
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.16): ಬಿಜೆಪಿ ಟಿಕೆಟ್ ಸಿಕ್ಕ ಬಳಿಕ ಚುನಾವಣಾ ರಣರಂಗಕ್ಕೆ ಇಳಿಯುವ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ದತ್ತಪೀಠಕ್ಕೆ ತೆರಳಿ ದತ್ತ ಪೀಠದಲ್ಲಿ ಹೋಮ ನಡೆಸಿ ದತ್ತ ಪಾದಕ್ಕೆ ದರ್ಶನ ಮಾಡಿದ್ದಾರೆ. ಇಂದು ಬಿಜೆಪಿ ಕಾರ್ಯಕರ್ತರ ಜೊತೆ ದತ್ತಪೀಠಕ್ಕೆ ತೆರಳಿತ ದೀಪಂ ದೊಡ್ಡಯ್ಯ ದತ್ತ ಪಾದಕ್ಕೆ ದರ್ಶನ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬೇಡಿಕೊಂಡಿದ್ದಾರೆ.
ಗೆದ್ದ ಬಳಿಕ ನನ್ನ ಮೊದಲ ಪೂಜೆ ಕೂಡ ದತ್ತಪೀಠದಲ್ಲಿ: ಚುನಾವಣೆಯಲ್ಲಿ ಗೆದ್ದ ಬಳಿಕ ನನ್ನ ಮೊದಲ ಪೂಜೆ ಕೂಡ ದತ್ತಪೀಠದ ದತ್ತಾತ್ರೇಯ ಸ್ವಾಮಿಗೆ ಎಂದು ಹೇಳಿದ್ದಾರೆ. ಮೂರು ದಶಕಗಳ ಹೋರಾಟದ ಫಲವಾಗಿ ಇಂದು ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಿದೆ. ದತ್ತಪೀಠದ ಅಭಿವೃದ್ಧಿಗೆ ನಾನು ಸದಾ ಸಿದ್ದ ಎಂದಿದ್ದಾರೆ. ಮೀಸಲು ಕ್ಷೇತ್ರವಾಗಿರುವ ಮೂಡಿಗೆರೆ ತಾಲೂಕಿನಲ್ಲಿ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಐದು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರು ಬಾರಿ ಗೆಲುವು ಸಾಧಿಸಿದ್ದರು.
ಕೊಟ್ಟಮಾತಿನಂತೆ ನಡೆದುಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ: ಸಚಿವ ಬಿ.ಸಿ.ಪಾಟೀಲ್
ಈ ಬಾರಿ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರಿಂದ ಅಚ್ಚರಿ ಎಂಬಂತೆ ಬಿಜೆಪಿ ಹೈಕಮಾಂಡ್ ದೀಪಕ್ ದೊಡ್ಡದಾಗಿ ಮಣೆ ಹಾಕಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ವಿಜಯ್ ಕುಮಾರ್, ನರೇಂದ್ರ, ವಿಭಾಸುಷ್ಮಾ, ಚೈತ್ರಶ್ರೀ ಮಾಲತೇಶ್ ಹಾಗೂ ಸುಜಿತ್ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿದ್ದ ಆರ್.ಎಸ್.ಎಸ್. ಕಟ್ಟಾಳು ನರೇಂದ್ರ ಅವರು ಬಿಜೆಪಿ ಸೇರುತ್ತಿದ್ದಂತೆ ಅವರಿಗೆ ಟಿಕೆಟ್ ಎಂಬ ಮಾತುಗಳು ಬಲವಾಗಿದ್ದವು. ಆದರೆ, ಕೊನೆ ಕ್ಷಣದಲ್ಲಿ ಅಚ್ಚರಿ ಎಂಬಂತೆ ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿದೆ.
ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಕುಮಾರಸ್ವಾಮಿ ಕೂಡ ಸಜ್ಜು: ಬಿಜೆಪಿ ಟಿಕೆಟ್ ವಂಚಿತ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಜೆಡಿಎಸ್ ಸೇರಿದ್ದು ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಾಗಿದ್ದು, ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಕುಮಾರಸ್ವಾಮಿ ಕೂಡ ಸಜ್ಜಾಗಿದ್ದಾರೆ. ಆದರೆ, ಮೂರು ಬಾರಿ ಗೆದ್ದು ತನ್ನದೇ ಅಭಿಮಾನಿ ಬಳಗವನ್ನ ಸೃಷ್ಠಿಸಿಕೊಂಡಿರೋ ಜೆಡಿಎಸ್ ಸೇರಿರೋ ಕುಮಾರಸ್ವಾಮಿ ಬಿಜೆಪಿಗೆ ಮುಳ್ಳಾಗುತ್ತಾರೆಂಬ ಮಾತುಗಳಿವೆ.
ಹೊಸ ಮತದಾರರ ಒಲವು ಬಿಜೆಪಿಯತ್ತ: ಸಚಿವ ಸಿ.ಸಿ.ಪಾಟೀಲ್
ಆದರೆ, ಎಲ್ಲವನ್ನೂ ಎದುರಿಸಿ ದೀಪಕ್ ದೊಡ್ಡಯ್ಯ ಹೇಗೆ ಬಿಜೆಪಿ ಕಾರ್ಯಕರ್ತರನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗುತ್ತಾರೆ ಅನ್ನೋದು ಮೂಡಿಗೆರೆ ಮಟ್ಟಿಗೆ ಯಕ್ಷ ಪ್ರಶ್ನೆಯಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.