
, ಬೆಂಗಳೂರು (ಜ.17) : ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕೆಂಬ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕ ಗಾಂಧಿ ಆಶಯದಂತೆ ನಾ ನಾಯಕಿ ಸಮಾವೇಶ ವಿಜೃಂಭಣೆಯಿಂದ ಜರುಗಿತು. ರಾಜಕೀಯ ಸಮಾವೇಶವೆಂದರೆ ವೇದಿಕೆಯಿಂದ ಹಿಡಿದು ಎಲ್ಲೆಡೆ ಪುರುಷ ರಾಜಕಾರಣಿಗಳ ಆರ್ಭಟವೇ ಹೆಚ್ಚು. ಆದರೆ, ನಾ ನಾಯಕಿ ಸಮಾವೇಶದಲ್ಲಿ ವೇದಿಕೆ ಮಾತ್ರವಲ್ಲ ಎಲ್ಲೆಲ್ಲೂ ನಾರಿಯರದ್ದೇ ದರ್ಬಾರು. ಭಾಷಣ ಮಾಡಿದವರು, ಜೈಕಾರ ಕೂಗಿದವರು, ಬಾವುಟ ಹಿಡಿದವರೆಲ್ಲರೂ ಮಹಿಳೆಯರೇ ಆಗಿದ್ದರು. ಈ ಸಮಾವೇಶದಲ್ಲಿ ರಾಜ್ಯದ ಘಟಾನುಘಟಿ ನಾಯಕರು ಕೂಡ ವೇದಿಕೆ ಕೆಳಭಾಗದಲ್ಲಿ ಕುಳಿತು ಸಮಾವೇಶ ವೀಕ್ಷಿಸಿದ್ದು ಮಹಿಳೆಯರಿಗೆ ಕೊಟ್ಟಪ್ರಾಮುಖ್ಯತೆಗೆ ಸಾಕ್ಷಿಯಾಗಿತ್ತು.
ಬೃಹತ್ ಸೇಬಿನ ಹಾರ:
‘ನಾ ನಾಯಕಿ’ ಕಾರ್ಯಕ್ರಮಕ್ಕೆ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಪ್ರಿಯಾಂಕಾ ಗಾಂಧಿ ಅವರನ್ನು ದೇವನಹಳ್ಳಿಯಲ್ಲಿ ಸೇಬಿನ ಹಾರವನ್ನು ಹಾಕಿ ಸ್ವಾಗತಿಸಲಾಯಿತು. ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಗೆ ಪೂರ್ಣಕುಂಭದೊಂದ ಸ್ವಾಗತದೊಂದಿಗೆ ಆಗಮಿಸಿದ ಪ್ರಿಯಾಂಕಾ ಅವರಿಗೆ ಬಂಜಾರಾ ಸಮುದಾಯದ ಶಾಲು ಹೊದಿಸಿ ಗೌರವಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮ: ಪ್ರಿಯಾಂಕಾ ಗಾಂಧಿ ಆಕರ್ಷಕ ಫೋಟೋ ವೈರಲ್
ವೇದಿಕೆ ಮಹಿಳೆಯರಿಗೆ ಸೀಮಿತ:
ನಾ ನಾಯಕಿ ಸಮಾವೇಶದ ವೇದಿಕೆಯಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಪುರುಷ ನಾಯಕರು ವೇದಿಕೆಯ ಕೆಳಭಾಗದಲ್ಲಿ ಆಸೀನರಾಗಿದ್ದರು.
ಜೂನಿಯರ್ ಇಂದಿರಾ:
ಮಾಜಿ ಸಚಿವೆ ಮೋಟಮ್ಮ ಅವರು, ಮಹಿಳೆಯರು ಒಂದು ಕುಟುಂಬ ನಿರ್ವಹಿಸಲು ಸಮರ್ಥರಾಗಿದ್ದೇವೆ. ಅದೇ ರೀತಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹ ಸಮರ್ಥರಾಗಿದ್ದೇವೆ. ಜೂನಿಯರ್ ಇಂದಿರಾಗಾಂಧಿ ಏನು ಮಾರ್ಗದರ್ಶನ ಮಾಡುತ್ತಾರೋ ಆ ರೀತಿ ಪಕ್ಷ ಕಟ್ಟಲು ಟೊಂಕ ಕಟ್ಟಿನಿಲ್ಲುತ್ತೇವೆ. ಈ ಸಮಾವೇಶಕ್ಕೆ ನಾವು ಜೂನಿಯರ್ ಇಂದಿರಾ ಮಾತು ಕೇಳಲು ಸೇರಿದ್ದೇವೆ ಎಂದು ಹೇಳಿದಾಗ ಇಡೀ ಸಭಾಂಗಣದಲ್ಲಿ ಪ್ರಿಯಾಂಕ ಪರ ಜೈಕಾರಗಳು ಮೊಳಗಿತು.
ಸ್ತ್ರೀಶಕ್ತಿ ಸಂಘಗಳದ್ದೇ ಸಿಂಹಪಾಲು:
ನಾ ನಾಯಕಿ ಸಮಾವೇಶಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದರು. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕೋಲಾರ, ಮೈಸೂರು, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಅದರಲ್ಲಿ ಬಹುತೇಕ ಸ್ತ್ರೀಶಕ್ತಿ ಸಂಘಗಳ ಕಾರ್ಯಕರ್ತರೇ ಇದ್ದದ್ದು ವಿಶೇಷ.
ಪ್ರಿಯಾಂಕಾರೊಂದಿಗೆ ಸೆಲ್ಫಿ:
ವೇದಿಕೆಯ ಮೇಲೆಯೇ ತಮ್ಮ ನೆಚ್ಚಿನ ನಾಯಕಿ ಪ್ರಿಯಾಂಕಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮಹಿಳಾ ಕಾಂಗ್ರೆಸ್ ನಾಯಕಿಯರು, ಮುಖಂಡರು ಮುಗಿಬಿದ್ದರು. ಯಾವುದೇ ಹಮ್ಮುಬಿಮ್ಮು ಇಲ್ಲದೆ ಹಸನ್ಮುಖಿಯಾಗಿಯೇ ಪ್ರಿಯಾಂಕಾ ಪೋಸು ನೀಡಿದರು.
ಬಂದವರಿಗೆಲ್ಲಾ 2000 ರು. ಚೆಕ್:
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರು. ಕೊಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸಹಿ ಮಾಡಿದ ಮಾದರಿ ಚೆಕ್‌ಗಳನ್ನು (ಮಾಡೆಲ್ ಚೆಕ್) ಸಮಾರಂಭದಲ್ಲಿ ಭಾಗವಹಿಸಿದ ಮಹಿಳೆಯರಿಗೆಲ್ಲ ವಿತರಿಸಲಾಯಿತು.
ವೈರಲ್ ಆಯ್ತು ಸಿದ್ದರಾಮಯ್ಯ ವಿಡಿಯೋ!
ಫ್ಲೆಕ್ಸ್ ಭರಾಟೆ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅರಮನೆ ಮೈದಾನದ ವರೆಗೂ ರಸ್ತೆಗಳ ಇಕ್ಕೆಲುಗಳಲ್ಲಿ, ಪ್ರಮುಖ ವೃತ್ತಗಳಲ್ಲಿ, ಮೇಲ್ಸೇತುವೆಗಳ ಬಳಿ, ಮರಗಳು, ಸ್ಕೈವಾಕ್‌ಗಳಲ್ಲಿ, ರಸ್ತೆ ವಿಭಜಕಗಳ ಮಧ್ಯೆ ಹೀಗೆ ಎಲ್ಲೆಂದರಲ್ಲಿ ಪ್ರಿಯಾಂಕಾ, ರಾಹುಲ್, ಸೋನಿಯಾ ಫ್ಲೆಕ್ಸ್, ಬ್ಯಾನರ್ ರಾರಾಜಿಸಿದ್ದವು.
'ಪ್ರಿಯಾಂಕಾ ಇರುವ ‘ನಾ ನಾಯಕಿ’ ಕಾರ್ಯಕ್ರಮಕ್ಕೆ ಪುರುಷರಿಗೆ ಪ್ರವೇಶವಿಲ್ಲ'
ಸಂಚಾರ ದಟ್ಟಣೆ:
ರಾಜ್ಯದ ಬಹುತೇಕ ಜಿಲ್ಲೆಗಳಿಂದ ನೂರಾರು ಬಸ್‌ಗಳು, ಕಾರು, ವ್ಯಾನ್‌ಗಳಲ್ಲಿ ಮಹಿಳೆಯರನ್ನು ಕರೆ ತರಲಾಗಿತ್ತು. ಇದರಿಂದಾಗಿ ಅರಮನೆ ಮೈದಾನದ ಸುತ್ತಮುತ್ತಲ ಪ್ರದೇಶಗಳಾದ ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಯಶವಂತಪುರ ಮುಖ್ಯರಸ್ತೆ, ಸ್ಯಾಂಕಿ ರಸ್ತೆಗಳಲ್ಲಿ ಮಧ್ಯಾಹ್ನ ಸಂಚಾರ ದಟ್ಟಣೆ ಉಂಟಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.