ಪ್ರಕೃತಿ ಯಾರ ಕೈಯಲ್ಲೂ ಇಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಏನೇನು ಸಮಸ್ಯೆ, ತೊಂದರೆ ಇದೆಯೋ ಅವೆಲ್ಲವನ್ನೂ ಸರಿ ಮಾಡುವ ಕಾಲ ಬಂದಿದೆ. ಎಲ್ಲವನ್ನೂ ನಾವು ಸರಿ ಮಾಡುತ್ತೇವೆ ಎಂದು ನೂತನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಾಗಮಂಗಲ (ಮೇ.22): ಪ್ರಕೃತಿ ಯಾರ ಕೈಯಲ್ಲೂ ಇಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಏನೇನು ಸಮಸ್ಯೆ, ತೊಂದರೆ ಇದೆಯೋ ಅವೆಲ್ಲವನ್ನೂ ಸರಿ ಮಾಡುವ ಕಾಲ ಬಂದಿದೆ. ಎಲ್ಲವನ್ನೂ ನಾವು ಸರಿ ಮಾಡುತ್ತೇವೆ ಎಂದು ನೂತನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಾನುವಾರ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಕ್ಷೇತ್ರಾಧಿದೇವತೆಗಳು ಹಾಗೂ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಯುವತಿ ಸಾವನ್ನಪ್ಪಿದ್ದಾರೆ. ಯುವತಿ ಕುಟುಂಬಕ್ಕೆ ಪರಿಹಾರ ಕೊಡುವುದು ಒಂದೇ ಅಲ್ಲ. ಐದು ಹತ್ತು ಲಕ್ಷ ಕೊಡುವುದು ದೊಡ್ಡದಲ್ಲ.
ಮುಂದೆ ಈ ರೀತಿ ಅವಘಡ ಸಂಭವಿಸದಂತೆ ಮುಂಜಾಗ್ರತೆಯಿಂದ ಕೆಲಸ ಮಾಡಬೇಕು. ಆ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದರು. ನಾನು ಶ್ರೀಕಾಲಭೈರವೇಶ್ವರಸ್ವಾಮಿಯ ಭಕ್ತ. ಹಾಗಾಗಿ ಭಗವಂತನಿಗೆ ಕೈ ಮುಗಿಯಲು ಆದಿಚುಂಚನಗಿರಿ ಕ್ಷೇತ್ರಕ್ಕೆ ಬಂದಿದ್ದೇನೆ. ಧರ್ಮ ಯಾವುದಾದರೂ ತತ್ವ ಒಂದೆ. ನಾಮ ನೂರಾದರೂ ದೈವ ಒಂದೆ. ಪೂಜೆ ಯಾವುದಾದರೂ ಭಕ್ತಿ ಒಂದೆ. ಕರ್ಮ ಯಾವುದಾದರೂ ನಿಷ್ಠೆ ಒಂದೆ. ದೇವನೊಬ್ಬ ನಾಮ ಹಲವು. ಎಲ್ಲಾ ಸಮಾಜದವರಿಗೆ ಅವರದ್ದೇ ಆದ ನಂಬಿಕೆ ಇರುತ್ತದೆ ಎಂದರು. ಮನೆಯನ್ನು ನಾವು ಹೇಗೆ ಉಷಾರಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೇ ಮಠವನ್ನೂ ಸಹ ಉಷಾರಾಗಿ ಇಟ್ಟುಕೊಳ್ಳುತ್ತೇವೆ. ಮಂಡ್ಯ ಜಿಲ್ಲೆಯ ಜನ ತಮ್ಮ ಕೈ ಬಲಪಡಿಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಮಯ ಬಂದಾಗ ಜಿಲ್ಲೆಯ ಜನರಿಗೆ ಹೇಳುತ್ತೇನೆ ಎಂದು ಹೇಳಿದರು.
Ramanagara: ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಹೆಚ್ಚಿದ ಜವಾಬ್ದಾರಿ
ಆದಿಚುಂಚನಗಿರಿ ಕ್ಷೇತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಾನುವಾರ ನಡೆದ ವಿಶೇಷ ಪೂಜೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ನೂತನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರ್ ಕ್ಷೇತ್ರಾಧಿದೇವತೆಗಳಿಗೆ ಪೂಜೆ ಸಲ್ಲಿಸಿ, ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು. ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ, ಮದ್ದೂರು ಶಾಸಕ ಕದಲೂರು ಉದಯ್ ಮತ್ತು ಕುಣಿಗಲ್ ಶಾಸಕ ರಂಗನಾಥ್‌ರೊಂದಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀಮಠದ ವತಿಯಿಂದ ಮಂಗಳವಾದ್ಯ ಮತ್ತು ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.
ಬಳಿಕ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ ಸೇರಿದಂತೆ ಎಲ್ಲ ದೇವತೆಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ ಮತ್ತು ಶಾಸಕರು, ಕ್ಷೇತ್ರದಲ್ಲಿರುವ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ ಮಹಾಸಮಾಧಿಗೂ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದ ಸಂಪ್ರದಾಯದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನೂತನ ಶಾಸಕರಿಗೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳು ಶಾಲು ಹೊದಿಸಿ, ಹಾರ ಹಾಕಿ ಆಶೀರ್ವದಿಸಿದರು. ಬಳಿಕ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ ಡಿಕೆಶಿ ದೆಹಲಿಯಲ್ಲಿ ನಡೆದ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!
ಒಕ್ಕಲಿಗ ಸಮುದಾಯದ ಶಕ್ತಿಕೇಂದ್ರ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾದರೆ ಇಷ್ಟಾರ್ಥಗಳು ನೆರವೇರುತ್ತವೆಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಕಳೆದ ಮಾ.21ರ ಅಮಾವಾಸ್ಯೆ ಪೂಜೆಯಲ್ಲಿ ಡಿಕೆಶಿ ದಂಪತಿ ಪಾಲ್ಗೊಂಡಿದ್ದರು. ಡಿಸಿಎಂ ಆದ ಮರುದಿನವೇ ಟೆಂಪಲ್ ರನ್ ಆರಂಭಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ತಿಪಟೂರು ತಾಲೂಕಿನ ನೊಣವಿಕೆರೆ ಶ್ರೀ ಕಾಡುಸಿದ್ದೇಶ್ವರಮಠದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಾನುವಾರ ಸಂಜೆ ವೇಳೆಗೆ ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.