ವಿಧಾನಸಭೆ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಬಂಡಾಯ ಎದ್ದಿರುವ ಅಭ್ಯರ್ಥಿಗಳಿಂದ ಗೆಲುವಿನ ಮೇಲೆ ಎಲ್ಲಿ ಪರಿಣಾಮ ಬೀರುತ್ತದೆ ಎಂದುಕೊಂಡು ಅವರನ್ನು ಹಿಂದಕ್ಕೆ ಸರಿಸುವ ಪ್ರಯತ್ನಕ್ಕೆ ಪಕ್ಷಗಳ ಮುಖಂಡರು ಇದೀಗ ಕೈ ಹಾಕಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.23) : ವಿಧಾನಸಭೆ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಬಂಡಾಯ ಎದ್ದಿರುವ ಅಭ್ಯರ್ಥಿಗಳಿಂದ ಗೆಲುವಿನ ಮೇಲೆ ಎಲ್ಲಿ ಪರಿಣಾಮ ಬೀರುತ್ತದೆ ಎಂದುಕೊಂಡು ಅವರನ್ನು ಹಿಂದಕ್ಕೆ ಸರಿಸುವ ಪ್ರಯತ್ನಕ್ಕೆ ಪಕ್ಷಗಳ ಮುಖಂಡರು ಇದೀಗ ಕೈ ಹಾಕಿದ್ದಾರೆ.
ಏಳು ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಮುಗಿದು ಪರಿಶೀಲನೆಯೂ ಮುಗಿದಿದೆ. ಇದೀಗ ನಾಮಪತ್ರ ಹಿಂಪಡೆಯಲು ಏ. 24 ಕೊನೆಯ ದಿನವಾಗಿದೆ. ಅಷ್ಟರೊಳಗೆ ಟಿಕೆಟ್ ಸಿಗಲಿಲ್ಲವೆಂದು ರೇಬಲ್ ಆಗಿ ನಾಮಪತ್ರ ಸಲ್ಲಿಸಿರುವವರನ್ನು ಹಿಂದೆ ಸರಿಸುವ ಕೆಲಸ ಭರದಿಂದ ಸಾಗಿದೆ. ಇದಕ್ಕಾಗಿ ರಾತ್ರಿಯೆಲ್ಲ ಮೀಟಿಂಗ್ ಮೇಲೆ ಮೀಟಿಂಗ್ ನಡೆಯುತ್ತಿವೆ. ಬಂಡಾಯ ಅಭ್ಯರ್ಥಿಗಳ ಮನೆಗಳಿಗೂ ಹೋಗಿ ಮನವೊಲಿಸುವ ಕೆಲಸ ಕೂಡ ನಡೆಯುತ್ತಿದೆ. ಬಗೆ ಬಗೆಯ ಆಮಿಷಗಳನ್ನು ನೀಡಲಾಗುತ್ತಿದೆ. ಜತೆಗೆ ಬಂಡಾಯ ಅಭ್ಯರ್ಥಿಗಳು ಯಾರ ಮಾತನ್ನು ಕೇಳುತ್ತಾರೆ ಎಂಬುದನ್ನು ತಿಳಿದು ಅವರ ಮೂಲಕವೂ ಮನವೊಲಿಸುವ ಕೆಲಸ ನಡೆದಿದೆ.
Karnataka election 2023: ಹರಿಹರದಲ್ಲಿ ನಾಳೆ ಸಿಎಂ ಬೊಮ್ಮಾಯಿ ರೋಡ್ ಶೋ
ಎಲ್ಲೆಲ್ಲಿ ಯಾರಾರಯರು?:
ಕುಂದಗೋಳದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ(Kusumavati shivalli) ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಿದ್ದರೆ, ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಗೌಡಪ್ಪಗೌಡ ಪಾಟೀಲ(Gowdappa gouda patil) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇನ್ನು ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯಾಗಿ ಎಂ.ಆರ್. ಪಾಟೀಲ(MR Patil) ಕಣಕ್ಕಿಳಿದಿದ್ದಾರೆ. ಟಿಕೆಟ್ ವಂಚಿತವಾಗಿರುವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ(SI chikkanagowdar) ರೆಬೆಲ್ ಆಗಿದ್ದರೆ, ಕುರುಬ ಸಮುದಾಯದ ಶಿವಾನಂದ ಮುತ್ತಣ್ಣವರ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಎರಡು ಪಕ್ಷಗಳಿಗೆ ಇಲ್ಲಿ ಬಂಡಾಯದ ಬೇಗೆ ಶುರುವಾಗಿದೆ. ಎರಡು ಪಕ್ಷಗಳು ಬಂಡಾಯ ಅಭ್ಯರ್ಥಿಗಳನ್ನು ಹಿಂದಕ್ಕೆ ಸರಿಸುವ ಕೆಲಸಕ್ಕೆ ಇಳಿದಿದ್ದಾರೆ.
ಅಲ್ತಾಫ್ ಕಿತ್ತೂರು ಬಂಡಾಯ:
ಇನ್ನು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಗದೀಶ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದರೆ, ಮಹೇಶ ಟೆಂಗಿನಕಾಯಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅಲ್ತಾಫ್ ಕಿತ್ತೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಹನುಮಂತಸಾ ನಿರಂಜನ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇನ್ನು ರಾಜು ನಾಯಕವಾಡಿ ಜೆಡಿಎಸ್‌ನಿಂದ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ಅವರ ಸಹೋದರ ಮೇಘರಾಜ ಹಿರೇಮನಿ ಲೋಕಶಕ್ತಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ಸಿನಿಂದ ಎನ್.ಎಚ್. ಕೋನರಡ್ಡಿ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತರಾದ ಮಾಜಿ ಸಚಿವ ಕೆ.ಎನ್. ಗಡ್ಡಿ ಜೆಡಿಎಸ್‌ನಿಂದ, ಶಿವಾನಂದ ಕರಿಗಾರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಬಿಜೆಪಿಯ ಡಾ. ಕ್ರಾಂತಿ ಕಿರಣ, ಕಾಂಗ್ರೆಸ್ಸಿನಿಂದ ಪ್ರಸಾದ ಅಬ್ಬಯ್ಯ ನಾಮಪತ್ರ ಸಲ್ಲಿಸಿದ್ದರೆ, ಬಿಜೆಪಿ ಟಿಕೆಟ್ ವಂಚಿತರಲ್ಲಿ ವೀರಭದ್ರಪ್ಪ ಹಾಲಹರವಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಪಾಲಿಕೆ ಮಾಜಿ ಸದಸ್ಯ ವೆಂಕಟೇಶ ಮೇಸ್ತ್ರಿ, ಬಸವರಾಜ ಅಮ್ಮಿನಬಾವಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಧಾರವಾಡದಲ್ಲಿ ಕಾಂಗ್ರೆಸ್ಸಿನಿಂದ ವಿನಯ ಕುಲಕರ್ಣಿ, ಬಿಜೆಪಿಯಿಂದ ಅಮೃತ ದೇಸಾಯಿ ನಾಮಪತ್ರ ಸಲ್ಲಿಸಿದ್ದರೆ, ಬಿಜೆಪಿ ಟಿಕೆಟ್ ವಂಚಿತ ತವನಪ್ಪ ಅಷ್ಟಗಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ವಿನಯ ಕುಲಕರ್ಣಿ ನಾಮಪತ್ರ ತಿರಸ್ಕಾರವಾದರೆ ಕಷ್ಟವಾದೀತು ಎಂದುಕೊಂಡು ಪತ್ನಿ ಶಿವಲೀಲಾ ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ ಇದೀಗ ವಿನಯ ನಾಮಪತ್ರ ಸ್ವೀಕೃತಿಯಾಗಿರುವುದರಿಂದ ಅವರು ವಾಪಸ್ ಪಡೆಯುವುದು ಖಚಿತ.
ಕುಂದಗೋಳ: ವರ್ಕೌಟ್ ಆಗೋದು ಶಿವಳ್ಳಿ ಸಾವಿನ ಅನುಕಂಪವೋ? ಬಿಜೆಪಿ ಅಲೆಯೋ?
ಬಸವರಾಜ ಮಲಕಾರಿ:
ಧಾರವಾಡ ಪಶ್ಚಿಮದಲ್ಲಿ ಬಿಜೆಪಿಯಿಂದ ಅರವಿಂದ ಬೆಲ್ಲದ, ಕಾಂಗ್ರೆಸ್ಸಿನಿಂದ ದೀಪಕ ಚಿಂಚೋರೆ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಟಿಕೆಟ್ ವಂಚಿತ ಬಸವರಾಜ ಮಲಕಾರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇದೀಗ ಯಾರಾರಯರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆಯೋ ಅವರೆಲ್ಲರನ್ನು ಹಿಂದಕ್ಕೆ ಸರಿಸುವ ಕೆಲಸವಾಗುತ್ತಿದೆ. ಆದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪಟ್ಟು ಹಿಡಿದಿರುವ ಕೆಲವು ಅಭ್ಯರ್ಥಿಗಳಂತೂ ಪಕ್ಷದ ಮುಖಂಡರ ಕೈಗೂ ಸಿಗುತ್ತಿಲ್ಲ. ಕೆಲವರು ಪಕ್ಷದ ಮುಖಂಡರೇ ಬಂದು ಹೇಳಿದರೆ ಹಿಂದಕ್ಕೆ ಸರಿಯಲು ಒಪ್ಪಿಕೊಳ್ಳುತ್ತಾರೆ. ಆದರೂ ಯಾರಾರಯರು ಹಿಂದಕ್ಕೆ ಸರಿಯುತ್ತಾರೆ. ಯಾರಾರಯರು ಕಣದಲ್ಲಿ ಉಳಿಯುತ್ತಾರೆ. ಹೀಗೆ ಬಂಡಾಯ ಎದ್ದಿರುವ ಅಭ್ಯರ್ಥಿಗಳು ಯಾರ ಗೆಲುವಿಗೆ ತಡೆಯೊಡ್ಡಬಹುದು ಎಂಬುದನ್ನು ಕಾಯ್ದು ನೋಡಬೇಕಿದೆ.