ನರೇಂದ್ರ ಮೋದಿಯವರ ಹತ್ತು ವರ್ಷಗಳ ಅಪಾರ ಅಭಿವೃದ್ಧಿ, ಜನತೆಗೆ ನೀಡಿರುವ ಯೋಜನೆಗಳಿಂದಾಗಿ ಮತ್ತೊಮ್ಮೆ ಈ ದೇಶದಲ್ಲಿ ಮೋದಿ ಸರ್ಕಾರ ಬರಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ನುಡಿದರು.
ಬೊಮ್ಮನಹಳ್ಳಿ (ಮಾ.25): ನರೇಂದ್ರ ಮೋದಿಯವರ ಹತ್ತು ವರ್ಷಗಳ ಅಪಾರ ಅಭಿವೃದ್ಧಿ, ಜನತೆಗೆ ನೀಡಿರುವ ಯೋಜನೆಗಳಿಂದಾಗಿ ಮತ್ತೊಮ್ಮೆ ಈ ದೇಶದಲ್ಲಿ ಮೋದಿ ಸರ್ಕಾರ ಬರಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ನುಡಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಕಾರ್ಯಕರ್ತರ ಕಾರ್ಯಾಗಾರ ಸಭೆ ಎಚ್ಎಸ್ಆರ್ ಲೇಔಟ್ ವೈಟ್ ಹೌಸ್‌ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ತೇಜಸ್ವಿ ಅವರು, ಈ ಹಿಂದೆ ಯುಪಿಎ ಸರ್ಕಾರದಲ್ಲಿ ಬೆಳಗ್ಗೆ ಎದ್ದರೆ ಹಗರಣಗಳ ಸರಮಾಲೆ, ಬಾಂಬ್ ಬ್ಲಾಸ್ಟ್ ಪ್ರಕರಣಗಳು ಬಿಟ್ಟರೆ ಬೇರೇನೂ ಇರಲಿಲ್ಲಾ.
ಆದರೆ ಕಳೆದ ೧೦ ವರ್ಷಗಳಿಂದ ದೇಶ ಹಿಂದೆಂದೂ ಕಾಣದ ರೀತಿಯಲ್ಲಿ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿಯತ್ತ ಸಾಗಿದ್ದು, ಇದಕ್ಕೆ ಕೇವಲ ನರೇಂದ್ರ ಮೋದಿಯವರ ದೂರದೃಷ್ಠಿಯೇ ಕಾರಣವೆಂದರು. ಈ ಹಿಂದೆ ದೇಶದಲ್ಲಿ ಕೇಂದ್ರ ಸರ್ಕಾರ ನಡೆಸಲಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇವಲ ಒಂದೇ ಭಾಷೆಯಲ್ಲಿರುತ್ತಿತ್ತು. ಆದರೆ, ನಾನು ಸಂಸದನಾದ ನಂತರ ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವಂತೆ ಮಾಡಿ, ಇದೀಗ ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳಲ್ಲಿ ನಮ್ಮ ಕನ್ನಡಿಗರು ಉದ್ಯೋಗ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ನನಗೆ ಆಶೀರ್ವದಿಸಿ. ನಾವೆಲ್ಲರೂ ಸೇರಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿ ಮಾಡುವ ಅಗತ್ಯವಿದೆ ಎಂದರು. ಶಾಸಕ ಎಂ. ಸತೀಶ್ ರೆಡ್ಡಿಯವರು ಮಾತನಾಡುತ್ತಾ, ನರೇಂದ್ರ ಮೋದಿಯವರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು, ಬೊಮ್ಮನಹಳ್ಳಿ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದೆ. ಪಿಎಂಜೆಎವೈ ಯೋಜನೆಯಿಂದ ಕ್ಷೇತ್ರದಲ್ಲಿ ಸುಮಾರು ೧.೫ ಲಕ್ಷ ಜನಕ್ಕೆ ಸದುಪಯೋಗವಾಗಿದೆ ಎಂದರು. ಈ ಹಿಂದೆ ತೇಜಸ್ವಿ ಸೂರ್ಯ ಅವರಿಗೆ ಬೊಮ್ಮನಹಳ್ಳಿ ಕ್ಷೇತ್ರದಿಂದ ೫೦ ಸಾವಿರಕ್ಕಿಂತ ಹೆಚ್ಚು ಮತಗಳ ಮುನ್ನಡೆ ನೀಡಿದ್ದೆವು.
ಬನ್ನೇರುಘಟ್ಟದಲ್ಲಿ ವಿಶ್ವ ಕರಡಿ ದಿನಾಚರಣೆ: ವಿಶೇಷ ಆಹಾರ ನೀಡಿ ಸಂಭ್ರಮಿಸಿದ ಪ್ರವಾಸಿಗರು!
ಈ ಬಾರಿ ೧ ಲಕ್ಷಕ್ಕೂ ಅಧಿಕ ಮೆಜಾರಿಟಿಯಿಂದ ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನದು ಎಂದರು. ಈ ಸಂದರ್ಭದಲ್ಲಿ ಜಯನಗರ ಶಾಸಕರಾದ ಸಿ.ಕೆ ರಾಮಮೂರ್ತಿ, ವಿಧಾನರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಅರಕೆರೆ ವಾರ್ಡ್ ಬಿಜೆಪಿ ಅಧ್ಯಕ್ಷ ಮಂಜುನಾಥ್, ಮಾಜಿ ಪಾಲಿಕೆ ಸದಸ್ಯರಾದ ಭಾರತಿ ರಾಮಚಂದ್ರ, ರಮೇಶ್ (ಜಲ್ಲಿ), ಶ್ರೀನಿವಾಸ ರೆಡ್ಡಿ (ಕೇಬಲ್), ಬಿಜೆಪಿ ದಕ್ಷಿಣ ಜಿಲ್ಲೆಯ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ನಿಕಟಪೂರ್ವ ಬಿಬಿಎಂಪಿ ಸದಸ್ಯರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.