
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಆ.17): ವಿಧಾನಸಭಾ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಜೆಡಿಎಸ್‌ನಿಂದ ಉಚ್ಚಾಟನೆಯಾದ ಮಾಜಿ ಸಂಸದ ಶಿವರಾಮೇಗೌಡ ನಾಗಮಂಗಲದಿಂದ ಸ್ಪರ್ಧಿಸಲು ಭರ್ಜರಿ ತಯಾರಿ ಆರಂಭಿಸಿದ್ದಾರೆ. ಈ ಮೂಲಕ ದಳಪತಿಗಳಿಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ನಾಗಮಂಗಲ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಶಿವರಾಮೇಗೌಡ ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ತಯಾರಿ ಆರಂಭಿಸಿರುವ ಅವರು ಇಡೀ ಕ್ಷೇತ್ರ ವ್ಯಾಪಿ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಪಂಚಾಯತಿ ವಾರು ಪ್ರವಾಸ ಆರಂಭಿಸಿ ಬೆಂಬಲಿಗರೊಂದಿಗೆ ಪ್ರತಿ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ಶಿವರಾಮೇಗೌಡರಿಗೆ ಭರ್ಜರಿ ಸ್ವಾಗತ ಸಿಗ್ತಿದ್ದು, ಹೀಗಾಗಿ ಈ ಬಾರಿ ನಾಗಮಂಗಲದಲ್ಲಿ ತ್ರಿಕೋನ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ನಾಗಮಂಗಲ ಕ್ಷೇತ್ರದಿಂದ ಎರಡು ಬಾರಿ ಪಕ್ಷೇತರವಾಗಿ ಆಯ್ಕೆ ಆಗಿರುವ ಶಿವರಾಮೇಗೌಡ. ಇದೀಗ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.
ಒಕ್ಕಲಿಗರ ಪ್ರಾಭಲ್ಯವಿರುವ ನಾಗಮಂಗಲದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಹಿಡಿತ ಸಾಧಿಸಿದ್ದರು. ಈ ಬಾರಿ ಅವರ ಮುಖ ನೋಡಿ ಯಾರು ಮತ ಕೊಡಲ್ಲ. ಶಿವರಾಮೇಗೌಡನನ್ನು ನೋಡಿ ಜನ ಮತ ಹಾಕ್ತಾರೆ. ಹಾಲಿ ಶಾಸಕ ಸುರೇಶ್‍ಗೌಡ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಇಬ್ಬರು ಮಹಾನ್ ನಾಯಕರನ್ನು ಒಟ್ಟಿಗೆ ಸೋಲಿಸುವ ಅವಕಾಶ ನನಗೆ ಬಂದಿದೆ ಎಂದು ಸುರೇಶ್‍ಗೌಡ ಹಾಗೂ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1 ತಿಂಗಳ ಹಿಂದೆಯೇ ಪ್ರಚಾರ ಕೈಗೊಂಡಿದ್ದ ಶಿವರಾಮೇಗೌಡ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಆಗಲೇಬೇಕು. ಈ ಸ್ಪರ್ಧೆಯಲ್ಲಿ ನಾನು ಕನಿಷ್ಠ 15 ಸಾವಿರ ಬಹುಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಹೊರತು ಬೇರಾರಯರು ಗೆಲ್ಲಲು ಸಾಧ್ಯವೇ ಇಲ್ಲ ಎಂದು ಮಾಜಿ ಸಂಸದ ಶಿವರಾಮೇಗೌಡ ಭವಿಷ್ಯ ನುಡಿದಿದ್ದರು. ಕಳೆದ ಒಂದು ತಿಂಗಳ ಹಿಂದೆಯೇ ಈಗಾಗಲೇ ನಾನು ನನ್ನದೇ ಆದ ಗುಂಪು ಕಟ್ಟಿಕೊಂಡು ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಈ ನನ್ನ ಶಕ್ತಿಯನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾವ ಪಕ್ಷದಿಂದ ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೋ ಗೊತ್ತಿಲ್ಲ. ಆದರೆ, ಮುಂದಿನ 2023ರ ಚುನಾವಣೆಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಶತಸಿದ್ಧ ಎಂದಿದ್ದರು.
ನಾನು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲಿಯೂ ಇದ್ದವನು. ಈಗ ಎಲ್ಲ ಪಕ್ಷದವರೂ ನನ್ನನ್ನು ಕರೆಯುತ್ತಿದ್ದಾರೆ. ಏಕೆಂದರೆ ತಾಲೂಕಿನಲ್ಲಿ ಶಿವರಾಮೇಗೌಡರ ಶಕ್ತಿ ಏನೆಂಬುದು ಬೆಂಗಳೂರಿನಲ್ಲಿ ಕುಳಿತಿರುವ ಎಲ್ಲ ಪಕ್ಷದವರಿಗೂ ಗೊತ್ತಿದೆ ಎಂದು ಹೇಳಿದ್ದರು.
Mandya ಹೈವೋಲ್ಟೇಜ್ ನಾಗಮಂಗಲ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ, ಶಿವರಾಮೇಗೌಡ ಭರ್ಜರಿ ಸಿದ್ದತೆ
ನಾನು ಈಗಾಗಲೇ ಕೊಪ್ಪ ಹೋಬಳಿಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದು, ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಹಳ್ಳಿಗಳು ಹೇಗಿದ್ದವು ಜನ ಹೇಗಿದ್ದರು ಈಗ ಯಾವ ಪರಿಸ್ಥಿತಿಯಲ್ಲಿವೆ ಏನೇನು ಸಮಸ್ಯೆಗಳಿವೆ ಎಂಬುದನ್ನು ಅರಿಯುವ ಉದ್ದೇಶದಿಂದ ಇಡೀ ತಾಲೂಕಿನಾದ್ಯಂತ ಒಮ್ಮೆ ಪ್ರವಾಸ ನಡೆಸುತ್ತೇನೆ. ಆನಂತರಲ್ಲಿ ಏನೆಲ್ಲಾ ಕ್ರಮ ವಹಿಸಬೇಕೆಂಬುದನ್ನು ನಿರ್ಧರಿಸಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಯಾರು ಹೆಚ್ಚು ಮತ ಪಡೆಯುವರೋ ಅವರು ರಾಜಕೀಯದಲ್ಲಿ ಮುಂದುವರಿಯಲಿ. ಸೋತವರು ರಾಜಕೀಯದಿಂದ ನಿವೃತ್ತಿ ಘೋಷಿಸಲಿ ಎಂದು ಶಾಸಕ ಸುರೇಶ್ ಗೌಡ ಮತ್ತು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಒಂದು ತಿಂಗಳ ಹಿಂದೆಯೇ ಸವಾಲು ಹಾಕಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.