ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ಗೆ ಗುಡ್‌ ಬೈ: ಸಿದ್ದು, ಡಿಕೆಶಿ ಭೇಟಿಯಾಗಿ ರಾಜೀನಾಮೆ ಘೋಷಣೆ

By Ramesh BFirst Published Sep 1, 2022, 1:46 PM IST
Highlights

ಮಾಜಿ ವಿಧಾನಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀ  ನಾರಾಯಣ ಅವರು ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಮತ್ತೋರ್ವ ಹಿರಿಯ ನಾಯಕ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಬೆಂಗಳೂರು, (ಸೆಪ್ಟೆಂಬರ್. 01): ಎಂ.ಡಿ.ಲಕ್ಷ್ಮೀ ನಾರಾಯಣ ಬೆನ್ನಲ್ಲೇ ಇದೀಗ ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ ತೊರೆಲು ತೀರ್ಮಾನಿಸಿದ್ದಾರೆ. ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮುದ್ದೇಹನುಮೇಗೌಡ ರಾಜೀನಾಮೆ ಕಾಂಗ್ರೆಸ್‌ಗೆ ಬಿಗ್‌ ಶಾಕ್ ಕೊಟ್ಟಿದೆ.

ರಾಜೀನಾಮೆ ಘೋಷಣೆಗೂ ಮುನ್ನ ಮುದ್ದಹನುಮೇಗೌಡ ಅವರು ಇಂದು(ಸೆಪ್ಟೆಂಬರ್ 01) ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಇಬ್ಬರು ನಾಯಕರ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುದ್ದಹನುಮೇಗೌಡ , 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಆಗುವುದು ಖಚಿತ ಎಂದು ಘೋಷಣೆ ಮಾಡುತ್ತಲ್ಲೇ ಇಂದು(ಗುರುವಾರ) ಸಂಜೆಯೊಳಗೆ ಕಾಂಗ್ರೆಸ್‌ಗೆ ರಾಜೀನಾಮೆ ಕೊಡುವೆ ಎಂದು ಸ್ಪಷ್ಟಪಡಿಸಿದರು.

ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ

ಪಕ್ಷದಿಂದ ಬಿಡುಗಡೆ ಮಾಡುವಂತೆ ಮನವಿ 
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದಿಂದ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ರೆ ಹೇಳಲಿ ಎಂದು ಕೇಳಿದ್ದೇನೆ. 1989ರಲ್ಲಿ ಕುಣಿಗಲ್ ಕ್ಷೇತ್ರಕ್ಕೆ ಬಿಫಾರಂ ಕೊಟ್ರು, ಬಳಿಕ ಇನ್ನೊಬ್ಬರಿಗೆ ಸಿ ಫಾರಂ ಕೊಟ್ರು. ಅಂದಿನಿಂದಲೂ ನನಗೆ ಹಲವು ಬಾರಿ ಸಮಸ್ಯೆ ಆಗಿದೆ ಎಂದು ಬೇಸರ ಹೊರಹಾಕಿದರು.

ನಾನು ಕಾಂಗ್ರೆಸ್‌ನಿಂದ ದೂರ ಸರಿದಿದ್ದೇನೆ. ಸಾಂಕೇತಿಕವಾಗಿ ಭೇಟಿ ಮಾಡಬೇಕಿತ್ತು. ಹಾಗಾಗಿ ಭೇಟಿ ಮಾಡಿದ್ದೇನೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಸುರ್ಜೇವಾಲಾ ದೂರವಾಣಿ ಮೂಲಕ ಮಾತನಾಡಿದ್ರು. ಇತ್ತೀಚಿಗೆ ನನ್ನ ಜತೆ ಮಾತನಾಡಿಲ್ಲ. ಇಂದು ಸಂಜೆಯೊಳಗೆ ಕಾಂಗ್ರೆಸ್‌ಗೆ ಅಧಿಕೃತವಾಗಿ ರಾಜೀನಾಮೆ ಕೊಡ್ತೀನಿ ಎಂದು ಹೇಳಿದರು.

ನಾನು ತುಮಕೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷನಾಗಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಹಲವು ಅವಕಾಶ ಕೊಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ ನಾನು ಪಕ್ಷಕ್ಕೆ ದುಡಿದಿದ್ದೇನೆ. ನಾಲ್ಕು ಬಾರಿ ನನಗೆ ಟಿಕೆಟ್ ತಪ್ಪಿತ್ತು. 2019ರ ಲೋಕಸಭಾ ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿಸಿದ್ರು. 2019ರಲ್ಲಿ ನನಗೆ ಟಿಕೆಟ್ ತಪ್ಪಿಸುವಲ್ಲಿ ಕೆಲವರ ಪಾತ್ರ ಇದೆ. ವೇಣುಗೋಪಾಲ್ ಅವರು ಆ ಸಮಯದಲ್ಲಿ ನನಗೆ ಕೆಲ ಭರವಸೆ ಕೊಟ್ಟಿದ್ರು. ಈಗ ಅವರು ಅದರ ಬಗ್ಗೆ ಮಾತನಾಡಿಲ್ಲ. ಇತ್ತಿಚೆಗೆ ನಡೆದ ರಾಜಕೀಯ ವಿದ್ಯಮಾನಗಳಿಂದ ಇಂತಹ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

2019ರಿಂದ ಅಂತರಕಾಯ್ದುಕೊಂಡಿದ್ದ ಮುದ್ದಹನುಮೇಗೌಡ
ಹೌದು...ಅಂದು ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಬದಲಾಗಿ  ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಲ್ಲಿ ದೇವೇಗೌಡ ಅವರನ್ನ ಕಣಕ್ಕಿಳಿಸಲಾಯ್ತು. ಅಂದಿನಿಂದ ಹಿರಿಯ ನಾಯಕ ಮುದ್ದಹನುಮೇಗೌಡ್ರು ಕಾಂಗ್ರೆಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿಯುವ ಮೂಲಕ ಅಸಮಾಧಾನ ಹೊರಹಾಕುತ್ತಾ ಬಂದಿದ್ದಾರೆ.

ಕುಣಿಗಲ್​ ಮೇಲೆ ಮುದ್ದಹನುಮೇಗೌಡ್ರ ಕಣ್ಣು
ಯೆಸ್‌...ಈ ಭಾರಿ ಕುಣಿಗಲ್​ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿರುವ ಮುದ್ದಹನುಮೇಗೌಡ್ರು, ಕಾಂಗ್ರೆಸ್‌ ಟಿಕೆಟ್​ ಕೇಳಿದ್ದರು. ಆದರೆ, ಟಿಕೆಟ್ ಭರವಸೆ ಸಿಕ್ಕಿಲ್ಲ. ಯಾಕಂದ್ರೆ ಹಾಲಿ ಶಾಸಕ ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ದೂರದ ಸಂಬಂಧಿಯಾಗಿದ್ದಾರೆ. ಇದರಿಂದ ಅವರಿಗೆ ಟಿಕೆಟ್ ತಪ್ಪಿಸುವುದು ಕಷ್ಟಸಾಧ್ಯ ಎಂದು ಪರೋಕ್ಷವಾಗಿ ಮುದ್ದಹನುಮೇಗೌಡ್ರಿಗೆ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಅವರು ಅಸಮಾಧಾನಗೊಂಡಿದ್ದು, ಇದೀಗ ಅಂತಿಮವಾಗಿ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳು ತೀರ್ಮಾನಿಸಿದ್ದಾರೆ.

ಮುಂದಿನ ನಡೆ ಏನು?
ಇದೀಗ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿರುವ ಮುದ್ದಹನುಮೇಗೌಡ ಅವರ ಮುಂದಿನ ರಾಜಕೀಯ ನಡೆ ಏನು ಎನ್ನುವುದು ಸಂಚನ ಮೂಡಿಸಿದೆ.. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ> ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಕೆಲ ಬಿಜೆಪಿ ನಾಯಕರು ಮುದ್ದಹನುಮೇಗೌಡ ಅವರನ್ನ ಸಂಪರ್ಕ ಮಾಡಿದ್ದು, ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನುವ ಸುದ್ದಿ ಇದೆ. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ್ರು ಬಿಜೆಪಿ ಸೇರಿದರೂ ಅಚ್ಚರಿಪಡಬೇಕಿಲ್ಲ.

click me!