ಸಿದ್ದು ಕೆಳಗಿಳಿಸಿದರೆ ದೇಶಾದ್ಯಂತ ಹೋರಾಟ: ಕುರುಬ ಸಂಘ ಎಚ್ಚರಿಕೆ

Kannadaprabha News   | Kannada Prabha
Published : Nov 29, 2025, 05:27 AM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಷ್ಟ್ರಾದ್ಯಂತ ಹೋರಾಟ ನಡೆಸುವ ಜತೆಗೆ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುವುದಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಷ್ಟ್ರಾದ್ಯಂತ ಹೋರಾಟ ನಡೆಸುವ ಜತೆಗೆ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುವುದಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಹೈಕಮಾಂಡ್‌ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಕುರುಬ ಸಂಘದ ನಿರ್ಣಯ ಸಹಿತ ಹೈಕಮಾಂಡ್‌ಗೆ ಪತ್ರ ಬರೆಯಬೇಕು ಎಂದು ನಿರ್ಧರಿಸಲಾಗಿದೆ.

ಒಕ್ಕಲಿಗರ ಸಂಘದ ಬೆನ್ನಲ್ಲೇ ಶುಕ್ರವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ತಿಂಥಣಿಯ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 5 ವರ್ಷಗಳಿಗೆ ಆಯ್ಕೆ ಮಾಡಿ ರಾಜ್ಯದ ಜನತೆ ಮತ ನೀಡಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಪರ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಕಾಂಗ್ರೆಸ್‌ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಕಾಂಗ್ರೆಸ್‌ ಪಕ್ಷವನ್ನೇ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಲು ನಿರ್ಧರಿಸಲಾಯಿತು.

ಜತೆಗೆ ಶನಿವಾರ ಎಲ್ಲಾ ಜಿಲ್ಲೆಗಳ ಮಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ಪಕ್ಷಕ್ಕೆ ಎಚ್ಚರಿಕೆ ನೀಡಲು ತೀರ್ಮಾನಿಸಲಾಯಿತು.

ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಬಹಿಷ್ಕರಿಸುವುದು ಮಾತ್ರವಲ್ಲದೆ, ದೇಶಾದ್ಯಂತ ಇರುವ ಕುರುಬ ಸಮುದಾಯದ ಜತೆಗೂಡಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಸಭೆ ಬಳಿಕ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್‌, ಸಭೆಯಲ್ಲಿ ಮುಖ್ಯವಾಗಿ ಮೂರು ನಿರ್ಣಯ ಮಾಡಲಾಗಿದೆ. ಸಿದ್ದರಾಮಯ್ಯ ಬರೀ ಕುರುಬ ಸಮುದಾಯಕ್ಕೆ ಮುಖ್ಯಮಂತ್ರಿ ಅಲ್ಲ. ಶೋಷಿತ ವರ್ಗ ಹಾಗೂ ಎಲ್ಲಾ ಸಮುದಾಯಗಳ ಮುಖ್ಯಮಂತ್ರಿ. ಜನರು 5 ವರ್ಷಕ್ಕೆ ಅವರನ್ನು ಚುನಾಯಿಸಿದ್ದು ಜನರ ಅಭಿಪ್ರಾಯಕ್ಕೆ ಬೆಲೆ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಬಹಿಷ್ಕರಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ನಿರ್ಣಯ ಮಾಡಲಾಗಿದೆ.

ಜತೆಗೆ, ಶನಿವಾರ ಎಲ್ಲಾ ಜಿಲ್ಲಾ ಕಚೇರಿಯಲ್ಲೂ ಸಂಘದ ಪದಾದಿಕಾರಿಗಳು ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ಮನಮುಟ್ಟುವಂತೆ ಮಾಡಬೇಕು. ಸಿದ್ದರಾಮಯ್ಯ ಅವರನ್ನು ಮುಂದುವರೆಸುವಂತೆ ಹೈಕಮಾಂಡ್‌ಗೆ ಪತ್ರ ಬರೆಯಬೇಕು. ಸಿದ್ದರಾಮಯ್ಯ ಅವರಿಗೆ ತೊಂದರೆ ನೀಡಿದರೆ ಎಲ್ಲರೂ ಒಟ್ಟಾಗಿ ಕಾಂಗ್ರೆಸ್‌ ಬಹಿಷ್ಕರಿಸಿ ದೊಡ್ಡ ಪೆಟ್ಟು ನೀಡಲು ನಿರ್ಧರಿಸಲಾಗಿದೆ ಎಂದರು.

ಸಿದ್ದು ವಿರುದ್ಧದ ಶಾಸಕರ ಸೋಲಿಸ್ತೇವೆ:

ಕೋಲಾರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಜೈಲಿಗೆ ಹೋಗಿ ಬಂದವರು ಹಾಗೂ ಭ್ರಷ್ಟರನ್ನು ಮುಖ್ಯಮಂತ್ರಿ ಮಾಡಲು ಕೆಲ ಶಾಸಕರು ಹೊರಟಿದ್ದಾರೆ. 140 ಶಾಸಕರ ಪೈಕಿ ಅಂಥ ಶಾಸಕರ ವಿರುದ್ಧ ನಾವೇ ಪ್ರಚಾರ ಮಾಡಿ ಸೋಲಿಸುತ್ತೇವೆ. ಸಿದ್ದರಾಮಯ್ಯ ಅವರನ್ನು ಬದಲಿಸಿದರೆ ಕಾಂಗ್ರೆಸ್‌ಗೆ ಬಹಿಷ್ಕಾರ ಹಾಕುತ್ತೇವೆ ಎಂದರು.

ಏನೇನು ತೀರ್ಮಾನ?

- ಸಿದ್ದು ಕೇವಲ ಕುರುಬ ನಾಯಕರಲ್ಲ, ಅವರು ಶೋಷಿತ ವರ್ಗದ ನಾಯಕ

- ಅವರನ್ನು 5 ವರ್ಷಕ್ಕೆ ಗೆಲ್ಲಿಸಿದ ಮತದಾರರ ಅಭಿಪ್ರಾಯ ಗೌರವಿಸಬೇಕು

- ಸಿದ್ದು ವಿರುದ್ಧವಾಗಿ ತೀರ್ಮಾನ ಕೈಗೊಂಡರೆ ರಾಷ್ಟ್ರಾದ್ಯಂತ ಹೋರಾಟ

- ಸಿದ್ದು ವಿರುದ್ಧ ನಿಲ್ಲುವ ಶಾಸಕರ ಸೋಲಿಗೆ ನಾವೇ ಪ್ರಚಾರ ಮಾಡ್ತೇವೆ

- ಇಂದು ಜಿಲ್ಲಾ ಮಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಪಕ್ಷಕ್ಕೆ ಎಚ್ಚರಿಕೆ ರವಾನೆ

- ಕುರುಬ ಸಂಘದ ನಿರ್ಣಯ ಸಹಿತ ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ