ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ. ಇತ್ತ ರಾಜ್ಯದಲ್ಲಿಯೂ ಜೆಡಿಎಸ್ ಗ್ರಾಫ್ ಏರುತ್ತಿದ್ದು, 123 ಸ್ಥಾನ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ.12): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ. ಇತ್ತ ರಾಜ್ಯದಲ್ಲಿಯೂ ಜೆಡಿಎಸ್ ಗ್ರಾಫ್ ಏರುತ್ತಿದ್ದು, 123 ಸ್ಥಾನ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಪಿ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್, ಬಿಜೆಪಿ ಪ್ರಮುಖ ನಾಯಕರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಬಳಿಕ ಮಾತನಾಡಿದ ಅವರು, ‘ಚಾಮರಾಜಪೇಟೆ ಹಿಂದೆ ಯಾವ ತರ ಇತ್ತು, ಬಳಿಕ ದೇವೆಗೌಡರು ಶ್ರಮ ಹಾಕಿ ಎಷ್ಟುಅಭಿವೃದ್ಧಿ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ. ಚಾಮರಾಜಪೇಟೆ ಕ್ಷೇತ್ರಕ್ಕೆ ಒಂದು ಇತಿಹಾಸವಿದ್ದು, ಅಲ್ಲಿಯೇ ಮತ್ತೊಮ್ಮೆ ಜೆಡಿಎಸ್ ಗೆಲ್ಲಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆಯು ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಕಾಂಗ್ರೆಸ್, ಬಿಜೆಪಿ ಏನೇ ಮಾಡಿದರೂ ಚುನಾವಣೆಯಲ್ಲಿ ನಾವು ಗೆಲ್ಲುವುದು ಹಾಗೂ 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ’ ಎಂದರು.
Pancharatna Rathayatra: ಶಿರಾದಲ್ಲಿ ಕೊತ್ತಂಬರಿ ಸೊಪ್ಪು ಹಾರ ಹಾಕಿ ಎಚ್‌ಡಿಕೆಗೆ ಸ್ವಾಗತ
ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಯಾವ ತಂತ್ರ ಮಾಡುತ್ತಿವೆ ಎಂಬುದನ್ನು ಟಿ.ವಿ.ಗಳಲ್ಲಿ ಕಳೆದ ಎರಡು-ಮೂರು ದಿನಗಳಿಂದ ತೋರಿಸುತ್ತಲೇ ಇದ್ದಾರೆ. ಆದರೆ, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಇದೆ ಎನ್ನುವುದನ್ನೇ ಅವರು ಮರೆತಿದ್ದಾರೆ. ಈ ಬಗ್ಗೆ ನನಗೆ ಬೇಸರ ಇಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಬೆಳವಣಿಗೆ ಗ್ರಾಫ್ ಮೇಲೆ ಏರುತ್ತಿದೆ. ಇದು ಪಂಚರತ್ನ ಯಾತ್ರೆ ಕಾರ್ಯಕ್ರಮದ ಮೂಲಕ ಗೊತ್ತಾಗಿದೆ. ಇನ್ನು ಕೆಟ್ಟಆಡಳಿತದಿಂದ ಬೆಂಗಳೂರಿನಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂಬುದು ಜನರಿಗೆ ಅರಿವಾಗಿದೆ. ಇಂದು ಬಿಜೆಪಿ, ಕಾಂಗ್ರೆಸ್ ಆಂತರಿಕ ಸಮೀಕ್ಷೆ ನಡೆಸುತ್ತಿವೆ. ಎರಡು ತಿಂಗಳಿಗೆ ಒಂದೊಂದು ಕಾರ್ಯತಂತ್ರ ಮಾಡುತ್ತಿವೆ. ಬಿಜೆಪಿಯ ಆಂತರಿಕ ಸಮೀಕ್ಷೆ ಪ್ರಕಾರ ಜೆಡಿಎಸ್ 55 ಸ್ಥಾನ ಗೆಲ್ಲಲಿದೆ ಎಂಬ ವರದಿ ಬಂದಿದೆ. ಜೆಡಿಎಸ್ ಬರೀ 55 ಅಲ್ಲ, 123 ಸ್ಥಾನ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಶಿಕಾರಿಪುರದ ಮಾಜಿ ಶಾಸಕರು, ಅಥಣಿ ಮಾಜಿ ಶಾಸಕರು ಪಕ್ಷಕ್ಕೆ ಸೇರುತ್ತಿದ್ದಾರೆ. ನಮ್ಮ ಎಲ್ಲ ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ ನೀಡುತ್ತೇವೆ. ನಾವು ಬೆಳೆಯಬೇಕಾದರೆ ಗೊಬ್ಬರ ಹಾಕಬೇಕು. ಹೆಚ್ಚುವರಿ ಗೊಬ್ಬರ ಬೇಕಾದರೆ ತರಬೇಕಾಗುತ್ತದೆ. ನಮ್ಮ ಗುರಿ 123 ಕ್ಷೇತ್ರದಲ್ಲಿ ಗೆದ್ದು, ವಿಧಾನಸೌಧಲ್ಲಿ ಜೆಡಿಎಸ್ ಅಧಿಕಾರಕ್ಕೇರಬೇಕು. ದೇವೇಗೌಡರು ಆ ಕಾರ್ಯಕ್ರಮ ನೋಡಬೇಕು. ನಾವು ಅಧಿಕಾರಕ್ಕೆ ಬಂದ ಮೇಲೆ ಕೆಂಪೇಗೌಡ ಪ್ರತಿಮೆಯನ್ನು ವಿಧಾನಸೌಧದಲ್ಲಿ ಸ್ಥಾಪನೆ ಮಾಡುತ್ತೇವೆ ಎಂದು ಘೋಷಿಸಿದರು.
ಪೊಲೀಸ್ ಬಿಟ್ಟು ಹೆದರಿಸಿದರೆ ನನ್ನ ಗಮನಕ್ಕೆ ತನ್ನಿ: ಹಣ ಹಂಚುವುದು ದೊಡ್ಡದಲ್ಲ. ಆದರೆ, ಆ ಹಣ ಹೇಗೆ ಸಂಗ್ರಹ ಆಗಿದೆ ಅದನ್ನು ಗಮನಿಸಬೇಕು. ಪಾಪದ ಕೊಡ ತುಂಬಿದಾಗ ಶಕ್ತಿ ಕುಂದುವುದಕ್ಕೆ ದೇವರ ಕೃಪೆ ಬೇಕು. ಆ ಪಶ್ಚಾತ್ತಾಪ ಪಡುವುದಕ್ಕೆ ಸಮಯ ಬೇಕು. ಅವರನ್ನು ಎದುರಿಸೋಕೆ ನಿಮ್ಮ ಶಕ್ತಿ ಸಾಕು. ನಿಮಗೆ ಪೊಲೀಸ್ ಬಿಟ್ಟು ಹೆದರಿಸಿದರೆ ನನ್ನ ಗಮನಕ್ಕೆ ತನ್ನಿ, ನಾನು ನೋಡಿಕೊಳ್ಳುತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಸ್ಥಳೀಯ ಶಾಸಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ: ಎಚ್.ಡಿ.ಕುಮಾರಸ್ವಾಮಿ
ಕೊಲೆ ಕೇಸಲ್ಲಿ ಜೈಲು ಸೇರಿದ್ದ ದಂಪತಿ ಜೆಡಿಎಸ್ ಸೇರ್ಪಡೆ: ಚಾಮರಾಜಪೇಟೆಯಲ್ಲಿ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಜಾದ್ ನಗರ ವಾರ್ಡ್‌ನ ಮಾಜಿ ಕಾರ್ಪೋರೆಟರ್ ಗೌರಮ್ಮ ಮತ್ತು ಪತಿ ಗೋವಿಂದರಾಜು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಗೋವಿಂದರಾಜು ಮತ್ತು ಗೌರಮ್ಮ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದರು. ಗೋವಿಂದರಾಜು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಮೀರ್ ವಿರುದ್ಧ ಸ್ಪರ್ಧೆಗೆ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.