ಗಂಗಾವತಿಯಲ್ಲೇ ನನ್ನ ಸ್ಪರ್ಧೆ, ರೆಡ್ಡಿ ಕಣಕ್ಕಿಳಿದರೆ ಭಯವಿಲ್ಲ: ಶಾಸಕ ಪರಣ್ಣ

By Govindaraj SFirst Published Dec 12, 2022, 11:47 AM IST
Highlights

ನಾನು ಗಂಗಾವತಿ ಕ್ಷೇತ್ರದ ಆಕಾಂಕ್ಷಿ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿರುವುದಕ್ಕೂ ಚುನಾವಣೆಗೂ ಸಂಬಂಧ ಕಲ್ಪಿಸುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. 

ಹುಬ್ಬಳ್ಳಿ (ಡಿ.12): ನಾನು ಗಂಗಾವತಿ ಕ್ಷೇತ್ರದ ಆಕಾಂಕ್ಷಿ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿರುವುದಕ್ಕೂ ಚುನಾವಣೆಗೂ ಸಂಬಂಧ ಕಲ್ಪಿಸುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದರಿಂದ ನನಗೆ ಯಾವುದೇ ಭಯವಿಲ್ಲ ಎಂದರು.

ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿರುವುದು ಹಾಗೂ ಈ ಬಾರಿ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳಿಂದ ವಿಚಲಿತಗೊಂಡಿರುವ ಮುನವಳ್ಳಿ ಅವರು ಜೋಶಿ ಅವರನ್ನು ಭೇಟಿಯಾಗಿದ್ದಾರೆನ್ನಲಾಗಿದ್ದು, ಆದರೆ ಇದು ಸಹಜ ಭೇಟಿ ಎಂದು ಶಾಸಕ ಹೇಳಿಕೊಂಡಿದ್ದಾರೆ. ಇದೇ ವೇಳೆ ಗುರುಮಿಠಕಲ್‌ ಟಿಕೆಟ್‌ ಆಕಾಂಕ್ಷಿ ನಾಗರತ್ನಾ ಕುಪ್ಪಿ ಹಾಗೂ ಬಸವಕಲ್ಯಾಣ ಟಿಕೆಟ್‌ ಆಕಾಂಕ್ಷಿ ಪ್ರದೀಪ್‌ ವಾತಡೆ ಕೂಡ ಜೋಶಿ ಜತೆ ಚರ್ಚಿಸಿದರು.

ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್‌ ಕುಮಾ​ರ​ಸ್ವಾ​ಮಿ

ರೆಡ್ಡಿ ಠಿಕಾಣಿ, ರಾಜಕೀಯದಲ್ಲಿ ತಳಮಳ: ಜಿಲ್ಲೆಯ ವಾಣಿಜ್ಯ ನಗರಿ ಎಂದೇ ಖ್ಯಾತಿಯಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗೇರಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿಯೇ ಠಿಕಾಣಿ ಹೂಡಲು ಮುಂದಾಗಿದ್ದರಿಂದ ರಾಜಕೀಯ ಅಲ್ಲೋಲಕಲ್ಲೋಲ ಶುರುವಾಗಿದೆ. ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿಯೂ ನಾನಾ ರಾಜಕೀಯ ಮಜಲುಗಳು ಪ್ರಾರಂಭವಾಗಿದ್ದು, ತೆರೆಮರೆಯಲ್ಲಿ ಭಾರಿ ಬೆಳವಣಿಗೆಯಾಗುತ್ತಿವೆ. ಜನಾರ್ದನ ರೆಡ್ಡಿ ಅವರು ಗಂಗಾವತಿಯಿಂದಲೇ ಸ್ಪರ್ಧೆ ಮಾಡುತ್ತಾರೆ. ಅದರಲ್ಲೂ ಬಿಜೆಪಿ ಟಿಕೆಟ್‌ ಕೇಳಿದ್ದಾರೆ ಎನ್ನುವುದು ಆ ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿದೆ. 

ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ ಮಾಡಿದರೂ ಪಕ್ಷೇತರರಾಗಿ ಅಖಾಡಕ್ಕೆ ಇಳಿಯುತ್ತಾರೆ ಎನ್ನುವುದು ಇತರ ಪಕ್ಷಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಜನಾರ್ದನ ರೆಡ್ಡಿ ಇದುವರೆಗೂ ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಮನೆ ಖರೀದಿ ಮಾಡಿರುವ ಅವರು ಡಿ. 18ರ ವರೆಗೂ ಏನು ಹೇಳುವುದಿಲ್ಲ ಎಂದಿದ್ದಾರೆ. ಆದರೂ ಅವರ ನಡೆ ಕುರಿತು ರಾಜಕೀಯ ಪಡಸಾಲೆಯಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಟಿಕೆಟ್‌ ಆತಂಕ ಶುರುವಾಗಿದ್ದು, ಅದಕ್ಕಾಗಿಯೇ ಅವರು ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ, ತಮ್ಮ ಟಿಕೆಟ್‌ ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ. 

ಆನೆ ದಾಳಿಯಿಂದ ಹಾನಿ, ಪರಿಹಾರ ಮೊತ್ತ ಡಬಲ್‌: ಸಿಎಂ ಸಭೆ ತೀರ್ಮಾನ

ಆದರೆ, ಶಾಸಕ ಪರಣ್ಣ ಮುನವಳ್ಳಿ ಅವರು ನಾನು ದೆಹಲಿಗೂ ಹೋಗಿಲ್ಲ, ಯಾವ ನಾಯಕರನ್ನು ಭೇಟಿಯಾಗಿಲ್ಲ, ಬೆಂಗಳೂರಿಗೆ ಹೋಗಿ ಬಂದಿದ್ದೇನೆ ಎಂದಿದ್ದಾರೆ. ನಾನು ಹಾಲಿ ಶಾಸಕನಿದ್ದೇನೆ, ಪಕ್ಷದಲ್ಲಿ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಯಾರೋ ಬಂದಿದ್ದಾರೆ ಎಂದರೆ ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಾರೆ. ರೆಡ್ಡಿ ಅವರು ಗಂಗಾವತಿಯಲ್ಲಿ ಒಂದೆರಡು ದಿನ ನಾನಾ ನಾಯಕರ ಮನೆಗೆ ಹೋಗಿರುವುದರಿಂದ ಬಿಜೆಪಿ ನಾಯಕರಲ್ಲಿಯೂ ಢವ ಢವ ಶುರುವಾಗಿದೆ. ಇದರಿಂದ ಬಿಜೆಪಿಯಲ್ಲಿ ನಾಲ್ಕಾರು ಗುಂಪುಗಳಾಗಿದ್ದು, ಕೆಲವರು ಜನಾರ್ದನ ರೆಡ್ಡಿ ಅವರ ಪರವಾಗಿ, ಇನ್ನು ಕೆಲವರು ಅವರ ವಿರೋಧಿ ಗುಂಪು ಕಟ್ಟಿಕೊಳ್ಳುತ್ತಿರುವುದರಿಂದ ಬಿಜೆಪಿಯಲ್ಲಿ ಒಳಬೇಗುದಿ ಪ್ರಾರಂಭವಾಗಿದೆ.

click me!