ಚುನಾವಣೆ ಹತ್ತಿರವಾಗುತ್ತಿದ್ದಂತೇ ರಾಜಕೀಯ ಪಕ್ಷಗಳ ರಾಜ್ಯ ಮುಖಂಡರು ಅಭ್ಯರ್ಥಿಗಳ ಕ್ಷೇತ್ರಗಳಿಗೆ ಭೇಟಿ ನೀಡಿ ಭರ್ಜರಿ ಪ್ರಚಾರ ನಡೆಸಲು ಪ್ರಾರಂಭಿಸಿದ್ದಾರೆ. ಮೊನ್ನೆಯಷ್ಟೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಸಿದ್ಧರಾಮಯ್ಯ ಹಳಿಯಾಳಕ್ಕೆ ಭೇಟಿ ನೀಡಿ ಹಳಿಯಾಳ ಅಭ್ಯರ್ಥಿ ಆರ್.ವಿ.ದೇಶ್‌ಪಾಂಡೆ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಹಳಿಯಾಳ (ಏ.15): ಚುನಾವಣೆ ಹತ್ತಿರವಾಗುತ್ತಿದ್ದಂತೇ ರಾಜಕೀಯ ಪಕ್ಷಗಳ ರಾಜ್ಯ ಮುಖಂಡರು ಅಭ್ಯರ್ಥಿಗಳ ಕ್ಷೇತ್ರಗಳಿಗೆ ಭೇಟಿ ನೀಡಿ ಭರ್ಜರಿ ಪ್ರಚಾರ ನಡೆಸಲು ಪ್ರಾರಂಭಿಸಿದ್ದಾರೆ. ಮೊನ್ನೆಯಷ್ಟೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಸಿದ್ಧರಾಮಯ್ಯ ಹಳಿಯಾಳಕ್ಕೆ ಭೇಟಿ ನೀಡಿ ಹಳಿಯಾಳ ಅಭ್ಯರ್ಥಿ ಆರ್.ವಿ.ದೇಶ್‌ಪಾಂಡೆ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಲ್ಲದೇ, ಬಿಜೆಪಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು, ಮೊನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊಯಿಡಾ, ದಾಂಡೇಲಿ, ಶಿರಸಿ, ಕುಮಟಾ ಭೇಟಿ ನೀಡಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
undefined
ಇದರ ಬೆನ್ನಲ್ಲೇ ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಹಳಿಯಾಳಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶ್‌ಪಾಂಡೆ ಪರ ಪ್ರಚಾರ ನಡೆಸಿದ್ದಾರೆ. ಹಳಿಯಾಳ ಸಿವಿಎಲ್ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಹೆಲಿಕಾಪ್ಟರ್‌ನಲ್ಲಿಳಿದ ಮಾಜಿ ಸಿಎಂ ಸಿದ್ಧರಾಮಯ್ಯ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯಂತಹ ಒಂದು ಕೆಟ್ಟ ಸರಕಾರ, ನಮ್ಮ ಜೀವನದಲ್ಲಿ ಇಂತಹ ಸರಕಾರ ನೋಡಿಲ್ಲ. ಲೂಟಿ ಮಾಡುವ, ಲಂಚ ಪಡೆಯುವ ಇಂತಹ ಸರಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ.
ಹೊಸ ಮತದಾರರ ಒಲವು ಬಿಜೆಪಿಯತ್ತ: ಸಚಿವ ಸಿ.ಸಿ.ಪಾಟೀಲ್
ಬಿಜೆಪಿ ಸರಕಾರ ಒಂದೇ ಒಂದು ಮನೆ ಮಂಜೂರು ಮಾಡಿದಿದ್ರೆ ನನ್ನ ರಾಜಕೀಯ ಜೀವನಕ್ಕೆ ನಿವೃತ್ತಿ ನೀಡ್ತೇನೆ. ನಾವು ಕೊಟ್ಟಂತಹ ಮನೆಗಳಿಗೆ ಬಿಲ್ ಕೊಡೋಕೋ ಯೋಗ್ಯತೆ ಇವರಿಗಿಲ್ಲ. 7ಕೆ.ಜಿ. ಅಕ್ಕಿಯನ್ನು 5 ಕೆ.ಜಿ. ಇಳಿಸಿದಾಗ ಯಡಿಯೂರಪ್ಪರನ್ನು ಕೇಳಿದ್ದೆ. ಆಗ ಅವರು ನಮ್ಮಲ್ಲಿ ಹಣವಿಲ್ಲ ಎಂದು ಯಡಿಯೂರಪ್ಪ ಹೇಳಿದ್ರು. ಲಂಚ ಹೊಡೆಯುವುದು ಕಡಿಮೆ ಮಾಡಿ ಯಡಿಯೂರಪ್ಪ ಆಗ ಬಡವರಿಗೆ ಅಕ್ಕಿ ನೀಡಲಾಗ್ತದೆ ಅಂದಿದ್ದೆ. 100ರೂ. ಗೂ 40 % ಪರ್ಸಂಟೇಜ್ ತಿಂತಾರೆ ಬಿಜೆಪಿಯವರು.ಇವರ ಮನೆ ಹಾಳಾಗ, ಈ ತರಹ ಲೂಟಿ ಹೊಡ್ಕೊಂಡು ಕೂತಿದಾರಲ್ಲಾ. ಇವರು ಬಂದ್ರೆ ರಾಜ್ಯ ಉಳಿಯುತ್ತಾ..?
ಇದಕ್ಕೋಸ್ಕರ ನಾನು ಹಾಗೂ ದೇಶ್‌ಪಾಂಡೆ ಚುನಾವಣೆಗೆ ನಿಂತದ್ದು ಎಂದು ಹೇಳಿದ್ದರು. ಬಿಜೆಪಿ ಸರಕಾರ ತೆಗೆದು ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಬರಬೇಕಿದೆ. ಯಡಿಯೂರಪ್ಪ ನಿಮಗೆ ಆಗದಿದ್ರೆ ಖುರ್ಚಿ ಬಿಟ್ಟು ಕೊಡಿ ನಾವು ಕೂತ್ಕೋತೇವೆ ಅಂದಿದ್ದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಒಬ್ಬರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡ್ತೇವೆ. ಬಿಜೆಪಿಯವರು ಹೇಳುವುದು ಸುಳ್ಳು, ಅವರು ಸುಳ್ಳನ್ನೇ ಉತ್ಪಾದಿಸ್ತಾರೆ. ನನ್ನ ಅಧಿಕಾರವಧಿಯಲ್ಲಿ ಪ್ರಾರಂಭಿಸಿದ್ದ ಯೋಜನೆಗಳನ್ನು ನಿಲ್ಲಿಸಿದ್ರು. ಯಾಕ್ರೀ ನಿಮ್ಮ ಅಪ್ಪನ ಮನೆಯಿಂದ ಕೊಡ್ತಿದ್ದೀರಾ ದುಡ್ಡು..? ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಕಾಂಟ್ರಾಕ್ಟರ್ ಎಲ್‌ಒಸಿ ತೆಗೆಯಲು ಒಂದು ಪೈಸೆ ನೀಡಿದಿದ್ರೆ ನಾನು ರಾಜಕೀಯ ಜೀವನಕ್ಕೆ ನಿವೃತ್ತಿ ನೀಡ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ರು.
ಸಿದ್ಧರಾಮಯ್ಯರಿಗೆ ಚುನಾವಣೆಗೆ ನಿಲ್ಲಲು ಜಾಗವಿಲ್ಲ ಎಂದು ಈಶ್ವರಪ್ಪ ಹೇಳ್ತಿದ್ದ. ಪಾಪ ಅವನಿಗೇ ಈಗ ಜಾಗ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದ ಸಿದ್ಧರಾಮಯ್ಯ, ಈಶ್ವರಪ್ಪ ನಿನಗೇನು ಮಾನ ಮರ್ಯಾದೆ ಇದ್ರೆ ಒಂದು ಕ್ಷಣ ನೀನು ಬಿಜೆಪಿಯಲ್ಲಿ ಇರಬಾರದು. ನಾವೇನು ಅವನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ ಎಂದು ಕುಹುಕವಾಡಿದ್ರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮೋದಿಯವರ 8 ವರ್ಷದ ಆಡಳಿತ ಹಾಗೂ ರಾಜ್ಯದ ಬಿಜೆಪಿ ಆಡಳಿತ ನೋಡಿದ್ದೇವೆ. ಸರಕಾರ ಬದಲಾವಣೆ ಮಾಡಲು ಇದು ಸಕಾಲವಾಗಿದ್ದು, ಕಾಂಗ್ರೆಸ್ ಸರಕಾರಕ್ಕಾಗಿ ದೇಶ್‌ಪಾಂಡೆಯವರನ್ನು ಗೆಲ್ಲಿಸಿ. ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತಿದ್ದು, ಕಾಂಗ್ರೆಸ್ ಬಂದರೆ ಜಾರಿ ಮಾಡುತ್ತೇವೆ.
ಇದರಿಂದ ಜನರಿಗೆ 5 ವರ್ಷಗಳಲ್ಲಿ 3 ಲಕ್ಷ ರೂ. ಲಾಭವಾಗುತ್ತದೆ ಎಂದರು. ಇದಕ್ಕೆ ದನಿಗೂಡಿಸಿದ ಹಳಿಯಾಳ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ.ದೇಶ್‌ಪಾಂಡೆ, 8 ಬಾರಿ ನನ್ನನ್ನು ಗೆಲ್ಲಿಸಿ ಕಳುಹಿಸಿದ್ರಿ, ನಿಮ್ಮ ಋಣ ಈ ಜನ್ಮದಲ್ಲಿ ಈಡೇರಿಸಲಾಗಲ್ಲ. ಕಾಂಗ್ರೆಸ್ ನೀಡುವ ಗ್ಯಾರಂಟಿ ಕಾರ್ಡ್‌ನ ಸೌಲಭ್ಯವನ್ನು ಹಕ್ಕಿನಿಂದ ಜನರು ಪಡೆಯಬಹುದಾಗಿದೆ.ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡ್ತೇನೆಂತಾ ಹೇಳಿದ ಮೋದಿ ಇಂದು 18 ಕೋಟಿ ಉದ್ಯೋಗ ಸೃಷ್ಠಿ ಮಾಡ್ಬೇಕಿತ್ತು. ಆದರೆ, 21 ಕೋಟಿ ದೇಶದ ಯುವಜನತೆ ಇಂದು ನಿರುದ್ಯೋಗಿಗಳಾಗಿದ್ದಾರೆ. ಮೋದಿ ಸರಕಾರಕ್ಕೆ ನಾಚಿಗೆಯಾಗಬೇಕು, ಇಂದು ಪ್ರತಿಯೊಂದರ ಬೆಲೆಯೂ ತುಟ್ಟಿಯಾಗಿದೆ. ಮನೆಯಿಲ್ಲದವರಿಗೆ ನಮ್ಮ ಸರಕಾರ ಬಂದ ಮೇಲೆ ಪ್ರಾಧಾನ್ಯತೆ ಮೇಲೆ ಮನೆಗಳನ್ನು ವಿತರಿಸ್ತೇವೆ ಎಂದ ದೇಶ್‌ಪಾಂಡೆ ಆಶ್ವಾಸನೆ ನೀಡಿದರು.
ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ರಕ್ಷಣೆ: ಶಾಸಕ ಎಚ್.ಕೆ.ಪಾಟೀಲ್
ಒಟ್ಟಿನಲ್ಲಿ ತ್ರಿಕೋಣ ಸ್ಪರ್ಧೆಯಿರುವ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮತ್ತೆ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಆರ್.ವಿ.ದೇಶ್‌ಪಾಂಡೆ ರಾಜ್ಯ ನಾಯಕರನ್ನು ಆಹ್ವಾನಿಸುವ ಮೂಲಕ ಮತಗಳನ್ನು ಒಗ್ಗೂಡಿಸತೊಡಗಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಭದ್ರಕೋಟೆಯನ್ನು ಮತ್ತೆ ಪಕ್ಷಕ್ಕಾಗಿ ಉಳಿಸಲು ಸರ್ವಪ್ರಯತ್ನಗಳನ್ನೂ ಕೂಡಾ ನಡೆಸುತ್ತಿದ್ದಾರೆ. ಈ ಬಾರಿ ದೇಶ್‌ಪಾಂಡೆ ಗೆದ್ದಲ್ಲಿ ಅಥವಾ ಸೋತಲ್ಲಿ ದಾಖಲೆಯಂತೂ ಖಂಡಿತ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.