
ಮಂಗಳೂರು (ಜೂ.26): ನಾವು ಕಾಂಗ್ರೆಸ್ಸಿಗರ ಮಕ್ಕಳನ್ನು ಸೇನೆಗೆ ಕಳುಹಿಸಿ ಎಂದು ಕೇಳಿಲ್ಲ. ಉದ್ಯೋಗಾಕಾಂಕ್ಷಿಗಳು, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಬಯಕೆಯುಳ್ಳವರು ಹಾಗೂ ರಾಷ್ಟ್ರಕ್ಕಾಗಿ ದುಡಿಯುವವರಿಗೆ ‘ಅಗ್ನಿಪಥ’ ಯೋಜನೆಯಲ್ಲಿ ಅವಕಾಶವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ದೇಶ ಪರಿವರ್ತನೆ ಹಾದಿಯಲ್ಲಿ ಸಾಗುತ್ತಿದೆ. ಕೇಂದ್ರ ಸರ್ಕಾರ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದನ್ನು ವಿರೋಧಿಸುವುದನ್ನೇ ಮಾನಸಿಕತೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋದ ಮೇಲೆ ಗಲಭೆಗೆ ಪ್ರಚೋದನೆ ನೀಡುವ ಕೆಲಸವನ್ನು ಕಾಂಗ್ರೆಸಿಗರು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣೆ, ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥರ ಕಾರ್ಯಕ್ರಮಕ್ಕೆ ತಡೆ ಮಾಡುತ್ತಿದ್ದಾರೆ. ಕಾನೂನು ಮುರಿಯುವ ಘಟನೆಗಳ ಸೂತ್ರಧಾರಿಯಾಗಿ ಕಾಂಗ್ರೆಸ್ ಇದೆ ಎಂದು ಆರೋಪಿಸಿದರು.
ಅಗ್ನಿಪಥ್ ಯೋಜನೆ ಜಾರಿಯಾದ್ರೆ ಯುವಕರೇ ಸರ್ಕಾರದ ಸಮಾಧಿ ಕಟ್ತಾರೆ: ರೈತ ಮುಖಂಡರು
ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ‘ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸಾಹಿತಿಗಳಿಗೆ ಅವಮಾನ ಮಾಡಿರುವುದಕ್ಕೆ ಬಿಜೆಪಿ ಕ್ಷಮೆ ಕೇಳಬೇಕು’ ಎಂಬ ಕಾಂಗ್ರೆಸ್ ಮುಖಂಡರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ, ವಿರೋಧ ಪಕ್ಷ ಹೇಳುತ್ತದೆ ಎಂದು ಪಠ್ಯಪರಿಷ್ಕರಣೆಯನ್ನು ವಾಪಸ್ ಪಡೆಯುವುದಿಲ್ಲ ಎಂದರು. ಆಡಳಿತ ನಡೆಸುವುದು ನಾವು, ಮುಖ್ಯಮಂತ್ರಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಠ್ಯ ಪುಸ್ತಕದಲ್ಲಿ ನಿರ್ದಿಷ್ಟಸಿದ್ಧಾಂತ ತಂದಿರುವುದು ಕಾಂಗ್ರೆಸ್ ಎಂದು ನಳಿನ್ ಕುಮಾರ್ ಬೊಟ್ಟು ಮಾಡಿದರು. ಪಠ್ಯ ಪರಿಷ್ಕರಣೆ ವಿರೋಧಿಸುವ ಕಾಂಗ್ರೆಸಿಗರು, ಸಾಹಿತಿಗಳು ಎಲ್ಲದಕ್ಕೂ ಮೊದಲು ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಏನಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದರು.
‘ಸಮಾಜ ಕಲ್ಯಾಣ’ದಲ್ಲಿ ಅಗ್ನಿವೀರರಿಗೆ ಮೀಸಲಾತಿ?: ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ರಾಜ್ಯದ ಪೊಲೀಸ್ ಇಲಾಖೆ ಬಳಿಕ ಇದೀಗ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇಮಕಾತಿ ವೇಳೆಯೂ ಮೀಸಲಾತಿ ನೀಡಲು ಚಿಂತನೆ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ನಿಪಥಕ್ಕೆ ಅಗ್ನಿ ಕೊಡುವವರು ಗಲಾಟೆ ಆರಂಭಿಸಿದ್ದಾರೆ.
ಅಗ್ನಿಪಥ್ ಕುರಿತಾಗಿ ಅಜಿತ್ ದೋವಲ್ ಹೇಳಿದ ಬೆಂಕಿಯಂಥ ಮಾತುಗಳು!
ಅದರ ನಡುವೆಯೂ ಯುವಕರು ಅಗ್ನಿಪಥಕ್ಕೆ ಸೇರಲು ಮುಂದೆ ಬಂದಿದ್ದು, ಅಗ್ನಿವೀರರು ಸೃಷ್ಟಿಯಾಗುತ್ತಿದ್ದಾರೆ. ಈ ಯುವಕರಿಗೆ ಸೇನೆಯಲ್ಲಿ 4 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದು ಬರುವ ಅಗ್ನಿವೀರರಿಗೆ ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೀಸಲಾತಿಯಡಿ ದೈಹಿಕ ಶಿಕ್ಷಕ ಅಥವಾ ವಾರ್ಡನ್‌ನಂತಹ ಶೇ.75ರಷ್ಟು ಹುದ್ದೆಗಳನ್ನು ನೀಡಲು ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಕಡತ ಮಂಡಿಸಲಾಗಿದೆ ಎಂದವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.