್ಷನ್ 11 ಕಲಂ (1) ರ ಪ್ರಕಾರ ವರದಿಗೆ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗವಾಗಿ ಉಳಿಯದೇ ಹೋಗಿರುವ ವರ್ಗಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಪಟ್ಟಿಗೆ ಸೇರಿಸಲು ಅವಕಾಶ ನೀಡಿದೆ. ಈ ಸಂಬಂಧ ಕಲಂ 2ರಲ್ಲಿ ಹೇಳಿದಂತೆ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯಕ್ ಅವರ ಸಲಹೆಯನ್ನೂ ಪಡೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಹಾಗಾದರೆ ಹಳೆಯ ವರದಿಗೆ ಅಸ್ತಿತ್ವ ಇಲ್ಲವೇ ಎಂಬ ಪ್ರಶ್ನೆಗೆ, ಕಾಯ್ದೆಯ ಸೆಕ್ಷನ್ 11ರಂತೆ ಹತ್ತು ವರ್ಷಗಳ ನಂತರ ಸಮೀಕ್ಷೆಯ ವರದಿ ಮಾನ್ಯವಾಗುವುದಿಲ್ಲ. ಜನಸಂಖ್ಯೆ, ಶೈಕ್ಷಣಿಕ ಸಾಮಾಜಿಕ ಬೆಳವಣಿಗೆಗಳು ಆಗಿರುತ್ತವೆ ಎಂದು ಹೇಳಿದರು.

ಆಯೋಗದ ಸಲಹೆ ಪಡೆಯಲಾಗುವುದು: ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ-1995ರ ಸೆಕ್ಷನ್ 9 (2) ರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ, ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಹೇಳಿದೆ. ಆದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸುವ ಕುರಿತು ಇಂದು ಸಚಿವ ಸಂಪುಟದ ನಿರ್ಧಾರ ಆಗಿದ್ದು, ಮುಂದಿನ ದಿನಗಳಲ್ಲಿ ಆಯೋಗದ ಸಲಹೆಯನ್ನೂ ಪಡೆಯಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾನೂನು ಪ್ರಕಾರವೇ ತೀರ್ಮಾನ: ಕಾಂತರಾಜು ನೇತೃತ್ವದ ಆಯೋಗ ಸಮೀಕ್ಷೆ ಮಾಡಿ ಹತ್ತು ವರ್ಷಗಳು ಕಳೆದಿದೆ. ಹತ್ತು ವರ್ಷಗಳಾದ ನಂತರ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಸೆಕ್ಷನ್ 11(1) ರಲ್ಲಿ ಹೇಳಲಾಗಿದ್ದು, ಅದರ ಪ್ರಕಾರ ತೀರ್ಮಾನ ತೆಗೆದುಕೊಂಡಿದ್ದೇವೆ. ಇನ್ನು ಕೇಂದ್ರ ಸರ್ಕಾರವೂ ಜಾತಿಗಣತಿ ನಡೆಸುವುದಾಗಿ ಹೇಳಿದೆ. ಆದರೆ ನಮ್ಮ ನಾಯಕರು ಪ್ರಶ್ನೆಮಾಡಿದರೂ ಅವರು ಎಲ್ಲೂ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ. ಹೀವಾಗಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಅನ್ವಯ ಸಾಮಾಜಿಕ ನ್ಯಾಯ ನೀಡಲು ಮುಂದಾಗಿದ್ದೇವೆ. 90 ದಿನಗಳ ಒಳಗಾಗಿ ಸಮೀಕ್ಷೆ ನಡೆಸಲು ಆಯೋಗವನ್ನು ಕೋರುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಹೊಸ ಸಮೀಕ್ಷೆಯಲ್ಲಿ ಆರ್ಥಿಕತೆ ಅಂಶ ಇರಲ್ಲ: ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ನಡೆಸಲಾಗುತ್ತದೆ. ಆರ್ಥಿಕತೆಯ ಅಂಶ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ‘ಹಿಂದಿನ ಆಯೋಗದಲ್ಲೂ ಆರ್ಥಿಕ ಸಮೀಕ್ಷೆ ನಡೆಸಿಲ್ಲ. ಎಸ್ಸಿ-ಎಸ್ಟಿಗೆ ಮೀಸಲಾತಿ ಕಲ್ಪಿಸಲು ಸಾಮಾಜಿಕ ಮಾನದಂಡ ಮಾತ್ರ ಸಾಕು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಮಾತ್ರ ಸಾಕಾಗುತ್ತದೆ. ಹೀಗಾಗಿ ಹಿಂದಿನ ಆಯೋಗದಲ್ಲೂ ಆರ್ಥಿಕ ಸಮೀಕ್ಷೆ ನಡೆಸಿಲ್ಲ. ಕೆಲವರು ಗೊಂದಲದಿಂದ ಆ ಪದ ಬಳಕೆ ಮಾಡಿದ್ದರು. ವಾಸ್ತವವಾಗಿ ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದಾರೆ.

ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಮಾಡಿ ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 (2) ರಂತೆ ಹೊಸದಾಗಿ ಮರು ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಸಮೀಕ್ಷೆ ವಿಚಾರದಲ್ಲಿ ನಾವು ಯಾರ ಒತ್ತಡಕ್ಕೂ ಮಣಿದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ