ಇಂದು ಸಿದ್ದು- ಡಿಕೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌

Kannadaprabha News   | Kannada Prabha
Published : Nov 29, 2025, 05:13 AM IST
DKS Siddu

ಸಾರಾಂಶ

ತೀವ್ರ ಗೊಂದಲ ಹುಟ್ಟುಹಾಕಿರುವ ಕುರ್ಚಿ ಗುದ್ದಾಟವನ್ನು ಹೈಕಮಾಂಡೇ ಬಗೆಹರಿಸಲಿದೆ ಎಂದು ಇಡೀ ಕಾಂಗ್ರೆಸ್ ಸಮೂಹ ಕಾದು ಕುಳಿತಿರುವ ಈ ಹಂತದಲ್ಲಿ ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ ಎಂಬ ಸಂದೇಶವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್‌ ನೀಡಿದೆ.

ಬೆಂಗಳೂರು : ತೀವ್ರ ಗೊಂದಲ ಹುಟ್ಟುಹಾಕಿರುವ ಕುರ್ಚಿ ಗುದ್ದಾಟವನ್ನು ಹೈಕಮಾಂಡೇ ಬಗೆಹರಿಸಲಿದೆ ಎಂದು ಇಡೀ ಕಾಂಗ್ರೆಸ್ ಸಮೂಹ ಕಾದು ಕುಳಿತಿರುವ ಈ ಹಂತದಲ್ಲಿ ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ ಎಂಬ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್‌ ನೀಡಿದ್ದು, ಅದರಂತೆ ಶನಿವಾರ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್‌ಗೆ ಡಿಸಿಎಂಗೆ ಆಹ್ವಾನ ಹೋಗಿದೆ.

ರಾಜ್ಯ ಬಿಕ್ಕಟ್ಟಿನ ಬಗ್ಗೆ ತನ್ನ ಅಂತಿಮ ನಿಲುವು ಪ್ರಕಟಿಸುವ ಮುನ್ನ ಉಭಯ ನಾಯಕರು ಹೊಂದಾಣಿಕೆಗೆ ಅಂತಿಮ ಯತ್ನ ನಡೆಸಲಿ ಎಂಬ ಉದ್ದೇಶದಿಂದ ಹೈಕಮಾಂಡ್‌ ಈ ನಿಲುವು ತಳೆದಂತಿದ್ದು, ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ಶಿವಕುಮಾರ್‌ ಉಪಾಹಾರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೇವಲ ಸಿಎಂ ಹಾಗೂ ಡಿಸಿಎಂ ಮಾತ್ರ ಇರಲಿದ್ದು, ಸಭೆಯ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿಸಿದೆ.

ಪಟ್ಟು ಸಡಿಲಿಸುವುದು ಅನುಮಾನ:

ಬ್ರೇಕ್ ಫಾಸ್ಟ್ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೈಕಮಾಂಡ್‌ ತೀರ್ಮಾನಕ್ಕೆ ತಾವು ಬದ್ಧ ಎಂಬ ನಿಲುವನ್ನು ಮತ್ತೆ ವ್ಯಕ್ತಪಡಿಸಿ, ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲೂ ಇದೇ ನಿಲುವು ಹೇಳುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಡಿಸಿಎಂ ಸಹ ಎರಡೂವರೆ ವರ್ಷ ಒಪ್ಪಂದ ಪಾಲನೆಯಾಗಬೇಕು ಎಂಬ ನಿಲುವನ್ನು ಈ ಉಪಾಹಾರ ಸಭೆಯಲ್ಲಿ ಸಡಿಲಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ, ಪಟ್ಟು ಸಡಿಲಿಸಲೊಪ್ಪದ ಉಭಯ ನಾಯಕರ ನಡುವೆ ಕುರ್ಚಿ ವಿಚಾರದಲ್ಲಿ ಹೊಂದಾಣಿಕೆ ಸಾಧ್ಯವಾಗದಿದ್ದರೂ ಪಕ್ಷದಲ್ಲಿ ಒಗ್ಗಟ್ಟು ಇದೆ ಎಂಬ ಸಂದೇಶ ರವಾನೆಯಾಗಲಿ ಎಂಬ ಉದ್ದೇಶದಿಂದ ಈ ಸಭೆ ಆಯೋಜನೆಗೆ ಹೈಕಮಾಂಡ್‌ ನಿರ್ದೇಶನ ನೀಡಿದೆ ಎನ್ನಲಾಗುತ್ತಿದೆ.

‘ಹೈಕಮಾಂಡ್‌ನವರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರಿಗೂ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದಿದ್ದಾರೆ. ಹೀಗಾಗಿ ಶನಿವಾರ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಶಿವಕುಮಾರ್ ಅವರನ್ನು ಕರೆದಿದ್ದೇನೆ. ಬ್ರೇಕ್‌ಫಾಸ್ಟ್‌ ವೇಳೆ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಹೈಕಮಾಂಡ್‌ ಮಾತೇ ಅಂತಿಮ:

ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಹೇಳಿದಂತೆ ನಾನು ಕೇಳುತ್ತೇನೆ. ಈಗಲೂ ಅದೇ ಹೇಳ್ತೇನೆ, ನಾಳೆಯೂ ಅದನ್ನೇ ಹೇಳುತ್ತೇನೆ. ಶಿವಕುಮಾರ್‌ ಅವರೂ ಅನೇಕ ಸಲ ಇದೇ ಮಾತು ಹೇಳಿದ್ದಾರೆ. ನಾನೂ ಸಹ ಅನೇಕ ಸಲ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ದೆಹಲಿಗೆ ಕರೆದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಹೈಕಮಾಂಡ್‌ನವರು ಕರೆದರೆ ಹೋಗುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ