ಮುಂದಿನ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ, ಡಿ.ಕೆ.ಶಿವಕುಮಾರ್ ಕರಗಿಹೋಗ್ತಾರೆ, ಕುಮಾರಣ್ಣ ಕುಟುಂಬ ಸೇರ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಹೊಳೆಹೊನ್ನೂರು (ಫೆ.13): ಮುಂದಿನ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ, ಡಿ.ಕೆ.ಶಿವಕುಮಾರ್ ಕರಗಿಹೋಗ್ತಾರೆ, ಕುಮಾರಣ್ಣ ಕುಟುಂಬ ಸೇರ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು. ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಪೇಜ್ ಪ್ರಮುಖರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ, ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಜಯಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವಾರು ದೂರದೃಷ್ಟಿಯುಳ್ಳ ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಭಾರತದ ಹಿಂದೂಗಳ ಐಕ್ಯತೆಯ ಪ್ರತೀಕವಾದ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024ನೇ ಇಸವಿಯಲ್ಲಿ ನಮ್ಮ ನಿಮ್ಮೆಲ್ಲರ ಆರಾಧ್ಯದೈವ ಶ್ರೀ ರಾಮ ಗರ್ಭಗುಡಿ ಪ್ರವೇಶ ಮಾಡಲಿದ್ದಾನೆ ಎಂದರು. ಕಾಂಗ್ರೆಸ್‌ಮುಕ್ತ ಭಾರತ ನಿರ್ಮಾಣ ಮಾಡಲು ಎಲ್ಲ ಕಾರ್ಯಕರ್ತರು ಕೈ ಜೋಡಿಸಬೇಕು. ಶಿವಮೊಗ್ಗದಲ್ಲಿ ಟಿಪ್ಪು ಅಭಿಮಾನಿಗಳು ಇರಬೇಕೋ ಅಥವಾ ಶಿವಪ್ಪ ನಾಯಕನ ಆರಾಧಕರು ಇರಬೇಕೋ ಎನ್ನುವುದನ್ನು ಹಿಂದೂಗಳು ಯೋಚಿಸಬೇಕು.
ಮಹಿಳಾ ಸಾಕ್ಷರತೆಯಿಂದ ದೇಶ ಸುಭಿಕ್ಷವಾಗಿರಲು ಸಾಧ್ಯ: ಬಿ.ವೈ.ವಿಜಯೇಂದ್ರ
ಗ್ರಾಮಾಂತರದಲ್ಲಿ ಹಿಂದೂ ವಿರೋಧಿಗಳನ್ನು ಮನೆಗೆ ಕಳುಹಿಸಬೇಕು. ಸದಾ ಧರ್ಮವಿರೋಧಿ ಹೇಳಿಕೆಗಳನ್ನು ನೀಡುತ್ತ ಮುಸ್ಲಿಮರ ಓಲೈಕೆ ಮಾಡುವ ಧರ್ಮಾಂಧರನ್ನು ಮುಂದಿನ ದಿನಗಳಲ್ಲಿ ರಾಜಕೀಯದಿಂದ ದೂರ ಇಡಬೇಕು ಎಂದರು. ಕಾಂಗ್ರೆಸ್ ಈಗ ಒಡೆದ ಮನೆ. ಅಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಲೇ ಇದೆ. ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು’ ಎನ್ನುವಂತೆ ಚುನಾವಣೆಯಲ್ಲಿ ಗೆಲ್ಲುವುದೇ ಅನುಮಾನ ಆಗಿರುವಾಗ ಕುರ್ಚಿಗಾಗಿ ಕಾದಾಟ ಶುರುವಾಗಿದೆ. ರಾಜ್ಯದ 52 ಸಾವಿರ ಬೂತ್‌ಗಳಲ್ಲಿ, 48 ಸಾವಿರ ಪೇಜ್ ಪ್ರಮುಖರ ಕಾರ್ಯ ಯಶಸ್ವಿಯಾಗಿದೆ. ಗುಜರಾತ್ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತದೆ ಎಂದರು.
ಶಾಸಕ ಕೆ.ಬಿ.ಅಶೋಕ್ ನಾಯ್‌್ಕ ಮಾತನಾಡಿ, ಕೇವಲ 43 ವರ್ಷಗಳ ಇತಿಹಾಸವಿರುವ ನಮ್ಮ ಪಕ್ಷದ ಕೇಂದ್ರದಲ್ಲಿ 303 ಸಂಸದರು ಮತ್ತು 1422 ಜನ ಶಾಸಕರನ್ನು ನೀಡಿದೆ. ಇದು ನಮ್ಮ ಪಕ್ಷದ ಸಂಘಟನಾ ಶಕ್ತಿ. ಈ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಗ್ರಾಮಾಂತರ ಮತ್ತು ಜಿಲ್ಲೆಯಲ್ಲಿ ಹಲವಾರು ಶಾಶ್ವತ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶೌಚಾಲಯದಿಂದ ಸುಸಜ್ಜಿತ ವಿಮಾನ ನಿಲ್ದಾಣದ ವರೆಗೂ ಬಿಜೆಪಿಯ ಸಾಧನೆ. ಕ್ಷೇತ್ರದ ಶಾಸಕನಾಗಿ ಕುಂಸಿ, ಹಾರನಹಳ್ಳಿ ಭಾಗದ ಏತ ನೀರಾವರಿ ಯೋಜನೆಗೆ 350 ಕೋಟಿ ರೂಪಾಯಿಗಳ ಅನುದಾನ ತಂದು ಸುಮಾರು 174 ಕೆರೆಗಳಿಗೆ ನೀರು ತುಂಬಿಸು ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 27380 ದಾಖಲೆರಹಿತ ಗ್ರಾಮಗಳಿವೆ. ಅದರಲ್ಲಿ ನಮ್ಮ ಗ್ರಾಮಾಂತರದಲ್ಲಿ 74 ಗ್ರಾಮಗಳು ದಾಖಲೆರಹಿತ ಗ್ರಾಮಗಳಿವೆ. ಅದರಲ್ಲೂ ದಾಖಲೆರಹಿತ ಮನೆಗಳಿಗೆ 94ಡಿ, 94ಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನ. ಅಡುತ್ತಿದ್ದು, ಅದರ ಭಾಗವಾಗಿ 5000 ಹಕ್ಕುಪತ್ರಗಳನ್ನು ನಮ್ಮ ದಣಿವರಿಯದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದಂದು, ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದರು. ಇಡೀ ರಾಜ್ಯಕ್ಕೆ ಬೆಳಕು ನೀಡಿದಂಥ ಶರಾವತಿ ಮುಳುಗಡೆ ಸಂತ್ರಸ್ತರು ಚಿತ್ರಶೆಟ್ಟಿಗಳ್ಳಿಗೆ ಸ್ವತಂತ್ರ್ಯ ಬಂದು ಇಷ್ಟುವರ್ಷ ಕಳೆದರೂ ವಿದ್ಯುತ್ ಸಂಪರ್ಕ ಇರಲಿಲ್ಲ. ಅಂತಹ ಗ್ರಾಮಕ್ಕೂ ಕೂಡ ಯುಜಿ ಕೇಬಲ್ ಅಳವಡಿಸಿ, ಆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ನಮ್ಮ ಪಕ್ಷ ಪ್ರತಿ ಏಳು-ಎಂಟು ಮನೆಗಳಿಗೆ ಒಬ್ಬರನ್ನು ಪ್ರಮುಖರನ್ನಾಗಿ ಆಯ್ಕೆ ಮಾಡಿ, ಅವರಿಗೆ ಆ ಪೇಜ್‌ನಲ್ಲಿ ಬರುವ ಕನಿಷ್ಠ ಮುವತ್ತು ಜನ ಮತದಾರರನ್ನು ಸಂಘಟಿಸುವ ಜವಾಬ್ದಾರಿಯನ್ನು ನೀಡಿರುವ ವಿಶ್ವದ ಏಕೈಕ ರಾಜಕೀಯ ಪಕ್ಷ ಅಂದರೆ ಅದು ನಮ್ಮ ಭಾರತೀಯ ಜನತಾ ಪಕ್ಷವಾಗಿದೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕಮಲ ಗುರುತಿನ ಚಿಹ್ನೆಯ ಅಭ್ಯರ್ಥಿಯನ್ನು ಶಾಸಕರನ್ನಾಗಿ ನೀಡುವ ಭರವಸೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡುವೆವು ಎಂದು ಹೇಳಿದರು.
ಬಿಜೆಪಿಯಿಂದ ಧರ್ಮದ ವಿಷ ಬೀಜ ಬಿತ್ತನೆ: ಡಿ.ಕೆ.ಶಿವಕುಮಾರ್
ವಿಧಾನ ಪರಿಷತ್ತು ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಧನಂಜಯ ಸರ್ಜಿ, ಪವಿತ್ರ ರಾಮಯ್ಯ, ಎಂ.ಬಿ.ಭಾನುಪ್ರಕಾಶ್, ಕಲ್ಲಜ್ಜನಾಳ್ ಮಂಜುನಾಥ್, ರಾಜೇಶ್ ಪಟೇಲ, ಮಾಜಿ ಶಾಸಕ ಮೋನಪ್ಪ ಬಂಡಾರಿ, ರಾಜ್ಯಗಳ ಪ್ರಭಾರಿ ಅಶೋಕ್ ಮೂರ್ತಿ, ಪದ್ಮಿನಿ, ಗ್ರಾಪಂ ಅಧ್ಯಕ್ಷ ಮಾಸ್ತಿ ಸುರೇಶ್ ಸೇರಿದಂತೆ ಇತರರು ಇದ್ದರು.