ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕೆಲ ಬಿಜೆಪಿ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಅಂತವರಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಡಲಾಗಿದೆ.
ಮಂಗಳೂರು, (ಜ.15): ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿರುವ ಶಾಸಕರುಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ಕೆಲವರು ಅಸಮಾಧಾನ ಹೊರಹಾಕುತ್ತಿರುವ ಹಿನ್ನೆಲೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ಅಸಮಾಧಾನಗಳಿದ್ದರೆ, ಪಕ್ಷದ ಹೈಕಮಾಂಡ್ ಗೆ ಹೇಳಬಹುದು. ಮಾರ್ಗದಲ್ಲಿ ನಿಂತು ಮಾತನಾಡೋದು ಪಕ್ಷದಲ್ಲಿ ಅಶಿಸ್ತು ಎನಿಸಿಕೊಳ್ಳುತ್ತದೆ. ಮೇಲಿನವರು ಎಲ್ಲಾ ಗಮನಿಸುತ್ತಿದ್ದಾರೆ ಎಂದರು.
ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಬಿಎಸ್‌ವೈ, ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ
ಪಾರ್ಟಿಯ ನಿಯಂತ್ರಣದಲ್ಲಿ ಮಾತನಾಡಬೇಕು, ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ. ಯಾರೋ ಒಬ್ಬರು ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರೆ, ಅದು ನೋವು ಮತ್ತು ಭಾವನೆ ಅಷ್ಟೆ. ಅದನ್ನು ಮಾತನಾಡೋ ರೀತಿಯಲ್ಲಿ ಮಾತನಾಡಿ, ತೋರ್ಪಡಿಸುವ ರೀತಿಯಲ್ಲಿ ತೋರ್ಪಡಿಸಿ ಎಂದು ಖಡಕ್ ಸಂದೇಶ ರವಾನಿಸಿದರು.
ಯತ್ನಾಳ್ ಬಗ್ಗೆ ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ತರಲಾಗಿದೆ. ಸಿ. ಡಿ ಬಗ್ಗೆ ಮುಖ್ಯಮಂತ್ರಿಗಳೇ ತೋರಿಸಿ ಅಂದಿದ್ದಾರೆ, ತೋರಿಸಲಿ, ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ನಮ್ಮ ಪಕ್ಷದ ವಿಚಾರಗಳು ಸಿದ್ದರಾಮಯ್ಯನವರಿಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.