ದೇಶಕ್ಕೆ ಮಂಗಳಸೂತ್ರವನ್ನೇ ನನ್ನಮ್ಮ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

By Kannadaprabha NewsFirst Published Apr 24, 2024, 4:35 AM IST
Highlights

ನನ್ನ ತಾಯಿ ಈ ದೇಶಕ್ಕಾಗಿ ತಮ್ಮ ಮಂಗಳಸೂತ್ರವನ್ನೇ ತ್ಯಾಗ ಮಾಡಿದವರು. ನನ್ನ ಅಜ್ಜಿ ಯುದ್ಧದ ಸಂದರ್ಭದಲ್ಲಿ ತಮ್ಮ ಬಂಗಾರವನ್ನು ದೇಶಕ್ಕೆ ಅರ್ಪಿಸಿದವರು. ಅಂತಹ ಕುಟುಂಬ ಮತ್ತು ಪಕ್ಷ ನಮ್ಮದು. ಆದರೆ, ಮಹಿಳೆಯರ ಮಂಗಳಸೂತ್ರದ ಮಹತ್ವ ಅರಿಯದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಭಾವನೆಗಳಿಗೆ ಘಾಸಿ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದರು.

ಬೆಂಗಳೂರು (ಏ.24): ‘ನನ್ನ ತಾಯಿ ಈ ದೇಶಕ್ಕಾಗಿ ತಮ್ಮ ಮಂಗಳಸೂತ್ರವನ್ನೇ ತ್ಯಾಗ ಮಾಡಿದವರು. ನನ್ನ ಅಜ್ಜಿ ಯುದ್ಧದ ಸಂದರ್ಭದಲ್ಲಿ ತಮ್ಮ ಬಂಗಾರವನ್ನು ದೇಶಕ್ಕೆ ಅರ್ಪಿಸಿದವರು. ಅಂತಹ ಕುಟುಂಬ ಮತ್ತು ಪಕ್ಷ ನಮ್ಮದು. ಆದರೆ, ಮಹಿಳೆಯರ ಮಂಗಳಸೂತ್ರದ ಮಹತ್ವ ಅರಿಯದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಭಾವನೆಗಳಿಗೆ ಘಾಸಿ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದರು.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ಕ್ರಿಕೆಟ್‌ ಮೈದಾನದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಮತಯಾಚನೆ ಮಾಡಿ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಮಂಗಳಸೂತ್ರದ ಮಹತ್ವದ ಬಗ್ಗೆ ಅರಿವಿಲ್ಲದವರು ಅಸಂಬದ್ಧವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಿತ್ತುಕೊಳ್ಳುತ್ತದೆ ಎಂದು ಹೇಳುತ್ತಾರೆ. 60ಕ್ಕೂ ಹೆಚ್ಚಿನ ವರ್ಷ ದೇಶವನ್ನಾಳಿದ ಕಾಂಗ್ರೆಸ್ ಯಾವತ್ತೂ ಮಹಿಳೆಯರ ಮಂಗಳಸೂತ್ರ ಕೀಳುವ ಕೆಲಸ ಮಾಡಿಲ್ಲ’ ಎಂದರು.

ನಾನು ಬಿ.ಆರ್.ಅಂಬೇಡ್ಕರ್ ಅವರನ್ನು ಆರಾಧಿಸುವ ವ್ಯಕ್ತಿ: ನರೇಂದ್ರ ಮೋದಿ

‘ನನ್ನ ಅಜ್ಜಿ ಇಂದಿರಾಗಾಂಧಿ ಅವರು ಯುದ್ಧದ ಸಂದರ್ಭದಲ್ಲಿ ತಮ್ಮ ಚಿನ್ನವನ್ನೆಲ್ಲ ದೇಶಕ್ಕೆ ನೀಡಿದವರು. ನನ್ನ ತಾಯಿಯ ಮಂಗಳಸೂತ್ರ ದೇಶಕ್ಕೆ ಸಮರ್ಪಿಸಲಾಗಿದೆ. ಮಹಿಳೆಯರ ಸೇವೆ, ಸಂಘರ್ಷಗಳ ಬಗ್ಗೆ ಅರಿವಿಲ್ಲದ ನರೇಂದ್ರ ಮೋದಿ ಅವರು ಮಂಗಳಸೂತ್ರದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.‘ನಮ್ಮ ದೇಶದ ಪರಂಪರೆಯು ಮಹಿಳೆಯರ ಸೇವೆ, ಸಂಘರ್ಷದ ಮೇಲೆ ನಿಂತಿದೆ. ನೋಟ್‌ಬ್ಯಾನ್‌ ಮಾಡಿದಾಗ ಮಹಿಳೆಯರು ಕೂಡಿಟ್ಟಿದ್ದ ಹಣವನ್ನೆಲ್ಲ ಕಿತ್ತುಕೊಳ್ಳುವಾಗ ನರೇಂದ್ರ ಮೋದಿ ಅವರಿಗೆ ಮಂಗಳಸೂತ್ರದ ನೆನಪಾಗಲಿಲ್ಲ. ಲಾಕ್‌ಡೌನ್‌ ಮಾಡಿ ಕಾರ್ಮಿಕರು ಮತ್ತು ಕುಟುಂಬ ಬರಿಗಾಲಲ್ಲಿ ತಮ್ಮ ಊರಿಗೆ ಸಾಗುವಾಗ ಮಂಗಳಸೂತ್ರದ ನೆನಪಾಗಲಿಲ್ಲ. ಕೃಷಿಕರು ಆಂದೋಲನ ಮಾಡಿದಾಗ 600ಕ್ಕೂ ಹೆಚ್ಚಿನ ಕೃಷಿಕರು ಸಾವನ್ನಪ್ಪಿದರು. ಅವರ ಪತ್ನಿಯರ ಮಂಗಳಸೂತ್ರದ ಬಗ್ಗೆ ಯೋಚಿಸಲಿಲ್ಲ. ಮಣಿಪುರದಲ್ಲಿ ಯೋಧನ ಪತ್ನಿಯನ್ನು ವಿವಸ್ತ್ರಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡುವಾಗ ನರೇಂದ್ರ ಮೋದಿ ಅವರಿಗೆ ಆಕೆಯ ಮಂಗಳಸೂತ್ರದ ಬಗ್ಗೆ ಯೋಚನೆ ಬರಲಿಲ್ಲ. ಆದರೀಗ, ಚುನಾವಣೆಗಾಗಿ ಮಂಗಳಸೂತ್ರದ ನೆನಪಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ, ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್‌ ಅಹಮದ್‌ಖಾನ್‌, ಕೆ.ಜೆ. ಜಾರ್ಜ್‌, ಶಾಸಕರಾದ ಪ್ರಿಯಕೃಷ್ಣ, ಎ.ಸಿ. ಶ್ರೀನಿವಾಸ್‌, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಪ್ರಮುಖರಾದ ಉಗ್ರಪ್ಪ, ಉಮಾಪತಿ ಗೌಡ, ವಿ.ಆರ್‌. ಸುದರ್ಶನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ನಲಪಾಡ್‌, ತಮಿಳುನಾಡು ಶಾಸಕ ಟಿ.ಆರ್‌. ರಾಮಚಂದ್ರ ಇತರರಿದ್ದರು.

ಅಭಿವೃದ್ಧಿ ವಿಚಾರವಾಗಿ ಚುನಾವಣೆ ಎದುರಿಸಿ: ಪ್ರಿಯಾಂಕಾ

ಬೆಂಗಳೂರು: ನರೇಂದ್ರ ಮೋದಿ ಅವರು ಚುನಾವಣೆ ಬಂದಾಗಲೆಲ್ಲ ಧರ್ಮ ಸೇರಿದಂತೆ ಜನರ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಜನರ ಮೂಲ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಶಿಕ್ಷಣ, ನಿರುದ್ಯೋಗ, ಬೆಲೆ ಏರಿಕೆ, ಹೆಣ್ಣುಮಕ್ಕಳ ಸಬಲೀಕರಣ ವಿಚಾರವಾಗಿ ಮಾತನಾಡಲಿ. ದೇಶದಲ್ಲಿ ದೊಡ್ಡ ಸಮಸ್ಯೆಗಳಿವೆ. ಅದನ್ನು ಬಿಟ್ಟು ಸಣ್ಣ ಮಟ್ಟದ ಮಾತನಾಡುತ್ತಾ, ದಿನವಿಡೀ ಸುಳ್ಳು ಹೇಳುತ್ತಾ ಚುನಾವಣೆ ಎದುರಿಸುತ್ತಿದ್ದಾರೆ. ಅವರು ದೇಶದ, ಜನರ ಸಮಸ್ಯೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲಿ ಎಂದು ಪ್ರಿಯಾಂಕಾ ಗಾಂಧಿ ಸವಾಲು ಹಾಕಿದರು.

ಚುನಾವಣಾ ಬಾಂಡ್ ವಸೂಲಿ ಸ್ಕೀಂ

ಖಾಸಗಿ ಸಂಸ್ಥೆ, ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳು ಪಡೆಯುವ ನಿಧಿಯನ್ನು ಚುನಾವಣಾ ಬಾಂಡ್‌ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಸುಪ್ರೀಂಕೊರ್ಟ್‌ ಅದನ್ನು ಸ್ಥಗಿತಗೊಳಿಸಿತು. ಬಿಜೆಪಿ ಸರ್ಕಾರ ಜಾರಿಗೆ ತಂದ ಈ ಚುನಾವಣಾ ಬಾಂಡ್‌ ಚಂದಾ ಸ್ವೀಕರಿಸುವ ಯೋಜನೆಯಲ್ಲ. ಬದಲಿಗೆ ಕಪ್ಪು ಹಣವನ್ನು ಸಕ್ರಮಗೊಳಿಸುವುದಕ್ಕೆ, ಅಕ್ರಮ ಸಂಸ್ಥೆ, ವ್ಯಕ್ತಿಗಳಿಂದ ವಸೂಲಿ ಮಾಡುವ ಯೋಜನೆಯಾಗಿದೆ. ಬಿಜೆಪಿ ಮಾಡಿದ ಭ್ರಷ್ಟಾಚಾರದಲ್ಲಿ ಇದೂ ಒಂದು ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ಕಾಂಗ್ರೆಸ್​ಗೆ ನರೇಂದ್ರ ಮೋದಿ ಸಂಪತ್ತಿನ ಸವಾಲ್!

ಸತ್ಯ-ಅಧಿಕಾರ ದಾಹದ ನಡುವಿನ ಚುನಾವಣೆ

ಇದು ಸತ್ಯ ಮತ್ತು ಅಧಿಕಾರ ದಾಹವನ್ನು ಹೊಂದಿರುವವರ ನಡುವಿನ ಚುನಾವಣೆ. ನೈತಿಕತೆ, ನಾಟಕೀಯತೆಯ ನಡುವಿನ ಚುನಾವಣೆ, ಪರೋಪಕಾರ ಮತ್ತು ಅಹಂಕಾರದ ರಾಜಕಾರಣದ ನಡುವಿನ ಚುನಾವಣೆ. ಜನರು ಈ ಚುನಾವಣೆಯಲ್ಲಿ ತಮ್ಮ ಬೆಂಬಲ ಯಾರ ಕಡೆಗೆ ಎಂಬುದನ್ನು ನಿರ್ಧರಿಸಬೇಕು. ಜನರು ಎಚ್ಚೆತ್ತುಕೊಳ್ಳದಿದ್ದರೆ ದೇಶ ಮತ್ತಷ್ಟು ಕುಸಿಯಲಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು

click me!