
ಮಂಗಳೂರು(ನ.20): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಾಪಸ್ ಬೆನ್ನಲ್ಲೇ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ಷೇತ್ರದಾದ್ಯಂತ ವ್ಯಾಪಕ ಓಡಾಟ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ, ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಮುನಿಸು ಮರೆತು ಒಂದಾಗಿದ್ದು, ಹಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.
ಪುತ್ತೂರಿನಲ್ಲಿ ಗುರುವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲದೆ, ಶುಕ್ರವಾರವೂ ನಗರದ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ಕೂಡ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ತನ್ನ ಪಟ್ಟ ಶಿಷ್ಯ ನಳಿನ್ ಕುಮಾರ್‌ಗೆ ಸನ್ಮಾನ ಮಾಡಿದ ಪ್ರಭಾಕರ ಭಟ್, ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಸ್ತಾಪಿಸಿ, ಶಂಕುಸ್ಥಾಪನೆ ಮಾಡಿದ ಸಂಸದರಿಂದಲೇ ಉದ್ಘಾಟನೆಯೂ ಆಗಲಿ ಎಂದು ಹಾರೈಸಿದರು. ಆ ಮೂಲಕ ಪ್ರಭಾಕರ ಭಟ್ ಅವರು ಪರೋಕ್ಷವಾಗಿ ಕಟೀಲ್ ಪರ ಬ್ಯಾಟ್ ಬೀಸಿದ್ದು, ಇದು ಸ್ವತಃ ಬಿಜೆಪಿಯಲ್ಲಿ ಹಾಗೂ ಕಟೀಲ್ ವಿರೋಧಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.
ಸ್ಪೀಕರ್ ಸ್ಥಾನ ಧರ್ಮಾಧಾರಿತವಾಗಿ ನೋಡುವಂಥದಲ್ಲ: ಖಾದರ್
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬೆಂಬಲದಿಂದ 2009ರಲ್ಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಕಟೀಲ್ ಗೆದ್ದಿದ್ದರು. ಬಳಿಕ ಹಲವು ಕಾರಣಗಳಿಂದ ಅವರಿಬ್ಬರ ನಡುವೆ ಬಿರುಕು ಮೂಡಿತ್ತು. ಮೇಲ್ನೋಟಕ್ಕೆ ಚೆನ್ನಾಗಿದ್ದರೂ ತನ್ನ ಪಟ್ಟ ಶಿಷ್ಯನಿಂದ ಪ್ರಭಾಕರ ಭಟ್ ಅಂತರ ಕಾಯ್ದುಕೊಂಡಿದ್ದರು. ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಗೇರಿದ ಮೇಲೂ ಅಂತರ ಮುಂದುವರಿದಿತ್ತು.
ಆದರೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಪುತ್ತೂರಿನಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಟಿಕೆಟ್ ಸಿಗದ ಕಾರಣ ಬಿಜೆಪಿ ವಿರುದ್ಧ ಸ್ಪರ್ಧಿಸಿದಾಗ ಪಕ್ಷದ ಪರ ಪ್ರಭಾಕರ ಭಟ್ ಚುನಾವಣಾ ಪ್ರಚಾರಕ್ಕೆ ಇಳಿದಿದ್ದರು. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕಟೀಲ್ ಜೊತೆಗಿನ ಮುನಿಸು ಮರೆತು ಪ್ರಭಾಕರ ಭಟ್ ಪಕ್ಷಕ್ಕಾಗಿ ಕೆಲಸ ಮಾಡಿದ್ದರು. ಇದೀಗ, ಲೋಕಸಭಾ ಚುನಾವಣೆ ಹೊತ್ತಲ್ಲಿ ಮತ್ತೆ ಆತ್ಮೀಯವಾಗಿ ನಳಿನ್ ಕುಮಾರ್ ಹಾಗೂ ಪ್ರಭಾಕರ ಭಟ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.