ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಎಷ್ಟು ಕೇಳಿದರೂ ಕೊಡದೇ ಈಗ ಚುನಾವಣಾ ಕಾರಣಕ್ಕೆ ಅನುದಾನ ಘೋಷಿಸಿರುವ ಕೇಂದ್ರ ಸರ್ಕಾರಕ್ಕೆ ಚುನಾವಣಾ ಉದ್ದೇಶ ಬಿಟ್ಟರೆ ಇನ್ಯಾವುದೇ ಜನಪರ ಉದ್ದೇಶ ಇರುವಂತೆ ಕಾಣುತ್ತಿಲ್ಲ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ
ಮೈಸೂರು(ಫೆ.02): ಈ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಪ್ರಕಟಗೊಂಡಿದ್ದು ಎಂದೂ ಇಲ್ಲದಂತೆ ಈ ಬಾರಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಘೋಷಿಸಿ, ನೇರ ತೆರಿಗೆಯನ್ನು ಕಡಿಮೆಗೊಳಿಸಿ ಪರೋಕ್ಷ ತೆರಿಗೆಯನ್ನು ಹೆಚ್ಚು ಮಾಡಿರುವ ಕೇಂದ್ರ ಸರ್ಕಾರವು ಶ್ರೀಮಂತ ಉದ್ಯಮಿಗಳಿಗೆ ಹಾಲು ಮತ್ತು ಪರೋಕ್ಷ ತೆರಿಗೆ ಪಾವತಿಸುವ ಜನ ಸಾಮಾನ್ಯರಿಗೆ ವಿಷ ನೀಡುವ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಎಷ್ಟು ಕೇಳಿದರೂ ಕೊಡದೇ ಈಗ ಚುನಾವಣಾ ಕಾರಣಕ್ಕೆ ಅನುದಾನ ಘೋಷಿಸಿರುವ ಕೇಂದ್ರ ಸರ್ಕಾರಕ್ಕೆ ಚುನಾವಣಾ ಉದ್ದೇಶ ಬಿಟ್ಟರೆ ಇನ್ಯಾವುದೇ ಜನಪರ ಉದ್ದೇಶ ಇರುವಂತೆ ಕಾಣುತ್ತಿಲ್ಲ. ನೋಟ್ ಬ್ಯಾನ್ ನಂತರದಲ್ಲಿ ಜನ ಸಾಮಾನ್ಯರ ಕೊಳ್ಳುವ ಶಕ್ತಿ ಕುಸಿದಿರುವ ಸಂದರ್ಭದಲ್ಲಿ ಆದಾಯ ತೆರಿಗೆ ಮಿತಿಯನ್ನು ಇವರು 5 ರಿಂದ 7 ಲಕ್ಷಕ್ಕೆ ಏರಿಸಿದ್ದು ಹೊಟ್ಟೆಗೆ ಹಿಟ್ಟಿಲ್ಲದೇ ಇದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ.
ಈ ಹಿಂದೆ ಬಜೆಟ್‌ನಲ್ಲಿ ಹೇಳಿದ ಅಂಶಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸದೇ ಜನ ಸಾಮಾನ್ಯರನ್ನು ವಂಚಿಸಿದೆ. ಹೀಗಿರುವಾಗ ಇವರ ಘೋಷಣೆಗಳು ಬರೀ ಘೋಷಣೆಗಳಷ್ಟೇ ಎಂಬುದು ನನ್ನ ಅನಿಸಿಕೆ. ಗ್ಯಾಸ್ ಸಬ್ಸಿಡಿ ನೀಡದೆ ಇರುವುದು ಹಾಗೂ ಪಿಂಚಣಿ ವಿತರಣೆಯಲ್ಲಿ ಆಗಿರುವ ವಂಚನೆ ಬೇಕಿದ್ದರೆ ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳಬಹುದು.
PRATHAM PARYATANE : ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮುಂಚುಣಿಯಲ್ಲಿದೆ: ಮಂಡ್ಯದ ಮತದಾರ ಹೇಳಿದ್ದೇನು?
ಈ ಬಾರಿ ಬಜೆಟ್‌ನಲ್ಲಿ ಅತ್ಯಧಿಕವಾಗಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಮೇಲಿನ ತೆರಿಗೆ ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇವರ ಬಜೆಟ್‌ನಿಂದ ಆ ನಿರೀಕ್ಷೆ ಸುಳ್ಳಾಗಿದೆ.
ದೇಶವು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 105ನೇ ಸ್ಥಾನಕ್ಕೆ ಕುಸಿದಿರುವಾಗಲೂ ಕೂಡಾ ಸದಾ ಉದ್ಯಮಿಗಳ ಪರವಾಗಿ ಚಿಂತಿಸುವ ಸರ್ಕಾರವು ಕೇವಲ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಗಮನ ಹರಿಸಿರುವುದನ್ನು ನೋಡಿದರೆ ಇವರು ಮತ್ಯಾವ ಉದ್ಯಮಿಯ ಏಳಿಗೆಗಾಗಿ ದುಡಿಯುತ್ತಿದ್ದಾರೆ ಎಂಬ ಅನುಮಾನ ಕಾಡುತ್ತದೆ ಎಂದು ಅವರು ತಿಳಿಸಿದ್ದಾರೆ.