ಸಚಿವ ಸ್ಥಾನ ಸಿಗಲಿಲ್ಲವೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ವಿರುದ್ಧ ಸಿಡಿ ಬಾಂಬ್ ಸಿಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಇದೀಗ ಬಿಎಸ್‌ವೈ ಬಿಗ್ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು/ವಿಜಯಪುರ, (ಜ.15): ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳೆ ನಡೆಸಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೀಡಿದ್ದ ಪೊಲೀಸ್ ಭದ್ರತೆ ಹಿಂಪಡೆಯಲಾಗಿದೆ.
ಪೊಲೀಸ್ ಭದ್ರತೆ ಹಿಂಪಡೆದಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಡಿಜಿ-ಐಜಿಪಿಗೆ ಪತ್ರ ಬರೆದು ಎಚ್ಚರಿಕೆ ಕೊಟ್ಟಿದ್ದಾರೆ.
'ಯತ್ನಾಳ್ ಬಿಜೆಪಿ ಸೇರ್ಪಡೆ ಬೇಡವೆಂದ್ರೂ ಬಿಎಸ್‌ವೈ ಕೇಳಲಿಲ್ಲ, ಈಗ ಅವರಿಗೆ ಮುಳುವು'
ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ, ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಶಾಸಕ ಯತ್ನಾಳ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು ಪ್ರಖರ ಹಿಂದೂ ಪರ ಮತ್ತು ಜನಪರವಾದ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಈ ಹಿಂದೆ ಅನೇಕ ಬಾರಿ ಕೆಲವು ಹಿಂದೂ ವಿರೋಧಿ ಹಾಗೂ ಮತಾಂಧ ಶಕ್ತಿಗಳು ದಾಳಿ ಮಾಡುವ ಮುನ್ಸೂಚನೆ ನೀಡಿದ್ದೆವು. ಹಾಗಾಗಿ, ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ಈವರೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಆದರೆ, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಯಡಿಯೂರಪ್ಪ ಎಂದಿನಂತೆ ದ್ವೇಷದ ರಾಜಕಾರಣ ಮಾಡಿದ್ದಾರೆ. ಪೊಲೀಸ್ ಭದ್ರತೆಯನ್ನು ದಿಢೀರ್ ಎಂದು ಹಿಂಪಡೆದಿದ್ದಾರೆ. ಇದರ ಹಿಂದಿರುವ ದುರುದ್ದೇಶ ಗೊತ್ತು. ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸನ್ನು ಇದು ಬಿಂಬಿಸುತ್ತದೆ ಎಂದು ಯತ್ನಾಳ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.