
ಬೆಂಗಳೂರು (ಮಾ.25): ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಸೋಮವಾರ ನಿರ್ಧಾರವಾಗಲಿದೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ವಿಷಯ ತಿಳಿಸಿದ್ದಾರೆ. ಚೆನ್ನೈನಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಬೆಂಗಳೂರಿನ ನಿವಾಸಕ್ಕೆ ಮರಳಿದರು. ಈ ವೇಳೆ ಜೆ.ಪಿ.ನಗರದ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ನೆರೆದಿದ್ದರು. ಅವರು, ಕುಮಾರಸ್ವಾಮಿಯೇ ಮಂಡ್ಯದಿಂದ ಸ್ಪರ್ಧಿಸಬೇಕು ಎಂದು ಒತ್ತಾಯಿಸುತ್ತಿದ್ದರು.
ಈ ವೇಳೆ ಮಾತನಾಡಿದ ನಿಖಿಲ್, ‘ತಂದೆಯವರು ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಈಗಷ್ಟೇ ಮನೆಗೆ ಬಂದಿದ್ದಾರೆ. ಅವರಿಗೆ ಒಂದು ದಿನ ಕಾಲಾವಕಾಶ ಕೊಡಿ ಸೋಮವಾರದ ಸಂಜೆ ವೇಳೆಗೆ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು. ‘ಸೋಮವಾರ ಚನ್ನಪಟ್ಟಣ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮಂಡ್ಯದಲ್ಲಿ ತಂದೆಯವರೇ ಚುನಾವಣೆಗೆ ನಿಲ್ಲಬೇಕು ಎಂಬ ಒತ್ತಡ ಇದೆ. ನಮ್ಮ ಕುಟುಂಬದಿಂದ ಚುನಾವಣೆಗೆ ಸ್ಪರ್ಧೆ ಬೇಡ ಎಂದು ಭಾವಿಸಲಾಗಿತ್ತು. ಆದರೆ ಮಂಡ್ಯದ ಪರಿಸ್ಥಿತಿಯೇ ಬೇರೆ ಇದೆ. ಹೀಗಾಗಿ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ’ ಎಂದು ತಿಳಿಸಿದರು.
ಜೈಲಿಂದಲೇ ಕೇಜ್ರಿವಾಲ್ ಮೊದಲ ಆದೇಶ: ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ
ನಿಮಗೆ ನಿರಾಸೆ ಮಾಡಲ್ಲ-ಎಚ್‌ಡಿಕೆ: ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಮಂಡ್ಯದಲ್ಲಿ ನನಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ನಾನು ಈ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ಈವರೆಗೆ ಮೂರು ಬಾರಿ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಆರೋಗ್ಯದ ಜತೆಗೆ ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ. ನಿಮಗೆ ನಿರಾಶೆ ಮಾಡುವುದಿಲ್ಲ’ ಎಂದರು.
ಮಂಡ್ಯದಿಂದ ಲೋಕಸಭೆಗೆ ಎಚ್‌ಡಿಕೆ ಸ್ಪರ್ಧೆ ಖಚಿತ: ಲೋಕಸಭಾ ಚುನಾವಣೆಗೆ ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಡಿಎಸ್‌ನ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯು ಬಹುತೇಕ ಅಂತಿಮಗೊಂಡಿದೆ. ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದೆ. ಮಂಡ್ಯ ಕ್ಷೇತ್ರಕ್ಕೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬದಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕಿಳಿಯುವುದು ಖಚಿತವಾಗಿದೆ.
ಅಂತೆಯೇ ಕೋಲಾರ ಕ್ಷೇತ್ರಕ್ಕೆ ಪಕ್ಷದ ನಾಯಕ ಮಲ್ಲೇಶ್ ಬಾಬುಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು, ಹಾಸನ ಕ್ಷೇತ್ರದಿಂದ ನಿರೀಕ್ಷೆಯಂತೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ. ಭಾನುವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪತ್ರಿಕಾಗೋಷ್ಠಿ ಕರೆದಿದ್ದು, ಈ ವೇಳೆ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಪತ್ರಿಕಾಗೋಷ್ಠಿ ವೇಳೆ ಪಕ್ಷದ ಬಹುತೇಕ ಮುಖಂಡರು ಹಾಜರಿರುವಂತೆ ಸೂಚಿಸಿದ್ದಾರೆ. ಪಕ್ಷದ ಪ್ರಮುಖರ ಸಮ್ಮುಖದಲ್ಲಿಯೇ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಬರ ಪರಿಹಾರ ಬಗ್ಗೆ ಸುಪ್ರೀಂಕೋರ್ಟೇ ತೀರ್ಮಾನಿಸಲಿ: ಸಚಿವೆ ನಿರ್ಮಲಾ ಸೀತಾರಾಮನ್
ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಲಭಿಸಿರುವುದು ಖಚಿತವಾಗುತ್ತಿದ್ದಂತೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅಥವಾ ಡಿ.ಸಿ.ತಮ್ಮಣ್ಣ ಪೈಕಿ ಒಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿತ್ತು. ಆದರೆ, ಇವರಿಬ್ಬರ ಪೈಕಿ ಒಬ್ಬರು ಕಣಕ್ಕಿಳಿದರೂ ಪಕ್ಷದ ಮತಗಳೇ ವಿಭಜನೆಯಾಗುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಪೈಕಿ ಒಬ್ಬರು ನಿಲ್ಲುವಂತೆ ಪಕ್ಷದ ಮುಖಂಡರೇ ಒತ್ತಾಯ ಮಾಡಿದ್ದರು. ಅಲ್ಲದೇ, ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ವೇಳೆ ಅವರು ಸಹ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಕುಮಾರಸ್ವಾಮಿ ಅವರೇ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.