
ಬೆಂಗಳೂರು(ಫೆ.02): ಕೆಪಿಸಿಸಿ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರಾದ ತಮ್ಮನ್ನು ನಿರ್ಲಕ್ಷ್ಯಿಸಿ ಚುನಾವಣಾ ಘೋಷಣೆಗಳನ್ನು ಪ್ರಕಟಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ಡಾ.ಜಿ. ಪರಮೇಶ್ವರ್ ಅವರನ್ನು ಬುಧವಾರ ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮನವೊಲಿಕೆ ಪ್ರಯತ್ನ ಮಾಡಿದರು.
ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದ ಸುರ್ಜೆವಾಲಾ ಅವರು, ಪ್ರಜಾಧ್ವನಿಯಂಥ ಜಂಟಿ ಬಸ್ಸು ಯಾತ್ರೆಗೆ ಚಾಲನೆ ನೀಡುವಾಗ ಪ್ರಮುಖ ಘೋಷಣೆಯನ್ನು ಮಾಡಬೇಕಿತ್ತು. ಹೀಗಾಗಿ ಪಕ್ಷದ ತೀರ್ಮಾನದಂತೆ ನಿಮಗೆ ಮಾಹಿತಿ ನೀಡಿಯೇ ಘೋಷಣೆ ಮಾಡಲಾಗಿದೆ. ಇದು ಪ್ರಣಾಳಿಕೆ ರಚನಾ ಸಮಿತಿಯನ್ನು ಕಡೆಗಣಿಸಬೇಕೆಂಬ ಉದ್ದೇಶದಿಂದ ಮಾಡಿಲ್ಲ ಎಂದು ಮನವೊಲಿಕೆ ಪ್ರಯತ್ನ ಮಾಡಿದರು ಎಂದು ಮೂಲಗಳು ತಿಳಿಸಿವೆ.
ತ್ಯಾಗ, ಬಲಿದಾನದ ಫಲವಾಗಿ ಭಾರತ ಬಲಿಷ್ಠವಾಗಿದೆ: ಡಾ.ಜಿ.ಪರಮೇಶ್ವರ್
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಯೊಡತಿಗೆ ಮಾಸಿಕ .2 ಸಾವಿರ ಸಹಾಯಧನ ಸೇರಿ ಕಾಂಗ್ರೆಸ್‌ನ ಪ್ರಮುಖ ಘೋಷಣೆಗಳನ್ನು ಪಕ್ಷದ ನಾಯಕರೇ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿರಬೇಕಿದ್ದ ಅಂಶಗಳನ್ನು ಮೊದಲೇ ಘೋಷಿಸುವ ಮೂಲಕ ಪ್ರಣಾಳಿಕೆ ರಚನಾ ಸಮಿತಿಯ ಪ್ರಾಮುಖ್ಯತೆಯನ್ನು ಕಳೆಯುತ್ತಿದ್ದಾರೆ. ತನ್ಮೂಲಕ ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ಪರಮೇಶ್ವರ್ ಹೈಕಮಾಂಡ್ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಈ ಸಂಬಂಧ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಸುರ್ಜೆವಾಲಾ ಮನವೊಲಿಸುವ ಪ್ರಯತ್ನ ಮಾಡಿದರು. ಈ ವೇಳೆ ಪರಮೇಶ್ವರ್ ಅವರೂ ಪೂರಕವಾಗಿ ಸ್ಪಂದಿಸಿದ್ದಾರೆಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.