ಜಾತ್ಯತೀತ ಜನತಾದಳವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ನನ್ನ ಜೀವನದ ಕೊನೆಯ ಆಸೆ. ರಾಜ್ಯದ ಜನರು ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವಂತೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ನಾಗಮಂಗಲ (ಏ.18): ಜಾತ್ಯತೀತ ಜನತಾದಳವನ್ನು (JDS) ರಾಜ್ಯದಲ್ಲಿ (Karnataka) ಮತ್ತೆ ಅಧಿಕಾರಕ್ಕೆ ತರುವುದು ನನ್ನ ಜೀವನದ ಕೊನೆಯ ಆಸೆ. ರಾಜ್ಯದ ಜನರು ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವಂತೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Devegowda) ಮನವಿ ಮಾಡಿದರು. ಪಟ್ಟಣದ ಶ್ರೀಬಡಗೂಡಮ್ಮ ದೇವಸ್ಥಾನದ ಅವರಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನದ ಪ್ರಯಕ್ತ ತಾಲೂಕು ಆಡಳಿತ ಸೌಧದ ಅವರಣದಲ್ಲಿರುವ ಅಂಬೇಡ್ಕರ್ (Ambedkar) ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ನಿರ್ಮಾಣಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಪಕ್ಷದಿಂದ ಮಾತ್ರ ನೆಲ, ಜಲ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ರಾಷ್ಟ್ರೀಯ ಪಕ್ಷಗಳು ಸಮಸ್ಯೆಗಳನ್ನು ಸಮಸ್ಯೆಯಾಗಿಯೇ ಉಳಿಸುತ್ತವೆಯೇ ವಿನಃ ಪರಿಹಾರ ಸೂಚಿಸುವುದಿಲ್ಲ. ಕಾವೇರಿ ನದಿ ನೀರಿನ ಅಂತಿಮ ತೀರ್ಪನ್ನು ವಿರೋಧಿಸಿ ಸುಪ್ರೀಂಕೋರ್ಚ್ಗೆ ಜೆಡಿಎಸ್ ಸಲ್ಲಿಸಿದ ಮೇಲ್ಮನವಿಯಿಂದಾಗಿ 14 ಟಿಎಂಸಿಯಷ್ಟುನೀರು ರಾಜ್ಯಕ್ಕೆ ಹೆಚ್ಚುವರಿಯಾಗಿ ದೊರೆಯಿತು. ನೀರಿನ ವಿಷಯವಾಗಿ ನಾನು ನಡೆಸಿದ ಹೋರಾಟಕ್ಕೆ ಕಾಂಗ್ರೆಸ್-ಬಿಜೆಪಿ ಪಕ್ಷದವರು ಬೆಂಬಲ ಕೊಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಪಕ್ಷವನ್ನು ಬಲವರ್ಧನೆಗೊಳಿಸಿ: ನಾಡಿನ ನೆಲ, ಜಲ ಹಾಗೂ ನುಡಿಗಾಗಿ ಹೋರಾಟ ಮಾಡುತ್ತಿರುವ ಜೆಡಿಎಸ್ ಪಕ್ಷವನ್ನು ಬೆಳೆಸುವುದು ನಿಮ್ಮೆಲ್ಲರ ಹೊಣೆ, ಒಬ್ಬ ರೈತನ ಮಗನಾಗಿ ಹುಟ್ಟಿದ ನನಗಿರುವ ಒಂದು ಆಸೆ ಎಂದರೆ ಈ ಪಕ್ಷವನ್ನು ಬಲವಾಗಿ ಕಟ್ಟಿರಾಜ್ಯದಲ್ಲಿ ಅಧಿಕಾರಕ್ಕೆ ತರುವುದು. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರು ಶಾಸಕ ಸುರೇಶ್ಗೌಡರಿಗೆ ಹೆಚ್ಚು ಶಕ್ತಿ ತುಂಬಬೇಕು ಎಂದರು. ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಉದ್ಭವಿಸಿದ್ದ ಹಲವು ತೊಡಕುಗಳನ್ನು ನಿವಾರಿಸಿ ಶಾಸಕ ಸುರೇಶ್ಗೌಡ ನೇತೃತ್ವದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.
JDS Jaladhare: ನಮ್ಮ ಹಕ್ಕಿಗೆ ನಾವು ಹೋರಾಟ ನಡೆಸಬೇಕು: ಎಚ್.ಡಿ. ದೇವೇಗೌಡ
ಈ ಒಂದು ಮಹತ್ವದ ಕೆಲಸದಲ್ಲಿ ನನ್ನದೂ ಅಳಿಲು ಸೇವೆ ಇರಬಹುದು. ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಪಟ್ಟಣದಲ್ಲಿ ನಿರ್ಮಾಣ ಮಾಡಿ ಬಹಳ ಪುಣ್ಯದ ಕೆಲಸವನ್ನು ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಅವರ ತತ್ವ, ಆದರ್ಶವನ್ನು ತಿಳಿಯುವಂತೆ ಮಾಡಲಾಗಿದೆ ಎಂದರು. ಈ ಮಹತ್ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದ ದೇವೇಗೌಡರು ಡಾ.ಬಿ.ಆರ್.ಅಂಬೇಡ್ಕರ್ ಕೆಳವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರುಲು ಶ್ರಮಿಸಿದ ಒಬ್ಬ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದೆ: ನಾನು ನನ್ನ ಗ್ರಾಮದಲ್ಲಿ ಕಂಟ್ರಾಕ್ಟರ್ ವೃತ್ತಿ ಮಾಡುವಾಗ ಪಾಪಯ್ಯ ಎಂಬ ವ್ಯಕ್ತಿಗೆ ಬೇರೋಬ್ಬರಿಂದ ಅನ್ಯಾಯವಾಗುತ್ತಿತ್ತು, ಇದನ್ನು ನೋಡಿ 60 ವರ್ಷಗಳ ಹಿಂದೆಯೇ ನಾನು ಕೂಡ ಜಾತಿ ವ್ಯವಸ್ಥೆ ವಿರುದ್ದ ಮತ್ತು ಶ್ರೀಮಂತರಿಂದ ತುಳಿತಕ್ಕೆ ಒಳಗಾಗುವ ಬಡವರ ಪರವಾಗಿ ಹೋರಾಟ ಮಾಡಿದೆ. ಅದರ ಪರಿಣಾಮವೇ ಇಂದು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದ ಅವರು ತಮ್ಮ ಹಿಂದಿನ ಆರಂಭದ ಹೋರಾಟಗಳ ಬಗ್ಗೆ ವಿವರಿಸಿದರು. ಪ್ರಸ್ತುತ ದಿನಗಳಲ್ಲಿಯೂ ನನ್ನ ಕಿವಿಯ ಮೇಲೆ ಬಿದ್ದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತೇನೆ, ಇಳಿಯ ವಯಸ್ಸಿನಲ್ಲೂ ನಾನು ಬಿಡುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಜನರಿಗೆ ಧ್ವನಿಯಾಗಿ ತುಳಿತಕ್ಕೊಳಗಾಗಿರುವವರಿಗೆ ನ್ಯಾಯ ದೊರಕಿಸಿದ್ದೇನೆ ಎಂದು ಹೇಳಿದರು.
ರಾಜೀನಾಮೆ ಕೊಡುವುದಾಗಿ ಹೇಳಿದ್ದೆ: ಶಾಸಕ ಸುರೇಶ್ಗೌಡ ಮಾತನಾಡಿ, ಅಂದು ವಿವಾದಗಳಿಂದ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಗಿರಲಿಲ್ಲ. ಕಳೆದ ಚುನಾವಣೆ ವೇಳೆ ನನಗೆ ಅಧಿಕಾರ ನೀಡಿದ ಕೆಲವೇ ತಿಂಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ. ಕೊಟ್ಟಭರವಸೆಯಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಹಾಯದಿಂದ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ ಎಂದರು. ಇದರಿಂದಾಗಿ ಬಹುದಿನಗಳ ಕನಸು ನನಸಾಗಿದೆ. ಪ್ರತಿಮೆ ಸ್ಥಾಪನೆಯಾಗದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದೂ ಸಹ ಹೇಳಿದ್ದೆ. ಅದರಂತೆ ಪ್ರತಿಮೆ ಸ್ಥಾಪನೆ ಮಾಡಿ ಕೋವಿಡ್ ಇದ್ದ ಕಾರಣ ಕಾರ್ಯಕ್ರಮವನ್ನು ತಡವಾಗಿ ಮಾಡಲಾಗಿದೆ, ಪ್ರತಿಮೆ ಸ್ಥಾಪಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ದೇವೇಗೌಡರಿಗೆ ಬೆಳ್ಳಿ ಕಿರೀಟಧಾರಣೆ: ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ ಗೌರವಿಸಲಾಯಿತು. ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಮುಖಂಡರು ಪದಾಧಿಕಾರಿಗಳನ್ನು ಗೌರವಿಸಲಾಯಿತು. ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಜಿ.ಪಂ.ಮಾಜಿ ಸದಸ್ಯರಾದ ಶಿವಪ್ರಕಾಶ್, ಮುತ್ತಣ್ಣ, ಪುರಸಭೆ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಜಾಫರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಸದಸ್ಯ ವರದರಾಜು, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಪರಿಶಿಷ್ಟಜಾತಿ ಮತ್ತು ಪಂಗಡದ ಯುವ ಅಧ್ಯಕ್ಷ ಲೋಹಿತ್, ರಾಜ್ಯ ದಸಂಸ ಸಂಚಾಲಕ ವೆಂಕಟಗಿರಿಯಯ್ಯ, ದಲಿತ ಮುಖಂಡರಾದ ಮುಳಕಟ್ಟೆಶಿವರಾಮಯ್ಯ, ಸೋಮಶೇಖರ್, ಅನ್ನದಾನಿ, ಕಂಚಿನಕೋಟೆ ಮೂರ್ತಿ, ಮಂಜುನಾಥ್, ನಾಗೇಶ್, ಕೋಟಿ ರವಿ, ರಮೇಶ್ ಸೇರಿದಂತೆ ಹಲವರಿದ್ದರು.
Karnataka Politics: ಕಾಂಗ್ರೆಸಿಗರು ಮೇಕೆದಾಟು ವಿರೋಧಿಸಿದ್ರು: ದೇವೇಗೌಡ
ಪುಷ್ಪಾರ್ಚನೆ ಮಾಡಿ ಗೌರವ: ಪಟ್ಟಣದ ಆಡಳಿತ ಸೌಧದ ಅವರಣದಲ್ಲಿ ಪ್ರತಿಷ್ಠಾಪಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾನುವಾರ ಮಧ್ಯಾಹ್ನ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದ ಮಾಜಿ ಪ್ರಧಾನಿಗಳು ಕಾರಿನಲ್ಲಿ ಆಡಳಿತ ಸೌಧಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ವೇಳೆ ಪ್ರತಿಮೆಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಪುಷ್ಪಾರ್ಚನೆ ಮಾಡಲಾಯಿತು. ವಿವಿಧ ಬಗೆಯ ಹೂಗಳಿಂದ ಪ್ರತಿಮೆ ಸುತ್ತ ಅಲಂಕಾರ ಮಾಡಲಾಗಿತ್ತು. ಶಾಸಕ ಸುರೇಶ್ಗೌಡ ಸೇರಿದಂತೆ ಹಲವರು ಜೊತೆಯಲ್ಲಿದ್ದರು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.