ಸಂಸದೀಯ ಮಂಡಳಿಲ್ಲಿ ಬಿಎಸ್‌ವೈಗೆ ಸ್ಥಾನ: ನಳಿನ್‌ ಕುಮಾರ್‌ ಕಟೀಲ್‌ ಸಂತಸ

By Govindaraj SFirst Published Aug 18, 2022, 3:00 AM IST
Highlights

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ ನೀಡಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ವಾಗತಿಸಿದ್ದಾರೆ.

ಬೆಂಗಳೂರು (ಆ.18): ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ ನೀಡಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ವಾಗತಿಸಿದ್ದಾರೆ. ರಾಜ್ಯದ ಪಕ್ಷದ ಹಿರಿಯರು, ಮಾರ್ಗದರ್ಶಕರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಸಂಸದೀಯ ಮಂಡಳಿಯಲ್ಲಿ ಸೇರಿಸಿರುವುದು ಮಹತ್ವದ ಕ್ರಮ ಎಂದು ತಿಳಿಸಿದ್ದಾರೆ.

ದೇಶದೆಲ್ಲೆಡೆ ಪಕ್ಷದ ಸಂಘಟನೆ ಮತ್ತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ನಿರ್ಧಾರ ಮಾಡಿದ್ದು, ಅವರಿಗೆ ಪಕ್ಷದ ರಾಜ್ಯ ಘಟಕದ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದ ಸಮರ್ಪಿಸುವುದಾಗಿ ನಳಿನ್‌ ಕುಮಾರ್‌ ಕಟೀಲ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ. ಯಡಿಯೂರಪ್ಪ ಮತ್ತು ಬಿ.ಎಲ್‌.ಸಂತೋಷ್‌ ಅವರನ್ನು ಸಂಸದೀಯ ಮಂಡಳಿಯಲ್ಲಿ ಸೇರಿಸಿರುವುದು ಮಹತ್ವದ ಕ್ರಮ. ದೇಶದೆಲ್ಲೆಡೆ ಪಕ್ಷದ ಸಂಘಟನೆ ಮತ್ತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ನಿರ್ಧಾರ ಮಾಡಿದ್ದಾರೆ. ಅವರಿಗೆ ಧನ್ಯವಾದ ಎಂದು ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಸಂಸದೀಯ ಮಂಡಳಿಗೆ ಬಿಎಸ್‌ವೈ ನೇಮಕ ಸಂತೋಷ ತಂದಿದೆ: ಕೇಂದ್ರದ ಸಂಸದೀಯ ಹಾಗೂ ಚುನಾವಣಾ ಸಮಿತಿಯ ಸದಸ್ಯರಾಗಿ ನಮ್ಮ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಜವಾಬ್ದಾರಿ ಕೂಡ ಹೆಚ್ಚಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರ ಕೊಡುಗೆ ದೊಡ್ಡದಿದೆ. 

ಇದೀಗ ಅವರ ನೇಮಕದಿಂದ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ಮತ್ತು ರಾಜ್ಯದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು. ಯಡಿಯೂರಪ್ಪ ಅವರನ್ನು ಮಾಸ್‌ ಲೀಡರ್‌ ಮಾಡಿದ್ದು ಸಂಘಟನೆ ಮತ್ತು ಬಿಜೆಪಿ. ಇಲ್ಲಿ ಯಡಿಯೂರಪ್ಪ ಬೇರೆ, ಸಂಘಟನೆ ಬೇರೆ, ಪಕ್ಷ ಬೇರೆ ಎಂಬುದಿಲ್ಲ. ಇದೊಂದು ಕುಟುಂಬದ ರೀತಿ ಎಂದು ಹೇಳಿದರಲ್ಲದೇ, ಮುಂದಿನ ಚುನಾವಣೆ ನಾಯಕತ್ವ ಬಗ್ಗೆ ಪಕ್ಷ ಮತ್ತು ಸಂಘಟನೆ ನಿರ್ಧಾರ ಮಾಡುತ್ತದೆ ಎಂದರು.

ಪಕ್ಷಕ್ಕೆ ಭಾರಿ ಬಲಬಂದಂತಾಗಿದೆ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಭಾರತೀಯ ಜನತಾ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಮಹತ್ವದ ಸ್ಥಾನ ಪಡೆದಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ, ಇದರಿಂದ ಪಕ್ಷಕ್ಕೆ ಭಾರಿ ಬಲಬಂದಂತಾಗಿದೆ. ಪಕ್ಷದ ಸಂಘಟನೆಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ತಿಳಿಸಿದ್ದಾರೆ. 

ದೇಶಭಕ್ತರ ಫ್ಲೆಕ್ಸ್‌ ತೆರವು ಮಾಡಿದ ಕಿಡಿಗೇಡಿಗಳ ಬಂಧಿಸಿ: ನಳಿನ್‌ಕುಮಾರ್‌ ಕಟೀಲ್‌

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ಇಡೀ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಸುದೀರ್ಘ ರಾಜಕೀಯ ಅನುಭವ, ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನಾತ್ಮಕವಾಗಿ ಇನ್ನಷ್ಟುಬಲಗೊಳ್ಳಲಿದೆ. ಯಡಿಯೂರಪ್ಪ ಹಾಗೂ ಬಿ.ಎಲ್‌. ಸಂತೋಷ್‌ ಬಿಜೆಪಿಗೆ ಆಧಾರಸ್ತಂಭವಾಗಿ ಇದ್ದಾರೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ, ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌, ಎಲ್ಲ ಸಚಿವರು ಹಾಗೂ ಪಕ್ಷದ ಪ್ರಮುಖರ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿರುವುದು ನಿಶ್ಚಿತವಾಗಿದೆ ಎಂದರು.

click me!