ಬಿ. ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ನವ ಉತ್ಸಾಹ ಬಂದಿದೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯು ಮತ್ತೆ ಪುಟಿದೇಳಲಿದೆ. ಯುವಶಕ್ತಿ ಪಡೆ ವಿಜಯೇಂದ್ರ ಜೊತೆಯಲ್ಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ, ಹುರುಪು ಹೆಚ್ಚಲಿದೆ: ಕೆ.ಬಿ.ಕೊಟ್ರೇಶ್
ದಾವಣಗೆರೆ(ನ.20): ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಮಠಕ್ಕೆ ಭೇಟಿ ನೀಡಿದ ಬಿ. ವೈ.ವಿಜಯೇಂದ್ರರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ನೇತೃತ್ವದ ನಿಯೋಗವು ಭೇಟಿಯಾಗಿ ಅಭಿನಂದನೆ ಸಲ್ಲಿಸಿತು.
ಈ ವೇಳೆ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದು ಕೆ.ಬಿ.ಕೊಟ್ರೇಶ್ ಮಾತನಾಡಿ ಬಿ. ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ನವ ಉತ್ಸಾಹ ಬಂದಿದೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯು ಮತ್ತೆ ಪುಟಿದೇಳಲಿದೆ. ಯುವಶಕ್ತಿ ಪಡೆ ವಿಜಯೇಂದ್ರ ಜೊತೆಯಲ್ಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ, ಹುರುಪು ಹೆಚ್ಚಲಿದೆ ಎಂದು ತಿಳಿಸಿದರು.
ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ
ಬಿ. ವೈ.ವಿಜಯೇಂದ್ರರ ಸಾರಥ್ಯದಲ್ಲಿ ಎಲ್ಲರೂ ಹೋರಾಡುತ್ತೇವೆ. ಅವರೂ ಪಕ್ಷದಲ್ಲಿ ಹಲವು ಜವಾಬ್ದಾರಿಯ ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ, ಸೂಕ್ತ ವ್ಯಕ್ತಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಬಿಜೆಪಿ ಹೈಕಮಾಂಡ್‌ಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದರು.
ವಿಜಯೇಂದ್ರ ಕೆ.ಬಿ.ಕೊಟ್ರೇಶ್ ಸೇರಿದಂತೆ ಎಲ್ಲಾ ನಾಯಕರ ಜೊತೆ ಸಮಾಲೋಚನೆ ನಡೆಸಿ, ನಿಮ್ಮೆಲ್ಲರ ಸಹಕಾರ ಬೇಕು. ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ನೀವೆಲ್ಲರೂ ಸಹಕಾರ ನೀಡಿ. ನಾನೂ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದು ಭರವಸೆ ನೀಡಿದ್ದಾರೆ ಎಂದು ಕೊಟ್ರೇಶ್ ತಿಳಿಸಿದ್ದಾರೆ. ಈ ವೇಳೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಸಂಸದ ಡಾ. ಜಿ. ಎಂ.ಸಿದ್ದೇಶ್ವರ ಪುತ್ರ ಅನಿತ್ ಕುಮಾರ್, ನಾರಾಯಣಸ್ವಾಮಿ, ಮಾಜಿ ಸಂಸದ ನರೇಂದ್ರ ಸ್ವಾಮಿ ಸೇರಿ ಇತರರಿದ್ದರು.