ಗುಜರಾತ್ ನಲ್ಲಿ ಮೋದಿ-ಶಾ ರೋಡ್ ಶೋ ನಡೆಸಿದ ರಥ, ಬಂಟ್ವಾಳದಲ್ಲಿ ಪ್ರಚಾರಕ್ಕೆ ಬಳಕೆ

By Suvarna News  |  First Published Jan 14, 2023, 7:55 PM IST

ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರೋಡ್ ಶೋಗೆ ಬಳಸಿದ ವಾಹನವನ್ನು ದ‌.ಕ ಜಿಲ್ಲೆಯ ಬಂಟ್ವಾಳಕ್ಕೆ ತರಿಸಲಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಕೆಯಾಗಲಿದೆ.


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಜ.14): ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರೋಡ್ ಶೋಗೆ ಬಳಸಿದ ವಾಹನವನ್ನು ದ‌.ಕ ಜಿಲ್ಲೆಯ ಬಂಟ್ವಾಳಕ್ಕೆ ತರಿಸಲಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಕೆಯಾಗಲಿದೆ. ಇಸ್ಸುಜು (ISSUZE) ಕಂಪೆನಿಯ ಬಾರೀ ಮೊತ್ತದ ಕಾರಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಪ್ರಚಾರ ನಡೆಸಲಿದ್ದಾರೆ. ಬಂಟ್ವಾಳದಲ್ಲಿ ಚುನಾವಣಾ ಕದನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದು, ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಿಂದ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ.

Tap to resize

Latest Videos

ಇಂದಿನಿಂದ ಜ.26ರ ವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ಶಾಸಕ ರಾಜೇಶ್ ನಾಯ್ಕ್ ಪಾದಯಾತ್ರೆ ನಡೆಸಲಿದ್ದು, ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣೆಯಲ್ಲಿ ಬಳಸಿದ್ದ ಇಸ್ಸುಜು(ISSUZE) ಕಾರು ಬಂಟ್ವಾಳಕ್ಕೆ ಆಗಮಿಸಿದ್ದು, ಈ ಕಾರಿನಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಗುಜರಾತ್ ನಲ್ಲಿ ರೋಡ್ ಶೋ ಮಾಡಿದ್ದರು. ಮೋದಿ, ಶಾ, ನಡ್ಡಾ ಸಹಿತ ಬಿಜೆಪಿ ಪ್ರಮುಖರ ಭಾವಚಿತ್ರವನ್ನು ಹಾಕಿರುವ ಕಾರು ಇದಾಗಿದ್ದು, ವಾಹನದಲ್ಲಿ ರಾತ್ರಿ ವೇಳೆ ಬಹಿರಂಗ ಸಭೆ ನಡೆಸಲು ಧ್ವನಿವರ್ಧಕ ಸಹಿತ ಪೂರಕ ವ್ಯವಸ್ಥೆ ಇದೆ. ನಿತ್ಯ ಪಾದಯಾತ್ರೆ ಸಮಾರೋಪದ ವೇಳೆ ಇದೇ ವಾಹನದಲ್ಲಿ ನಿಂತು ಬಹಿರಂಗ ಸಭೆ ಉದ್ದೇಶಿಸಿ ನಾಯಕರು ಮಾತನಾಡಲಿದ್ದಾರೆ. 

ಇವತ್ತು ಜನಪ್ರಿಯ ಶಾಸಕರ ಅವಶ್ಯಕತೆ ಇಲ್ಲ: ನಳಿನ್ ಕುಮಾರ್ ಕಟೀಲ್
ಬಂಟ್ವಾಳದ ಪೊಳಲಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಪಾದಯಾತ್ರೆಗೆ ಚಾಲನೆ ನೀಡಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. ಇವತ್ತು ಜನಪ್ರಿಯ ಶಾಸಕರ ಅವಶ್ಯಕತೆ ಇಲ್ಲ, ಜನಪರ ಶಾಸಕರ ಅವಶ್ಯಕತೆ ಇದೆ.‌ಬಒಂದು ಬಾರಿ ಗೆದ್ದ ತಕ್ಷಣವೇ ಕೆಲವರು ಜನಪ್ರಿಯ ಅಂತ ಹೇಳ್ತಾರೆ. ಆದರೆ ರಾಜೇಶ್ ನಾಯ್ಕ್ ಜಿಲ್ಲೆಯ ಒಬ್ಬ ಜನಪರ ಶಾಸಕ.‌ ನನ್ನ ರಾಜಕೀಯ ಪ್ರವೇಶ, ರಾಜಕೀಯ ಚಟುವಟಿಕೆ ಎಲ್ಲವೂ ಬಂಟ್ವಾಳದಿಂದ ಆಗಿದೆ.

ಬಂಟ್ವಾಳದಲ್ಲಿ ಶರತ್ ಹತ್ಯೆ, ಕಲ್ಲಡ್ಕ ಗಲಭೆ, ಕಲ್ಲಡ್ಕ ಮಕ್ಕಳ ಹೊಟ್ಟೆಗೆ ಒಡೆಯುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಆಯಿತು. ಆದರೆ ಇವತ್ತು ಬಂಟ್ವಾಳದಲ್ಲಿ ಮನೆ ಮನೆಗೆ ಅನ್ನ ನೀಡುವ ಕೆಲಸ ಆಗ್ತಿದೆ‌. ಬಂಟ್ವಾಳದಲ್ಲಿ ಹಿಂದಿನ ಗೂಂಡಾಗಿರಿ ರಾಜಕಾರಣ ನಿಂತು ಹೋಗಿದೆ.‌ ಸ್ಯಾಂಡ್ ಮಾಫಿಯಾ, ಲ್ಯಾಂಡ್ ಮಾಫಿಯಾ ಸಂಪೂರ್ಣ ನಿಂತಿದೆ. ಕೋಮು ಭಾವನೆ ಕೆರಳಿಸುವ ಕೆಲಸ ನಿಂತಿದೆ, ಕೋಮಿನ ತುಷ್ಟೀಕರಣ ನಿಂತಿದೆ. ಕಾಂಗ್ರೆಸ್ ಈ ದೇಶಕ್ಕೆ ಭ್ರಷ್ಟಾಚಾರವಾದ, ಪರಿವಾರವಾದ ಮತ್ತು ಆತಂಕವಾದವನ್ನ ಕೊಡುಗೆ ಕೊಟ್ಟಿದೆ. ಗಾಂಧಿ ಕುಟುಂಬದ ಹೆಸರಿನಲ್ಲಿ ದೇಶದಲ್ಲಿ ರಾಜಕಾರಣಿ ‌ಮಾಡಿದ್ದಾರೆ. ಭಯೋತ್ಪಾದನೆಯ ಇನ್ನೊಂದು ‌ಹೆಸರು ಕಾಂಗ್ರೆಸ್. 

ಸಿಪಿ ಯೋಗೇಶ್ವರ್‌ ಆಡಿಯೋ: ಗೇಲಿ ಮಾಡಿದ ಕಾಂಗ್ರೆಸ್‌

ಇಂದಿರಾ ಗಾಂಧಿ ಈ ದೇಶದಲ್ಲಿ ಭಯೋತ್ಪಾದನೆಗೆ ಪ್ರೇರಣೆಯಾಗಿ ನಿಂತರು. ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ ಅಂದದ್ದು ಇಶ್ಯೂ ಆಯ್ತು. ಡಿಕೆಶಿಗೆ ಮಂಗಳೂರು ‌ಮತ್ತು ಬೆಳಗಾವಿ ಕುಕ್ಕರ್ ಮೇಲೆ ಪ್ರೀತಿ. ಕುಕ್ಕರ್ ಬ್ಲಾಸ್ಟ್ ಕೇಸ್ ನ ಲಿಂಕ್ ನಲ್ಲಿ ಕಾಂಗ್ರೆಸ್ ಮುಖಂಡನ ಮಗನ ಬಂಧನ ಆಗಿದೆ‌. ಉಡುಪಿ ಕಾಂಗ್ರೆಸ್ ‌ಪ್ರಧಾನ ಕಾರ್ಯದರ್ಶಿ ಮಗನ ಬಂಧನ ಆಗಿದೆ. ಉಳ್ಳಾಲದಲ್ಲಿ ‌ಮಾಜಿ ಶಾಸಕರ ಸೊಸೆಯನ್ನ ಐಸಿಸ್ ಲಿಂಕ್ ನಲ್ಲಿ ಬಂಧಿಸಿದ್ದಾರೆ‌. ಕಾಂಗ್ರೆಸ್ ಕುಟುಂಬದವರನ್ನೇ ಟೆರರ್ ಲಿಂಕ್ ನಲ್ಲಿ ಬಂಧಿಸಿ ಕರೆದುಕೊಂಡು ಹೋಗ್ತಾ ಇದಾರೆ. ಆದರೆ ಇದರ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಮಾತೇ ಎತ್ತಲ್ಲ. ಅಲ್ಲಿಗೆ ಕಾಂಗ್ರೆಸ್ ಗೆ ಭಯೋತ್ಪಾದಕರ ಪಕ್ಷ ಎನ್ನುವುದು ಸ್ಪಷ್ಟ. ಗುತ್ತಿಗೆದಾರರ ಸಂಘದ ಅಧ್ಯಕ್ಷ ‌ನಮ್ಮ ಶಾಸಕರ ಮೇಲೆ ಆರೋಪ ಮಾಡಿ ಜೈಲಿಗೆ ಹೋದ. ಕೆಂಪಣ್ಣ ಜೈಲಿಗೆ ಹೋದ, ಆದರೆ ನಮ್ಮ ಮುನಿರತ್ನ ಹೋಗಿಲ್ಲ ಅಂದ್ರೆ ನಾವು ಸರಿ ಇದ್ದೇವೆ.

CHIKKAMAGALURU: ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ, ಎಲ್ಲಿ ನೋಡಿದರೂ ಬ್ಯಾನರ್ ಕಟೌಟ್

ಈ ಚುನಾವಣೆಗೆ ಮೊದಲು ಭ್ರಷ್ಟಾಚಾರ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ಸಿದ್ದರಾಮಯ್ಯ ತಾಕತ್ ಇದ್ರೆ ನಮ್ಮ 40% ವಿರುದ್ದ ಲೋಕಾಯುಕ್ತಕ್ಕೆ ದೂರು ಕೊಡಲಿ. ಡಿಕೆಶಿಯವರೇ ನೀವು ಪವರ್ ಮಿನಿಸ್ಡರ್ ಆದಾಗ ಕೃಷಿಕರ ಪಂಪ್ ಸೆಟ್ ಗಳಿಗೆ ಹತ್ತು ಸಾವಿರ ಶುಲ್ಕ ಹಾಕಿದವರು ನೀವು. ಸುಳ್ಯದ ಬೆಳ್ಳಾರೆಯ ಯುವಕ ಕರೆಂಟ್ ಕೇಳಿದ್ದಕ್ಕ ರಾತ್ರೋರಾತ್ರಿ ಜೈಲಿಗೆ ಹಾಕಿದ್ರಿ‌. ಈಗ ಉಚಿತ ವಿದ್ಯುತ್ ಕೊಡೋ ಭರವಸೆ ಕೊಡ್ತಾ ಇದೀರಿ‌. ನೀವು ಈ ರಾಜ್ಯಕ್ಕೆ ಕೊಟ್ಟಿದ್ದು ಕೊಲೆ ಭಾಗ್ಯ ಮಾತ್ರ‌. 2023ರಲ್ಲಿ ಹುಲಿಯಾ ಕಾಡಿಗೆ ಹೋಗುತ್ತೆ, ಬಂಡೆ ಹುಡಿಯಾಗುತ್ತೆ. 2023ರಲ್ಲಿ ಸಿದ್ದರಾಮಯ್ಯ ನಿರುದ್ಯೋಗಿ ಆಗ್ತಾರೆ. ಇಲ್ಲಿ ಸಚಿವ ಸ್ಥಾನಕ್ಕೆ ಸೂಟ್ ಹೊಲಿಸಿದವರು ನಿರುದ್ಯೋಗಿ ಆಗ್ತಾರೆ ಎಂದಿದ್ದಾರೆ.
 

click me!