ಬೆಂಗಳೂರು ಬೀದಿಲಿ ಕಿತ್ತಾಡಿಕೊಂಡ ಬಿಜೆಪಿ-ಕಾಂಗ್ರೆಸ್, ಬಿಪಿ ಹರೀಶ್‌ಗೆ ಮೊಟ್ಟೆ ಎಸೆದ ಕಾರ್ಯಕರ್ತ! ಆರ್.ಅಶೋಕ್ ಬಂಧನ

Published : Jul 22, 2026, 05:04 PM IST
BJP MLA BP Harish egged

ಸಾರಾಂಶ

ದೆಹಲಿಯ ನೀಟ್ ಪರೀಕ್ಷೆ ಅಕ್ರಮದ ಕಿಡಿ ಬೆಂಗಳೂರಿಗೂ ವ್ಯಾಪಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡೂ ಪಕ್ಷಗಳ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ‘ನೀಟ್’ (NEET) ಪರೀಕ್ಷೆ ಅಕ್ರಮದ ಕಿಡಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ವ್ಯಾಪಿಸಿದೆ. ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿಯ ಕಾರ್ಯಕರ್ತರ ನಡುವೆ ಬುಧವಾರ ರಾಜಧಾನಿಯ ರಸ್ತೆಗಳಲ್ಲಿ ಭಾರಿ ಗದ್ದಲ, ತಳ್ಳಾಟ-ನೂಟಾಟ ಹಾಗೂ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯ ವೇಳೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಎರಡೂ ಪಕ್ಷಗಳ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ ಸಂಘರ್ಷದ ಪ್ರತಿಫಲನ: ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ‘ಕೈ’ ಮುತ್ತಿಗೆ

ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದನ್ನು ವಿರೋಧಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ರಾಹುಲ್ ಗಾಂಧಿ ಅವರ ಬಂಧನವನ್ನು ಖಂಡಿಸಿ, ಬೆಂಗಳೂರಿನ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಬುಧವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಲಾಯಿತು. ಈ ವೇಳೆ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡರು.

ಕೆಪಿಸಿಸಿ ಕಚೇರಿಗೆ ಬಿಜೆಪಿ ಪ್ರತಿ-ಮುತ್ತಿಗೆ: ರಣರಂಗವಾದ ರಸ್ತೆ

ಕಾಂಗ್ರೆಸ್‌ನ ಈ ನಡೆಗೆ ಪ್ರತ್ಯುತ್ತರ ನೀಡಲು ಸಜ್ಜಾದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ಪಡೆ, ತಕ್ಷಣವೇ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ಕಚೇರಿಗೆ ಮುತ್ತಿಗೆ ಹಾಕಲು ಮುಂದಾಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಕಚೇರಿಯತ್ತ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ಮತ್ತು ಗದ್ದಲ ಏರ್ಪಟ್ಟಿತು.

ಪ್ಲೇವುಡ್ ಅಂಗಡಿಯಲ್ಲಿ ಶಾಸಕನಿಗೆ ಆಶ್ರಯ!

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಕೆಪಿಸಿಸಿ ಕಚೇರಿ ಬಳಿ ಕಾರಿನಿಂದ ಇಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು 'ಬಿಜೆಪಿಗೆ ಧಿಕ್ಕಾರ' ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಹರೀಶ್ ಅವರು 'ಕಾಂಗ್ರೆಸ್‌ಗೆ ಧಿಕ್ಕಾರ' ಎಂದು ಕೂಗಿದಾಗ ಕೆರಳಿದ ಕೈ ಕಾರ್ಯಕರ್ತರು, ಶಾಸಕರು ಹಾಗೂ ಅವರಿದ್ದ ಕಾರಿನ ಮೇಲೆ ದಿಢೀರನೆ ಮೊಟ್ಟೆ ಎಸೆದರು. ತಕ್ಷಣ ಎಚ್ಚೆತ್ತ ಪೊಲೀಸರು ಬಿ.ಪಿ. ಹರೀಶ್ ಅವರ ರಕ್ಷಣೆಗೆ ಧಾವಿಸಿ, ಅವರನ್ನು ರಸ್ತೆಯ ಪಕ್ಕದಲ್ಲಿದ್ದ ಪ್ಲೇವುಡ್ ಅಂಗಡಿಯೊಂದರ ಒಳಗೆ ಕರೆದೊಯ್ದು ಕೂರಿಸಿದರು. ಆದರೆ, ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರು ಆ ಅಂಗಡಿಯೊಳಗೂ ನುಗ್ಗಲು ಯತ್ನಿಸಿದಾಗ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು, ಶಾಸಕರನ್ನು ಪೊಲೀಸ್ ಜೀಪ್ ಮೂಲಕ ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದರು. ಸ್ಥಳದಲ್ಲಿ ಐದಾರು ಮೊಟ್ಟೆಗಳು ಪತ್ತೆಯಾಗಿದ್ದು, ಶಾಸಕನ ಮೇಲೆ ಮೊಟ್ಟೆ ಎಸೆದ 'ಪುಣ್ಯೇಶ್' ಎಂಬ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿ ತಿಳಿಸಿದೆ.

ಆರ್. ಅಶೋಕ್ ಸೇರಿದಂತೆ ಪ್ರಮುಖ ನಾಯಕರ ಬಂಧನ

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಮತ್ತು ನೂರಾರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇತ್ತ ಮಲ್ಲೇಶ್ವರಂ ಹಾಗೂ ಅತ್ತ ಕ್ವೀನ್ಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಯಿತು.

ಕಮಿಷನರ್ ಕಚೇರಿಗೆ ಬಿಜೆಪಿ ಪಾದಯಾತ್ರೆ: ಆಯುಕ್ತರಿಗೆ ದೂರು

ಪೊಲೀಸ್ ವಶದಿಂದ ಬಿಡುಗಡೆಯಾದ ಬಳಿಕ ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಪಾದಯಾತ್ರೆಯ ಮೂಲಕ ಆಗಮಿಸಿತು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗುತ್ತಾ ಕಮಿಷನರ್ ಕಚೇರಿ ಮುಂಭಾಗದಲ್ಲೇ ಜಮಾಯಿಸಿದ ನಾಯಕರು, ತಮಗೆ ರಕ್ಷಣೆ ನೀಡಲು ವಿಫಲರಾದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರದ ವಿರುದ್ಧ ಕಿಡಿಕಾರಿದರು. ತದನಂತರ ಬಿಜೆಪಿ ನಿಯೋಗವು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಶಾಸಕರ ಮೇಲೆ ದಾಳಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಧಿಕೃತ ದೂರು ಸಲ್ಲಿಸಿತು.

ನನ್ನ ಮೇಲೆ ದಾಳಿ ನಡೆದಿದ್ದು ಹೀಗೆ: ಶಾಸಕ ಬಿ.ಪಿ. ಹರೀಶ್ ಹೇಳಿಕೆ

"ನಾನು ಪ್ರತಿಭಟನೆಗಾಗಿ ಕಾಂಗ್ರೆಸ್ ಕಚೇರಿ ಬಳಿ ಇಳಿದಾಗ, ಅವರು ಬಿಜೆಪಿಗೆ ಧಿಕ್ಕಾರ ಎನ್ನುತ್ತಿದ್ದರು. ನಾನು ಕೂಡ ಕಾಂಗ್ರೆಸ್‌ಗೆ ಧಿಕ್ಕಾರ ಎಂದು ಕೂಗಿದೆ. ಈ ವೇಳೆ ಹತಾಶರಾದ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಮೊಟ್ಟೆ ಎಸೆದು ದಾಳಿ ನಡೆಸಿದರು. ಪೊಲೀಸರು ಸಕಾಲದಲ್ಲಿ ಬಂದು ನನ್ನನ್ನು ರಕ್ಷಿಸದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಈ ಗೂಂಡಾವರ್ತನೆಯನ್ನು ನಾವು ಸಹಿಸುವುದಿಲ್ಲ," ಎಂದು ಕಮಿಷನರ್ ಕಚೇರಿಯಲ್ಲಿ ಶಾಸಕ ಬಿ.ಪಿ. ಹರೀಶ್ ಆಕ್ರೋಶ ಹೊರಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್‌ನಿಂದ ದೇಶ ಒಡೆಯಲು ಯತ್ನ, ರಾಹುಲ್ ಗಾಂಧಿ ವಿದೇಶಿ ಭೇಟಿ ಬಗ್ಗೆ ತನಿಖೆಯಾಗಲಿ: ಸಂಸದ ನಿಶಿಕಾಂತ್ ದುಬೆ
ಪ್ರಧಾನಿ ನಿವಾಸಕ್ಕೆ ಹೋಗುವ ಮುನ್ನ ಕಾಂಗ್ರೆಸ್ ನಾಯಕರು ಮಾಡಿದ ಮಾಡಿದ ಮಾಸ್ಟರ್ ಪ್ಲಾನ್ ಏನು?