ಕಲಬುರಗಿ (ಆ.12): ನಾನು ರಾಜ್ಯ ಭಾಜಪದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಹುದ್ದೆಯನ್ನ ಹುಡುಕಿಕೊಂಡು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿಂದು ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ನಾನು ಹುದ್ದೆಯನ್ನ ಹುಡುಕಿಕೊಂಡು ಹೋಗುವುದಿಲ್ಲ. ನನ್ನ ತಂದೆ ಯಡಿಯೂರಪ್ಪನವರು ರಾಜ್ಯದಲ್ಲಿ ಸೈಕಲ್ ಮೇಲೆ ಓಡಾಡಿ ಪಕ್ಷ ಕಟ್ಟಿದ್ದಾರೆ. ರಾಜ್ಯದ ಜನ ಅವರ ಹೋರಾಟ ಗುರುತಿಸಿ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ ಎಂದರು.
ಪಕ್ಷದ ವರಿಷ್ಟರು ಯಾವುದೇ ಸ್ಥಾನಮಾನ ಕೊಟ್ಟರು ಅದನ್ನ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಸಿಎಂ ಬೊಮ್ಮಾಯಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಹೋಗುತ್ತಾರೆ. ಆನಂದ್ ಸಿಂಗ್ ಸೇರಿದಂತೆ 17 ಜನ ಕಾಂಗ್ರೆಸ್ ಜೆಡಿಎಸ್ ತ್ಯಜಿಸಿ ಬಂದಿದ್ದಾರೆ. ಅವರ ಬಗ್ಗೆ ಸರ್ಕಾರಕ್ಕೆ ಹಾಗೂ ಯಡಿಯೂರಪ್ಪರಿಗೆ ಗೌರವವಿದೆ. ಅವರನ್ನ ಗೌರವಯುತವಾಗಿ ನಡೆಸಿಕೊಂಡು ಹೋಗಲಾಗುವುದು ಎಂದರು.
ವಿಜಯೇಂದ್ರ VS ಸಿದ್ದರಾಮಯ್ಯ: ಮಹಾ ಸಂಗ್ರಾಮಕ್ಕೆ ಸಾಕ್ಷಿಯಾಗುತ್ತಾ ವರುಣಾ.?
ನಾನು ಸಚಿವ ಸ್ಥಾನ ಅಥಾವ ಡಿಸಿಎಂ ಹುದ್ದೆಗೆ ಆಕಾಂಕ್ಷಿಯಾಗಿರಲಿಲ್ಲ. ಪ್ರಾಮಾಣಿಕವಾಗಿ ಹೇಳುತ್ತೇನೆ, ನಮ್ಮ ತಂದೆ ನನ್ನ ಸಲುವಾಗಿ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ನನಗಿನ್ನು 35 ವರ್ಷ ವಯಸ್ಸು ಆಗಿದೆ, ನಾನು ಸಾಕಷ್ಟು ಬೆಳೆಯಬೇಕಾಗಿದೆ. ಪಕ್ಷವನ್ನ ತಳಮಟ್ಟದಿಂದ ಬೆಳೆಸಬೇಕಾಗಿದೆ ಎಂದರು.
ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ: ನಿನ್ನೆಯಷ್ಟೆ ಬಿಬಿಎಂಪಿ, ಗುಲ್ಬರ್ಗಾ ಮಹಾನಗರ ಪಾಲಿಕೆ, ಹುಬ್ಬಳ್ಳಿ-ಧಾರವಾಡ ಚುನಾವಣೆ ಘೋಷಣೆಯಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿ ಸೂಕ್ತ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಎಲ್ಲೆಡೆ ಕಮಲ ಅರಳಿಸಲಾಗುವುದು. ಈ ಚುನಾವಣೆ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಬರುವಂತಹ ಸಿಂದಗಿ, ಹಾನಗಲ್ ಉಪಚುನಾಣೆಯಲ್ಲಿ ಭಾಜಪ ಯಶಸ್ವಿಯಾಗುತ್ತದೆ ಎಂದು ವಿಜಯೇಂದ್ರ ಹೇಳಿದರು.