ಮನೆಗೆ ಮಾರಿ ಊರಿಗೆ ಉಪಕಾರಿ: ಮೊದಲು ರಾಜ್ಯದ ರೈತರ ಸಮಸ್ಯೆ ಬಗೆಹರಿಸಿ, ಸಿಎಂ ವಿರುದ್ಧ ವಿಜಯೇಂದ್ರ ಕಿಡಿ

Kannadaprabha News   | Kannada Prabha
Published : Jul 22, 2026, 05:54 AM IST
Vijayendra on dk shivakumar

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆಯ ಚಿಂತೆಯಲ್ಲಿ ದೆಹಲಿ ಪ್ರವಾಸದಲ್ಲಿದ್ದಾರೆ. ಸರ್ಕಾರವು ರೈತರ ಸಮಸ್ಯೆಗಳ ಬದಲು ಟೌನ್‌ಶಿಪ್‌ಗೆ ಆದ್ಯತೆ ನೀಡ್ತಿದ.

  • ಡಿಕೆಶಿಗೆ ಸಂಪುಟ ವಿಸ್ತರಣೆಯದ್ದೇ ಚಿಂತೆ
  • ಅದಕ್ಕಾಗೆ ಪದೇ ಪದೇ ದೆಹಲಿಗೆ ಭೇಟಿ: ಟೀಕೆ

 ಶಿವಮೊಗ್ಗ (ಜು.22): ರಾಜ್ಯದ ರೈತರು ಈ ಬಾರಿ ಭೀಕರ ಬರಗಾಲದ ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸಿಎಂ ಡಿ.ಕೆ.ಶಿವಕುಮಾರ್‌ ಆಗಲಿ, ಸಚಿವರಾಗಲಿ ಯಾವುದೇ ಜಿಲ್ಲೆಗೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿಲ್ಲ. ಬೆಂಗಳೂರಿನಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಪದೇಪದೆ ದೆಹಲಿಗೆ ಪ್ರವಾಸ

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನ ತೀವ್ರ ಬರಗಾಲದ ಆತಂಕದಲ್ಲಿದ್ದಾರೆ. ಆದರೆ, ಸಿಎಂ, ಸಚಿವರು ಸೇರಿದಂತೆ ಸರ್ಕಾರ ವಿಧಾನಸೌಧದಲ್ಲಿ ಕುಳಿತಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಸರ್ಕಾರದ ಕಡೆಯಿಂದ ಆಗಿಲ್ಲ. ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಪುಟ ವಿಸ್ತರಣೆಯದೇ ಚಿಂತೆ. ಅದಕ್ಕಾಗಿ ಅವರು ಹಿರಿಯ ನಾಯಕರ ತಂಡ ಕಟ್ಟಿಕೊಂಡು ಪದೇ ಪದೇ ದೆಹಲಿಗೆ ಹೋಗಿ ಬರುತ್ತಿದ್ದಾರೆ. ರಾಹುಲ್ ಗಾಂಧಿ ವರ್ಷದಲ್ಲಿ 8 ತಿಂಗಳು ವಿದೇಶ ಪ್ರವಾಸದಲ್ಲಿ ಇರುತ್ತಾರೆ. ಆದ ಕಾರಣ ಸಿಗುವ ಅಲ್ಪ ಸಮಯದಲ್ಲಿ ಎಲ್ಲದಕ್ಕೂ ಒಪ್ಪಿಗೆ ಪಡೆಯುವಂತ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ್ದಾಗಿದೆ ಎಂದು ಟೀಕಿಸಿದರು.

ಬರೀ ಪತ್ರ ಬರೆದರೆ ಸಾಕಾ?.

ಡಿಕೆಶಿಯವರು ಪ್ರಧಾನಿ ನರೇಂದ್ರ ಮೋದಿಗೆ ಪರಿಹಾರ ಕೋರಿ ಪತ್ರ ಬರೆದಿದ್ದಾರೆ. ಬರೀ ಪತ್ರ ಬರೆದರೆ ಸಾಕಾ?. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದಿಂದಲೇ ನೆರವು ನೀಡಿದ್ದರು. ಬರಗಾಲದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರ ಪ್ರತಿ ಎಕರೆಗೆ ರು. 50 ಸಾವಿರ ಪರಿಹಾರ ನೀಡಬೇಕು, ಕೇಂದ್ರ ಸರಕಾರದ ಮೇಲೆ ಬೊಟ್ಟು ಮಾಡದೇ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಅವರು ಆಗ್ರಹಿಸಿದರು.

ಟೌನ್‌ಶಿಪ್ ಹೆಸರಲ್ಲಿ ರಿಯಲ್ಎಸ್ಟೇಟ್‌ ದಂಧೆ:

ಮುಖ್ಯಮಂತ್ರಿಯವರು ಬಿಡದಿ ಟೌನ್ ಶಿಪ್‌ಗೆ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಬಿಡದಿ ಟೌನ್‌ ಶಿಪ್ ಯೋಜನೆಯನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದೆ. ರಿಯಲ್‌ ಎಸ್ಟೇಟ್‌ ಉದ್ದೆಶಕ್ಕಾಗಿ ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ಮಂತ್ರಿಮಂಡಲ ರಚನೆ ಬಗ್ಗೆ ಮಾತ್ರ ಆಸಕ್ತಿ ವಹಿಸಿರುವ ಮುಖ್ಯಮಂತ್ರಿಗಳು ರೈತರ ಹಿತ ಕಡೆಗಣಿಸಿದ್ದಾರೆ. ಡಿಕೆಶಿಯವರು ಕೇವಲ ಕನಕಪುರಕ್ಕೆ ಮಾತ್ರ ಮುಖ್ಯಮಂತ್ರಿಯಲ್ಲ, ಬೆಂಗಳೂರು ಅಭಿವೃದ್ಧಿಯಿಂದ ಸಂಪೂರ್ಣ ರಾಜ್ಯದ ಅಭಿವೃದ್ಧಿಯಾಗಲಿದೆ ಎಂಬ ಭ್ರಮೆಯಿಂದ ಹೊರ ಬಂದು ರೈತರ ಸಮಸ್ಯೆ ನಿವಾರಿಸಲು ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಅವರು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Jantar mantar: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸೋದು ಕೇಂದ್ರದ ಹಳೇ ಚಾಳಿ: ಮೋದಿ ಸರ್ಕಾರದ ವಿರುದ್ಧ ಒವೈಸಿ ವಾಗ್ದಾಳಿ!
ನಮ್ಮ ತಾಯಿ ಭೂಮಿಯ ಒಡಲು ಸೇರಿದ್ದಾರೆ -ಅಮ್ಮನ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ