
ಪಿಟಿಐ ಜೈಪುರ (ಏ.24): ಒಂದು ನಿರ್ದಿಷ್ಟ ಧರ್ಮೀಯರಿಗೆ ವಿಪಕ್ಷಗಳು ನೀಡುತ್ತಿರುವ ಕೊಡುಗೆಗಳ ವಿರುದ್ಧ ಸತತ 3ನೇ ದಿನವೂ ತಮ್ಮ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ವಿಸ್ತರಿಸಿ ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಪ್ರಯತ್ನಿಸಿದೆ’ ಎಂದು ಮಂಗಳವಾರ ಆರೋಪಿಸಿದ್ದಾರೆ.
ಇದೇ ವೇಳೆ, ‘ಜನರ ಸಂಪತ್ತನ್ನು ಎಕ್ಸ್‌ರೇ ಮೂಲಕ ಶೋಧಿಸಿ, ಅದನ್ನು ಕಸಿದು ‘ಕೆಲವು ನಿರ್ದಿಷ್ಟ ಜನರಿಗೆ’ ನೀಡುವ ಯತ್ನಗಳು ನಡೆದಿವೆ’ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ.
ರಾಜಸ್ಥಾನದ ಟೋಂಕ್‌ನಲ್ಲಿ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ‘2004ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ ಕೂಡಲೇ ಆಂಧ್ರಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಿತು. ಆಂಧ್ರಪ್ರದೇಶದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಸಿ, ಬಳಿಕ ಇದನ್ನು ದೇಶಾದ್ಯಂತ ವಿಸ್ತರಿಸುವ ಸಂಚು ಕಾಂಗ್ರೆಸ್‌ನದ್ದಾಗಿತ್ತು’ ಎಂದು ಆಪಾದಿಸಿದರು.
ಕಾಂಗ್ರೆಸ್ಗೆ ನರೇಂದ್ರ ಮೋದಿ ಸಂಪತ್ತಿನ ಸವಾಲ್!
‘ಆದರೆ ನಾವು ದಲಿತರು ಮತ್ತು ಹಿಂದುಳಿದ ಬುಡಕಟ್ಟು ಜನಾಂಗದವರಿಗೆ ಮೀಸಲಾತಿಯನ್ನು ಕೊನೆಗೊಳಿಸುವುದಿಲ್ಲ ಅಥವಾ ಧರ್ಮದ ಹೆಸರಿನಲ್ಲಿ ವಿಭಜಿಸಲು ಬಿಡುವುದಿಲ್ಲ. ಇದು ಮುಕ್ತ ಹೃದಯದಿಂದ ನಾನು ನೀಡುವ ಗ್ಯಾರಂಟಿ. ನಾನು ಸಂವಿಧಾನವನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಸಮರ್ಪಿತನಾಗಿದ್ದೇನೆ. ನಾನು ಬಿ.ಆರ್.ಅಂಬೇಡ್ಕರ್ ಅವರನ್ನು ಆರಾಧಿಸುವ ವ್ಯಕ್ತಿ’ ಎಂದು ಹೇಳಿದರು.
ಸಂಪತ್ತು ಕೀಳಲು ಕಾಂಗ್ರೆಸ್ ಸಂಚು:
ಇದೇ ವೇಳೆ ‘ಸಂಪತ್ತಿನ ಮರುಹಂಚಿಕೆ’ ಕುರಿತ ತಮ್ಮ ಆರೋಪ ಮುಂದುವರಿಸಿದ ಮೋದಿ, ‘ಕಾಂಗ್ರೆಸ್ ಜನರ ಸಂಪತ್ತನ್ನು ಕಿತ್ತುಕೊಂಡು ಅದನ್ನು ಆಯ್ದ ಜನರಿಗೆ ಹಂಚುತ್ತದೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಭಾಷಣ ಮಾಡಿ, ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರಿಗೆ ಇದೆ ಎಂದು ಹೇಳಿದ್ದರು. ಆದರೆ ಇದು ಕಾಕತಾಳೀಯ ಹೇಳಿಕೆ ಅಲ್ಲ. ಕಾಂಗ್ರೆಸ್ಸಿನ ಸಿದ್ಧಾಂತ ಯಾವಾಗಲೂ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣ. 2004ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ ತಕ್ಷಣ ಆಂಧ್ರಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಿತು. ದೇಶಾದ್ಯಂತ ಇದನ್ನು ಜಾರಿಗೊಳಿಸುವ ಉದ್ದೇಶದಿಂದ ಆಂಧ್ರದಲ್ಲಿ ಟ್ರಯಲ್ ನಡೆಸಿತ್ತು’ ಎಂದರು.
‘ಬಳಿಕ 2004 ಮತ್ತು 2010 ರ ನಡುವೆ, ಆಂಧ್ರಪ್ರದೇಶದಲ್ಲಿ 4 ಬಾರಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಕಾಂಗ್ರೆಸ್ ಪ್ರಯತ್ನಿಸಿತು. ಆದರೆ ಕಾನೂನು ಅಡಚಣೆಗಳು ಮತ್ತು ಸುಪ್ರೀಂ ಕೋರ್ಟ್ ಜಾಗೃತವಾಗಿ ಇದ್ದ ಕಾರಣ, ಅದರ ಉದ್ದೇಶ ಈಡೇರಲಿಲ್ಲ. ಆದಾಗ್ಯೂ 2011ರಲ್ಲಿ ಕಾಂಗ್ರೆಸ್ ಇದನ್ನು ದೇಶಾದ್ಯಂತ ಜಾರಿಗೆ ತರಲು ಪ್ರಯತ್ನಿಸಿತ್ತು. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನೀಡಲಾಗಿದ್ದ ಹಕ್ಕುಗಳನ್ನು ಕಿತ್ತು ಇತರರಿಗೆ ನೀಡುವ ನಾಟಕವಾಡಿದರು. ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮತ್ತು ಸಂವಿಧಾನ ಮತ್ತು ಬಿ.ಆರ್. ಅಂಬೇಡ್ಕರ್ ಬಗ್ಗೆ ಕಾಳಜಿಯಿಲ್ಲದೆ ಇದನ್ನು ಮಾಡಿದೆ’ ಎಂದು ಆರೋಪಿಸಿದರು.
Lok Sabha elections 2024: ಅಂದು ಮನಮೋಹನ್ ಸಿಂಗ್ ಹೇಳಿದ್ದೇನು..? ಈಗ ಮೋದಿ ಹೇಳಿದ್ದೇನು..?
ಕರ್ನಾಟಕದಲ್ಲಿ ಮುಸ್ಲಿಂ ಮೀಸಲು ರದ್ದು ಮಾಡಿದ್ದೆವು:
‘ದಲಿತರು ಮತ್ತು ಹಿಂದುಳಿದ ಬುಡಕಟ್ಟು ಜನಾಂಗದವರಿಗೆ ಮೀಸಲಾತಿಯನ್ನು ವಿಭಜಿಸಿ ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ಘೋಷಿಸುತ್ತದೆಯೇ?’ ಎಂದು ಸವಾಲು ಹಾಕಿದ ಅವರು, ‘ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆ ಅವಕಾಶ ಸಿಕ್ಕಾಗ ಮೊದಲು ಮಾಡಿದ್ದು ಎಸ್‌ಟಿ ಮತ್ತು ಎಸ್‌ಸಿಯಿಂದ ಕಿತ್ತುಕೊಂಡು ಸೃಷ್ಟಿಸಲಾಗಿದ್ದ ಮುಸ್ಲಿಂ ಮೀಸಲು ರದ್ದು ಮಾಡುವ ಕೆಲಸವನ್ನು’ ಎಂದರು.
ಕಾಂಗ್ರೆಸ್ ತನ್ನ ಮತಬ್ಯಾಂಕ್‌ನ ಕೆಸರೆರಚಾಟದಲ್ಲಿ ಸಿಲುಕಿಕೊಂಡಿದ್ದು, ಸಂವಿಧಾನದ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.