ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ರಾಷ್ಟ್ರೀಯ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅಸಾಂವಿಧಾನಿಕ, ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಭಾಗ ಎಂದು ಆರೋಪಿರುವ ಬಿಜೆಪಿ ಮುಖಂಡರು, ಇದು ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಕಿಡಿಕಾರಿದ್ದಾರೆ.
ನವದೆಹಲಿ (ಮಾ.16): ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ರಾಷ್ಟ್ರೀಯ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅಸಾಂವಿಧಾನಿಕ, ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಭಾಗ ಎಂದು ಆರೋಪಿರುವ ಬಿಜೆಪಿ ಮುಖಂಡರು, ಇದು ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಕಿಡಿಕಾರಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್, ‘ಕಾಂಗ್ರೆಸ್ ಪಕ್ಷವು ಸ್ಪರ್ಧಾತ್ಮಕ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ. ಇದು ದೇಶದ ಪಾಲಿಗೆ ಅಪಾಯಕಾರಿ.
ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ನಿರ್ಧಾರದ ಹಿಂದೆ ರಾಹುಲ್ ಗಾಂಧಿ ಇದ್ದಾರೆ. ಯಾಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂಥ ನಿರ್ಧಾರ ತೆಗೆದುಕೊಳ್ಳಲು ರಾಜಕೀಯ ಬಂಡವಾಳ ಇಲ್ಲ’ ಎಂದು ಆರೋಪಿಸಿದರು. ‘ಕರ್ನಾಟಕ ಸರ್ಕಾರದ ಈ ಕ್ರಮ ಕೋಮುವಾದಿ ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕೆ ಹೊಸ ದಿಕ್ಕು ತೋರಿದೆ. ಇಂಥ ನಿರ್ಧಾರ ಸಣ್ಣ ಬೆಳವಣಿಗೆಯಾಗಿ ಕಾಣಬಹುದು. ಆದರೆ, ಇದು ರಾಷ್ಟ್ರದ ಮೇಲೆ ಗಂಭೀರ ಪರಿಣಾಮ ಬೀರಬಹುದು’ ಎಂದು ಎಚ್ಚರಿಸಿದರು.
‘ಮುಂದೆ ಸಿನಿಮಾ ಅಥವಾ ರೈಲು ಟಿಕೆಟ್ ತೆಗೆದುಕೊಳ್ಳಲೂ ಮುಸ್ಲಿಮರಿಗೆ ಪ್ರತ್ಯೇಕ ಸರದಿಯ ನಿಯಮ ಜಾರಿ ಮಾಡುತ್ತಾರೆಯೇ?’ ಎಂದು ಪ್ರಶ್ನಿಸಿರುವ ಅವರು, ಸ್ವಾತಂತ್ರ್ಯಾ ಚಳವಳಿ ವೇಳೆ ಮುಸ್ಲಿಮರಿಗೆ ಪ್ರತ್ಯೇಕ ಮತದಾನ, ವಿಶೇಷ ಸ್ಥಾನಮಾನದಂಥ ಕ್ರಮಗಳು ದೇಶವಿಭಜನೆಗೆ ಕಾರಣವಾಯಿತು. ಸುಪ್ರೀಂ ಕೋರ್ಟ್ ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ಸ್ಪಷ್ಟವಾಗಿ ವಿರೋಧಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಡೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ವಿಶ್ವಾಸ ಇದೆ ಎಂದು ಹೇಳಿದರು.
ನಿಮ್ಮದು ನಾಲಿಗೆನೋ ಎಕ್ಕಡನೋ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ
ರಾಹುಲ್‌ಗೂ ಚಾಟಿ: ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಅರ್ಥ ಮಾಡಿಕೊಂಡಿದ್ದಾರೆಯೇ? ಕಾಂಗ್ರೆಸ್ ಅಧಿಕಾರದಲ್ಲಿರುವ ಇತರೆ ರಾಜ್ಯಗಳು ಕರ್ನಾಟಕದ ಮಾದರಿಯನ್ನೇ ಪಾಲಿಸುತ್ತವೆಯೇ? ಬಿಜೆಪಿಯಂತೂ ಇದಕ್ಕೆ ಖಂಡಿತ ವಿರೋಧ ಮಾಡಲಿದೆ ಎಂದರು. ರಾಜ್ಯದಲ್ಲಿ 2 ಕೋಟಿ ರು.ವರೆಗಿನ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಚಿವ ಸಂಪುಟ ಗುರುವಾರ ನಿರ್ಧಾರ ತೆಗೆದುಕೊಂಡಿತ್ತು.