ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಅನ್ಯಾಯ: ಕೆ.ಎಸ್.ಈಶ್ವರಪ್ಪ ಆರೋಪ

By Kannadaprabha NewsFirst Published Mar 25, 2024, 10:59 AM IST
Highlights

ಕಾಂತೇಶ್‌ಗೆ ಟಿಕೆಟ್ ನೀಡಿದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಯಡಿಯೂರಪ್ಪನವರು ಟಿಕೆಟ್ ತಪ್ಪಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಶಿಕಾರಿಪುರ (ಮಾ.25): ಕುಟುಂಬ ರಾಜಕಾರಣ ಬಿಜೆಪಿಯಿಂದ ಮುಕ್ತಗೊಳಿಸಲು ಹಾಗೂ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಉದ್ದೇಶದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕಾಂತೇಶ್‌ಗೆ ಟಿಕೆಟ್ ನೀಡಿದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಯಡಿಯೂರಪ್ಪನವರು ಟಿಕೆಟ್ ತಪ್ಪಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಪಟ್ಟಣದ ದೊಡ್ಡಕೇರಿಯಲ್ಲಿನ ಗಿಡ್ಡೇಶ್ವರ ದೇವಸ್ಥಾನದ ಮುಂಭಾಗ ತೆರೆದ ಜೀಪ್ ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ ರಾಜ್ಯ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಹೆಚ್ಚಿದೆ. 

ಯಡಿಯೂರಪ್ಪನವರು ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಪುತ್ರ ರಾಘವೇಂದ್ರ ಸಂಸದ, ವಿಜಯೇಂದ್ರ ಶಾಸಕ, ಸತತ 6 ತಿಂಗಳಿಂದ ಖಾಲಿ ಇದ್ದ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಲು ಬೇರೆ ಯಾರೂ ಇರಲಿಲ್ಲವಾ ? ಎಂದು ಪ್ರಶ್ನಿಸಿದರು. ಹಿಂದೂ ಹುಲಿ ಯತ್ನಾಳ್, ಸಿ.ಟಿ ರವಿ, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಸಹಿತ ನನ್ನನ್ನು ಪರಿಗಣಿಸದೆ ಪುತ್ರ ವಿಜಯೇಂದ್ರನ ರಾಜ್ಯಾಧ್ಯಕ್ಷನಾಗಿಸಿದ್ದು ದೇವರು ಮೆಚ್ಚುತ್ತಾರಾ? ಹಿಂದೂಪರ ಹೋರಾಟಗಾರರು ಬೆಳೆಯಬಾರದು ಬೆಳೆದಲ್ಲಿ ಮಗ ಮುಖ್ಯಮಂತ್ರಿಯಾಗಲು ಅಡ್ಡವಾಗುತ್ತಾರೆ ಎಂದು ಪಕ್ಷ ಕಟ್ಟಲು ಶ್ರಮಿಸಿದ ಎಲ್ಲ ನಾಯಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎಚ್‌ಡಿಕೆ ಮಂಡ್ಯ ಸ್ಪರ್ಧೆ ಇಂದು ನಿರ್ಧಾರ: ನಿಖಿಲ್‌ ಕುಮಾರಸ್ವಾಮಿ ಹೇಳಿದ್ಧೇನು?

ಶೋಭಾಗೆ ಟಿಕೆಟ್‌ ಕೊಡಿಸಿದ್ದೇಕೆ?: ಕಾಂತೇಶನಿಗೆ ಟಿಕೆಟ್ ಕೊಟ್ಟು ಒಡಾಡಿ ಗೆಲ್ಲಿಸುವುದಾಗಿ ಭರವಸೆ ನೀಡಿದ ಯಡಿಯೂರಪ್ಪನವರು ಹಾವೇರಿಯಲ್ಲಿ ಕಾಲು ನೋವಿನಿಂದ ಸ್ಪರ್ಧಿಸಲ್ಲ ಎಂದ ಬೊಮ್ಮಾಯಿಗೆ, ಚಿಕ್ಕಮಗಳೂರಿನಿಂದ ಗೋಬ್ಯಾಕ್ ಎನಿಸಿಕೊಂಡ ಶೋಭಾಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡಿದ್ದು ಬೊಮ್ಮಾಯಿ, ಶೋಭಾ ನಿಮಗೂ ಏನು ಸಂಬಂಧ ಎಂದು ಪ್ರಶ್ನಿಸಿ ಅದೇ ರೀತಿಯಲ್ಲಿ ಕಾಂತೇಶನಿಗೆ ಟಿಕೆಟ್ ಗೆ ಹಠ ಹಿಡಿದಿದ್ದಲ್ಲಿ ಸಿಗುತ್ತಿತ್ತು ಇದು ಸುಳ್ಳಾಗಿದ್ದಲ್ಲಿ ಗಿಡ್ಡೇಶ ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. 

ಕೇಂದ್ರ ನಾಯಕರು ನೀಡಿದ ಅಧಿಕಾರ ಸಂಪೂರ್ಣ ದುರುಪಯೋಗಪಡಿಸಿ ಚುನಾವಣಾ ಸಮಿತಿಗೆ ಮಾನ್ಯತೆ ನೀಡದೆ ಸರ್ವಾಧಿಕಾರಿ ಧೋರಣೆಯಿಂದ ಸದಾನಂದಗೌಡರ ತೆಗೆದು ಶೋಭಾರಿಗೆ ಟಿಕೆಟ್ ನೀಡಲಾಗಿದೆ ಏಕೆ ಈ ಅನ್ಯಾಯ? ಎಂದು ಪ್ರಶ್ನಿಸಿದರು. ರಾಘವೇಂದ್ರ ಗೆಲುವಿಗೆ ಡಮ್ಮಿ ಅಭ್ಯರ್ಥಿಯಾಗಿ ಗೀತಾ ಸ್ಪರ್ಧಿಸುತ್ತಿದ್ದು ಜಿಲ್ಲೆಯ ಮತದಾರರು ಪ್ರಜ್ಞಾವಂತರಿದ್ದಾರೆ. ಬೆಳಿಗ್ಗೆ ಗುಳಗುಳಿ ಶಂಕರ ಮತ್ತಿತರ ಕಡೆ ಮಹಿಳೆಯರು ನಿಮಗೆ ಅನ್ಯಾಯವಾಗಿದೆ ಯಡಿಯೂರಪ್ಪನವರಿಗೆ ಹೃದಯವಿಲ್ಲವಾ ? ಮೋದಿ ಹಿಂದೂಪರ ಮುಖಂಡರ ಬೆಳೆಸುತ್ತಿದ್ದು ಇವರು ಯಾಕೆ ತುಳಿಯುತ್ತಿದ್ದಾರೆ ಎಂದು ನನ್ನ ಪ್ರಶ್ನಿಸುತ್ತಿದ್ದಾರೆ ಎಂದರು.

Lok Sabha Election 2024: ಕಾಂಗ್ರೆಸ್‌ ಅಭ್ಯರ್ಥಿ ಬಾಕಿ ಪಟ್ಟಿ ಇಂದು/ ನಾಳೆ ಪ್ರಕಟ: ಸಿದ್ದರಾಮಯ್ಯ

ತಾಲೂಕಿನ ಮತದಾರರು, ಯುವಕರು ಅನ್ಯಾಯ ಖಂಡಿಸುವ ಛಾತಿ ಹೊಂದಿದ್ದಾರೆ. ಸೆಡ್ಡು ಹೊಡೆದು ತೋರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ್‍ಯಾಲಿ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದು ಈ ಮೆರವಣಿಗೆಯಿಂದ ಚುನಾವಣೆ ಗೆಲ್ಲಲು ಸ್ಫೂರ್ತಿ ದೊರೆತಿದೆ ಎಂದರು. ಆರಂಭದಲ್ಲಿ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದು ನಂತರ ಪ್ರಮುಖ ಬೀದಿಯಲ್ಲಿ ನೂರಾರು ಬೈಕ್ ಬೃಹತ್ ರ್‍ಯಾಲಿ ಮೂಲಕ ಗಿಡ್ಡೇಶ್ವರ ದೇವಸ್ಥಾನಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಪುತ್ರ ಕಾಂತೇಶ್, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ರುದ್ರಗೌಡ, ವಿಎಸ್ಎಸ್ಎನ್ ಅಧ್ಯಕ್ಷ ಹುಚ್ರಾಯಪ್ಪ ತಿಮ್ಲಾಪುರ ಮತ್ತಿತರರಿದ್ದರು.

click me!