ಶ್ರೇಷ್ಠ ನರರೋಗ ತಜ್ಞ, ಆಪರೇಷನ್ ಕಿಂಗ್ ಎಂದೇ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಡಾ.ಕ್ರಾಂತಿಕಿರಣ ಇದೀಗ ತಮ್ಮ ವೃತ್ತಿ ಬದುಕಿನೊಂದಿಗೆ ರಾಜಕೀಯ ಪ್ರವೇಶಿಸಿದ್ದಾರೆ. ಇವರೀಗ ಆಪರೇಷನ್ ಥಿಯೇಟರ್‌ನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.23): ಶ್ರೇಷ್ಠ ನರರೋಗ ತಜ್ಞ, ಆಪರೇಷನ್ ಕಿಂಗ್ ಎಂದೇ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಡಾ.ಕ್ರಾಂತಿಕಿರಣ ಇದೀಗ ತಮ್ಮ ವೃತ್ತಿ ಬದುಕಿನೊಂದಿಗೆ ರಾಜಕೀಯ ಪ್ರವೇಶಿಸಿದ್ದಾರೆ. ಇವರೀಗ ಆಪರೇಷನ್ ಥಿಯೇಟರ್‌ನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಪ್ರಚಾರದ ವೇಳೆಯೂ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಎಂಬಿಬಿಎಸ್, ಎಂಎಸ್ ಮಾಡಿಕೊಂಡು ನ್ಯೂರೋ ಸರ್ಜನ್ ಆಗಿರುವ ಡಾ.ಕ್ರಾಂತಿಕಿರಣ, ಹುಬ್ಬಳ್ಳಿ ಕಿಮ್ಸ್‌ನಲ್ಲಿ ನರರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಕೆಲ ವರ್ಷಗಳ ಕೆಳಗೆ ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿ, ತಮ್ಮದೇ ಆದ ‘ಬಾಲಾಜಿ ನ್ಯೂರೋ ಸೈನ್ಸ್ ಆ್ಯಂಡ್ ಟ್ರೋಮಾ ಸಂಸ್ಥೆ’ ಎಂಬ ಹೆಸರಲ್ಲಿ ಆಸ್ಪತ್ರೆ ತೆರೆದು ಯಶಸ್ವಿ ಸೇವೆ ಸಲ್ಲಿಸುತ್ತಿದ್ದಾರೆ.
ಬಡವರ ಬಂಧು: ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಇವರು ಬಡವರ ಬಂಧು ಎಂದೇ ಖ್ಯಾತಿ ಪಡೆದವರು. ಕೊರೋನಾ ವೇಳೆ ಹಗಲಿರಳು ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ. ವೃತ್ತಿ ವೈದ್ಯಕೀಯವಾದರೂ ಸಾಮಾಜಿಕ ಸೇವೆಯಲ್ಲಿ ಎತ್ತಿದ ಕೈ. ಬಡವರಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ನೂರಾರು ಆರೋಗ್ಯ ಶಿಬಿರಗಳನ್ನು ತಮ್ಮ ಸಂಸ್ಥೆಯಿಂದ ಆಯೋಜಿಸಿ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡುತ್ತಿದ್ದಾರೆ. ಬಡವರು, ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಸ್ಲಂಗಳಲ್ಲೇ ಹೆಚ್ಚೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ವಿಶೇಷ. ಆರೋಗ್ಯ ಶಿಬಿರ ಇದ್ದ ಬಡಾವಣೆಗಳಲ್ಲಿ ಏನಾದರೂ ಸೌಲಭ್ಯಗಳ ಕೊರತೆ ಕಂಡು ಬಂದರೆ ಬಿಜೆಪಿಯಲ್ಲಿನ ಸ್ನೇಹಿತರಿಗೆ ಹೇಳಿ ಸೌಲಭ್ಯ ಕಲ್ಪಿಸಿಕೊಟ್ಟಹಿರಿಮೆ ಇವರದು. ಹೀಗೆ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ವೈದ್ಯ ವೃತ್ತಿಯೊಂದಿಗೆ ಸದ್ದಿಲ್ಲದೇ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.
ರಾಜ್ಯದ ಎಲ್ಲ ಕಾಂಗ್ರೆಸಿಗರ ಫೋನ್ ಕದ್ದಾಲಿಕೆ: ಹರಿಪ್ರಸಾದ್ ಆರೋಪ
ಬಿಜೆಪಿಯಲ್ಲಿ ಹೆಜ್ಜೆ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ಚಟುವಟಿಕೆ ಮೆಚ್ಚುಗೆಯಾಗಿ ಬಿಜೆಪಿಯತ್ತ ವಾಲಿದರು ಡಾ.ಕ್ರಾಂತಿಕಿರಣ. ಬಿಜೆಪಿ ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ ಇವರದು ಮುಂಚೂಣಿಯ ಪಾತ್ರ. ಜನರ ಬಗ್ಗೆ ಇವರಿಗಿರುವ ತುಡಿತ, ಕಾಳಜಿಯನ್ನು ನೋಡಿ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದ ತನ್ನ ಅಭ್ಯರ್ಥಿಯನ್ನಾಗಿ ಬಿಜೆಪಿ ಇವರನ್ನು ಕಣಕ್ಕಿಳಿಸಿದೆ.
ಪ್ರಚಾರದಲ್ಲೂ ಚಿಕಿತ್ಸೆ: ಪ್ರಥಮ ಬಾರಿಗೆ ಚುನಾವಣೆ ಎದುರಿಸುತ್ತಿರುವ ಡಾ.ಕ್ರಾಂತಿಕಿರಣ, ಪ್ರಚಾರದಲ್ಲೂ ವಿನೂತನ ಬಗೆಯನ್ನೇ ಅನುಸರಿಸುತ್ತಿದ್ದಾರೆ. ತಮ್ಮ ಕಾರಿನಲ್ಲೇ ‘ಡಾಕ್ಟರ್ ಕಿಟ್’ ಇಟ್ಟುಕೊಂಡಿರುತ್ತಾರೆ. ಎಲ್ಲೇ ಪ್ರಚಾರಕ್ಕೆ ತೆರಳಲಿ, ಅಲ್ಲಿ ಮತದಾರರಿಗೆ ಆರೋಗ್ಯದ ಟಿಫ್ಸ್ ಕೊಡುತ್ತಾರೆ. ಜತೆಗೆ, ಈ ಸಲ ಬೇಸಿಗೆಯ ಬೇಗೆ ಜಾಸ್ತಿ ಇರುವುದರಿಂದ ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ? ಎಂದೆಲ್ಲ ತಿಳಿಸುತ್ತಾರೆ. ಯಾರಾದರೂ ಆರೋಗ್ಯ ಸರಿಯಿಲ್ಲವೆಂದರೆ ಡಾಕ್ಟರ್ ಕಿಟ್ ತೆರೆದು ಅಲ್ಲೇ ಆರೋಗ್ಯ ತಪಾಸಿಸಿ ಮಾತ್ರೆಗಳನ್ನು ಬರೆದು ಕೊಡುತ್ತಾರೆ.
‘ನಾನು ಮೊದಲು ವೈದ್ಯ, ನಂತರ ರಾಜಕಾರಣಿ. ಪ್ರಚಾರದ ವೇಳೆ ಯಾರಿಗಾದರೂ ಆರೋಗ್ಯದ ಸಮಸ್ಯೆ ಕಂಡು ಬಂದರೆ ಅಲ್ಲೇ ಚಿಕಿತ್ಸೆ ನೀಡುತ್ತೇನೆ. ಇದು ನನ್ನ ವೃತ್ತಿಧರ್ಮ’ ಎನ್ನುತ್ತಾರೆæ ಡಾ.ಕ್ರಾಂತಿಕಿರಣ. ‘ನನ್ನನ್ನು ನಂಬಿ ಬೇರೆ, ಬೇರೆ ಊರುಗಳಿಂದ ಜನರು ಆಸ್ಪತ್ರೆಗೆ ಬಂದಿರುತ್ತಾರೆ. ನಾ ಇಲ್ಲ ಎಂದರೆ ಅವರಿಗೆ ನಿರಾಸೆಯಾಗುತ್ತದೆ. ಅದಕ್ಕಾಗಿ ಪ್ರಚಾರದ ಮಧ್ಯೆಯೇ ಸಮಯ ಮಾಡಿಕೊಂಡು ರೋಗಿಗಳನ್ನು ತಪಾಸಣೆ ಮಾಡುತ್ತೇನೆ’ ಎನ್ನುತ್ತ ಸದಾ ಮಾನವೀಯ ಸೇವೆ ಮಾಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಪಡೆದಿಲ್ಲ: ಡಿ.ಕೆ.ಶಿವಕುಮಾರ್
ನಾನು ಮೊದಲು ವೈದ್ಯ, ನಂತರ ರಾಜಕಾರಣಿ. ಪ್ರಚಾರದ ವೇಳೆ ಯಾರಿಗಾದರೂ ಆರೋಗ್ಯದ ಸಮಸ್ಯೆ ಕಂಡು ಬಂದರೆ ಅಲ್ಲೇ ಚಿಕಿತ್ಸೆ ನೀಡುತ್ತೇನೆ. ಇದು ನನ್ನ ವೃತ್ತಿಧರ್ಮ.
- ಡಾ.ಕ್ರಾಂತಿಕಿರಣ, ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ